ಶನಿವಾರ, ಮೇ 28, 2022
26 °C

ಕಾಂಗ್ರೆಸ್ ನಾಯಕರ ವಾಗ್ದಾಳಿ. ಬಿಜೆಪಿ ಸರ್ಕಾರ ರಾಜ್ಯಕ್ಕೆ ಕಳಂಕ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆಸುತ್ತಿರುವ ದುರಾಡಳಿತದಿಂದ ರಾಜ್ಯಕ್ಕೆ ಕಳಂಕ ತಟ್ಟಿದ್ದು, ಇದನ್ನು ನಿವಾರಿಸಲು ಕಾಂಗ್ರೆಸ್ ಕಾರ್ಯಕರ್ತರು ಪಣ ತೊಡಬೇಕು ಎಂದು ಪಕ್ಷದ ಮುಖಂಡರು ಕರೆ ನೀಡಿದರು.ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಭಾನುವಾರ ಆಯೋಜಿಸಿದ್ದ ವಿಭಾಗಮಟ್ಟದ ‘ನಾಡ ರಕ್ಷಣೆಗೆ ಬೃಹತ್ ಪ್ರತಿಭಟನಾ ಸಮಾವೇಶ’ದಲ್ಲಿ ಮಾತನಾಡಿದ ಹಿರಿಯ ನಾಯಕರು, ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಕಾರ್ಯಕರ್ತರು ಪಕ್ಷದ ಪರ ಕೆಲಸ ನಿರ್ವಹಿಸಲು ಸನ್ನದ್ಧರಾಗಿರಬೇಕು ಎಂದು ಕರೆ ನೀಡಿದರು.ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಮಾತನಾಡಿ, ಈ ಸಲ ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸುವ ಸಿಎಂ ಪ್ರತ್ಯೇಕ ಕೃಷಿ ಬಜೆಟ್ ಬಗ್ಗೆ ಮಾತನಾಡುತ್ತಿದ್ದಾರೆ. ಸರ್ಕಾರಕ್ಕೆ ಆದಾಯವೇ ಬರದ ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಬಜೆಟ್ ನೀಡಿದರೆ ಏನು ಲಾಭ? ಬಜೆಟ್‌ನಲ್ಲೇ ಹೆಚ್ಚಿನ ಹಣ ಒದಗಿಸುವ ಬದಲು ಇಂಥ ಅಗ್ಗದ ಜನಪ್ರಿಯತೆ ಗಳಿಸುವ ಆಸೆ ಏಕೆ? ಎಂದು ಪ್ರಶ್ನಿಸಿದರು.“ಸಾವಿರಾರು ಕೋಟಿ ರೂಪಾಯಿ ನುಂಗಿದ್ದು ಬಹಿರಂಗವಾದರೂ ಯಡಿಯೂರಪ್ಪ ಕುರ್ಚಿ ಬಿಡುವುದಿಲ್ಲ. ಕಾನೂನು ಕ್ರಮಕ್ಕೂ ಜಗ್ಗುತ್ತಿಲ್ಲ. ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಹೇಳಿದರೂ ಕೇಳುತ್ತಿಲ್ಲ. ಪಕ್ಷದ ಮರ್ಯಾದೆ ಹೋಗುತ್ತಿದೆ ಎಂದು ನಾಯಕರು ಅಳಲು ತೋಡಿಕೊಂಡರೂ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಯುತ್ತಿಲ್ಲ. ಎಂಥ ಮನುಷ್ಯ ಕಣ್ರೀ ಇವನು!” ಎಂದು ಪರಮೇಶ್ವರ ಉದ್ಗರಿಸಿದರು.ಹುಚ್ಚರ ಸಂತೆ’

ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಬಸವಣ್ಣನ ಹೆಸರು, ವಚನ ಹೇಳಿಕೊಂಡು ಯಡಿಯೂರಪ್ಪ ಆಡಳಿತ ನಡೆಸುತ್ತಿದ್ದಾರೆ. ಆದರೆ ಅವರು ಬಸವಣ್ಣ ಪ್ರತಿಪಾದಿಸಿದ ತತ್ತ್ವಕ್ಕೆ ಮಸಿ ಬಳಿಯುತ್ತಿದ್ದಾರೆ ಎಂದು ಕಿಡಿ ಕಾರಿದರು. “ತಮ್ಮ ವಿರುದ್ಧ ಮಾಯ, ಮಾಟ, ಮಂತ್ರ ಮಾಡಿದ್ದಾರೆ ಎಂದು ಯಡಿಯೂರಪ್ಪ ಅಳುತ್ತಿದ್ದಾರೆ. ಒಂದು ವೇಳೆ ಅಂಥದೊಂದು ಶಕ್ತಿ ಇದ್ದಿದ್ದರೆ, ಜಗತ್ತಿನಲ್ಲಿ ಯುದ್ಧಗಳೇ ಆಗುತ್ತಿರಲಿಲ್ಲ. ನಮ್ಮ ಬಡಜನರ ಹೊಟ್ಟೆ ತುಂಬಿಸಲು ಉದ್ಯೋಗ ಖಾತರಿ ಯೋಜನೆಯೇ ಬೇಕಾಗಿರಲಿಲ್ಲ. ಇಂಥ ಮಾತನಾಡುವ ಯಡಿಯೂರಪ್ಪ ಹುಚ್ಚರು. ಅವರ ಸರ್ಕಾರವೆಂದರೆ ಹುಚ್ಚರ ಸಂತೆ” ಎಂದು ಖರ್ಗೆ ವ್ಯಂಗ್ಯವಾಡಿದರು.‘ಎಲ್ಲಿಂದ ಬಂತು ದುಡ್ಡು?


ಬಳ್ಳಾರಿ ಜಿಲ್ಲೆಯ ಗಣಿ ಮಾಲೀಕರಾದ ರೆಡ್ಡಿ ಸಹೋದರರ ಮೇಲೆ ವಾಗ್ದಾಳಿ ನಡೆಸಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಹತ್ತು ವರ್ಷಗಳ ಹಿಂದೆ ಮೊಪೆಡ್ ಮೇಲೆ ಓಡಾಡುತ್ತಿದ್ದ ರೆಡ್ಡಿಗಳ ಬಳಿ ಈಗ 50,000 ಕೋಟಿ ರೂಪಾಯಿ ಆಸ್ತಿ ಇದೆ. ಇದೆಲ್ಲ ಹೇಗೆ ಬಂತು? ಇದರಲ್ಲಿ ಯಡಿಯೂರಪ್ಪ ಅವರಿಗೆ ಸಿಕ್ಕ ಪಾಲು ಎಷ್ಟು? ಎಂದು ಪ್ರಶ್ನೆಗಳ ಸುರಿಮಳೆಗೈದರು.ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷವಲ್ಲ; ಅದು ಜನಪರ ಚಳವಳಿ ನಡೆಸುವ ಪಕ್ಷ ಎಂದು ನಾಯಕ ಬಿ.ಕೆ.ಹರಿಪ್ರಸಾದ ಬಣ್ಣಿಸಿದರು. “ತಮಗೆ ಸಂಘದ ಕಾರ್ಯಕರ್ತರೇ ಆಸ್ತಿ ಎಂದು ಬಿಜೆಪಿ ಹೇಳುತ್ತದೆ. ಆದರೆ ಕಾಂಗ್ರೆಸ್‌ಗೆ ಸಾಮಾನ್ಯ ಜನರೇ ಆಸ್ತಿ” ಎಂದು ಅವರು ನುಡಿದರು. ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಮೂರು ವರ್ಷಗಳ ಆಡಳಿತದ ಅವಧಿಯಲ್ಲಿ 14 ಸಚಿವರು ರಾಜೀನಾಮೆ ನೀಡಿದ ಬಿಜೆಪಿ ಸರ್ಕಾರ ಜನರ ಒಲವು ಕಳೆದುಕೊಂಡಿದೆ. ಈ ಸರ್ಕಾರದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಹೋರಾಟಕ್ಕೆ ಎಲ್ಲೆಡೆ ಸ್ವಾಗತ ಸಿಗುತ್ತಿದೆ ಎಂದು ಹೇಳಿದರು.ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಆಸ್ಕರ್ ಫರ್ನಾಂಡಿಸ್, ಶಾಸಕ ಖಮರುಲ್ ಇಸ್ಲಾಂ ಮಾತನಾಡಿದರು. ಮಾಜಿ ಮಾಜಿ ಸಂಸದ ಇಕ್ಬಾಲ್ ಅಹಮದ್ ಸರಡಗಿ, ಶಾಸಕರಾದ ಶರಣಬಸಪ್ಪ ದರ್ಶನಾಪೂರ, ಡಾ. ಎ.ಬಿ.ಮಲಕರೆಡ್ಡಿ, ಮುಖಂಡರಾದ ಅಲ್ಲಂ ವೀರಭದ್ರಪ್ಪ ಇತರರು ಉಪಸ್ಥಿತರಿದ್ದರು.

ಶಾಸಕ ಅಲ್ಲಂಪ್ರಭು ಪಾಟೀಲ ನಿರೂಪಿಸಿದರು. ಚಂದ್ರಿಕಾ ಪರಮೇಶ್ವರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.