ಬುಧವಾರ, ನವೆಂಬರ್ 13, 2019
21 °C

ಕಾಂಗ್ರೆಸ್ ಪ್ರಚಾರಕ್ಕೆ ತಾರಾ ಮೆರುಗು

Published:
Updated:

ಬೆಂಗಳೂರು: ಪಕ್ಷದ ಮುಂಚೂಣಿ ರಾಷ್ಟ್ರೀಯ ನಾಯಕರು, ಕ್ರೀಡಾ ಮತ್ತು ಸಿನಿಮಾ ತಾರೆಯರನ್ನು ಬಳಸಿಕೊಂಡು ನಾಲ್ಕೂ ಕಂದಾಯ ವಿಭಾಗಗಳಲ್ಲಿ ನಾಲ್ಕು ಹಂತಗಳಲ್ಲಿ ಚುನಾವಣಾ ಪ್ರಚಾರ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಯುವ ಮತದಾರರನ್ನು ಸೆಳೆಯಲು ಇಂಟರ್ನೆಟ್, ಫೇಸ್‌ಬುಕ್, ಟ್ವಿಟರ್ ಮೊದಲಾದ ಸಾಮಾಜಿಕ ಮಾಧ್ಯಮಗಳ ಬಳಕೆಗೂ ಮುಂದಾಗಿದೆ.ಪ್ರದೇಶ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಮೊದಲ ಸಭೆ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆಯಿತು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ, `ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಇದಕ್ಕಾಗಿ ವಿವಿಧ ಹಂತಗಳ, ವಿವಿಧ ಮಾಧ್ಯಮಗಳ ಮೂಲಕ ಪಕ್ಷದ ಪರ ಪ್ರಚಾರ ನಡೆಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ' ಎಂದರು.ತಲಾ ಹತ್ತು ದಿನಗಳ ಕಾಲ ರಾಜ್ಯದಲ್ಲಿ ಪಕ್ಷದ ಪರ ಪ್ರಚಾರ ನಡೆಸುವಂತೆ ಪ್ರಧಾನಿ ಡಾ.ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೋರಲಾಗಿದೆ. ಅವರ ಸಮಯ ನಿಗದಿ ಆದ ಬಳಿಕ ಪ್ರಚಾರ ಕಾರ್ಯಕ್ರಮಗಳನ್ನು ನಿರ್ಧರಿಸಲಾಗುವುದು. ಕೇಂದ್ರ ಸಚಿವರು ಮತ್ತು ಪಕ್ಷದ ಪ್ರಮುಖ ನಾಯಕರನ್ನೂ ಪ್ರಚಾರಕ್ಕೆ ಆಹ್ವಾನಿಸಲಾಗುವುದು ಎಂದು ಹೇಳಿದರು.ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿ ಭಾಗಗಳಲ್ಲಿ ಪಕ್ಷದ ಪರ ಚುನಾವಣಾ ಪ್ರಚಾರ ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರಿಗೆ ಮನವಿ ಮಾಡಲಾಗುವುದು. ಆಂಧ್ರಪ್ರದೇಶದ ಗಡಿಭಾಗದ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ಆಂಧ್ರ ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ, ಕೇಂದ್ರ ಸಚಿವರಾದ ಚಿರಂಜೀವಿ, ಜೈಪಾಲರೆಡ್ಡಿ, ಡಿ.ಪುರಂದೇಶ್ವರಿ ಅವರನ್ನು ಆಹ್ವಾನಿಸಲಾಗುವುದು. ತಮಿಳುನಾಡಿಗೆ ಹೊಂದಿಕೊಂಡ ಗ್ರಾಮಗಳಲ್ಲಿ ಅಲ್ಲಿನ ಕಾಂಗ್ರೆಸ್ ಮುಖಂಡರು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.ಹಿಂದೆ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳು, ಕೈಗೆತ್ತಿಕೊಂಡ ಅಭಿವೃದ್ಧಿ ಕಾಮಗಾರಿಗಳು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅನುಷ್ಠಾನಕ್ಕೆ ತಂದ ಅಭಿವೃದ್ಧಿ ಯೋಜನೆಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುವುದು. ಯುವ ಮತದಾರರನ್ನು ತಲುಪಲು ಇಂಟರ್‌ನೆಟ್, ಫೇಸ್‌ಬುಕ್, ಟ್ವಿಟರ್ ಮೊದಲಾದ ನವ ಮಾಧ್ಯಮಗಳನ್ನೂ ಬಳಸಿಕೊಳ್ಳಲು ಯೋಚಿಸಲಾಗಿದೆ ಎಂದು ವಿವರಿಸಿದರು.ತಾರಾ ಪ್ರಚಾರಕರು: ಸಮಿತಿಯ ಸಹ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, `ಪಕ್ಷದ ಜೊತೆ ಗುರುತಿಸಿಕೊಂಡಿರುವ ಕ್ರೀಡಾ ತಾರೆಯರು, ಸಿನಿಮಾ ತಾರೆಯರು, ಸಾಮಾಜಿಕ ಹೋರಾಟಗಾರರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಯಾಚಿಸುತ್ತಾರೆ. ಅಂತಹ ಪ್ರಮುಖರ ಸಮಯವನ್ನು ಕೋರಲಾಗಿದೆ. ಅವರಿಂದ ಪ್ರತಿಕ್ರಿಯೆ ದೊರೆತ ಬಳಿಕ ಬಹಿರಂಗ ಸಭೆ, ಸಮಾವೇಶ ಮತ್ತಿತರ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು' ಎಂದರು.ಪಕ್ಷದ ಉಪಾಧ್ಯಕ್ಷರೂ ಆಗಿರುವ ನಟ ಅಂಬರೀಷ್, ನಟ ದರ್ಶನ್, ನಟಿಯರಾದ ರಮ್ಯಾ ಮತ್ತು ಭಾವನಾ ಅವರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಒಪ್ಪಿದ್ದಾರೆ. ಮನಮೋಹನ್ ಸಿಂಗ್, ಸೋನಿಯಾ ಮತ್ತು ರಾಹುಲ್ ಹಿಂದೆ ಭೇಟಿ ನೀಡದ ಪ್ರದೇಶಗಳಿಗೆ ಈ ಬಾರಿ ಭೇಟಿ ನೀಡುತ್ತಾರೆ. ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ಪ್ರಚಾರ ಕಾರ್ಯಕ್ರಮ ನಿಗದಿ ಮಾಡಲಾಗುವುದು ಎಂದು ಹೇಳಿದರು.ತೊಂದರೆ ಆಗದು: ಟಿಕೆಟ್ ಆಕಾಂಕ್ಷಿಗಳು ವರಿಷ್ಠರ ಮೇಲೆ ಒತ್ತಡ ಹೇರಲು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ಕುರಿತು ಗಮನ ಸೆಳೆದಾಗ, `ಕೆಲವರಿಗೆ ದುಃಖ ಆಗಿದೆ. ಅವರು ತಮ್ಮ ನೋವು, ಅಸಮಾಧಾನ ಹೊರಹಾಕಲು ಪ್ರತಿಭಟನೆ ನಡೆಸುತ್ತಿದ್ದಾರೆ. ಪಕ್ಷದ ಕಚೇರಿ ಅವರೆಲ್ಲರಿಗೂ ದೇವಾಲಯ ಇದ್ದಂತೆ. ಎಲ್ಲವೂ ಸರಿ ಆಗುತ್ತದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ಹಾನಿಯೂ ಆಗುವುದಿಲ್ಲ' ಎಂದರು.ಪ್ರಚಾರ ಸಮಿತಿಯಲ್ಲಿ 56 ಸದಸ್ಯರಿದ್ದಾರೆ. ಪಕ್ಷದ ಉಪಾಧ್ಯಕ್ಷ ಅಂಬರೀಷ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಉಪ ನಾಯಕ ದಯಾನಂದ, ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್, ಪರಿಷತ್ ಸದಸ್ಯ ವೀರಕುಮಾರ ಪಾಟೀಲ, ಕೇಂದ್ರದ ಮಾಜಿ ಸಚಿವ ಸಿದ್ದು ನ್ಯಾಮಗೌಡ, ಮಾಜಿ ಸಂಸದ ಐ.ಜಿ.ಸನದಿ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಹಸನಬ್ಬ, ಚಿತ್ರನಟಿ ಭಾವನಾ ಸೇರಿದಂತೆ 35 ಸದಸ್ಯರು ಸಭೆಯಲ್ಲಿ ಇದ್ದರು.ಪ್ರಮುಖರೆಲ್ಲ ದೂರ

ವೀರಣ್ಣ ಮತ್ತಿಕಟ್ಟಿ, ಡಿ.ಕೆ.ಶಿವಕುಮಾರ್ ಅವರನ್ನು ಹೊರತುಪಡಿಸಿ ಚುನಾವಣಾ ಪ್ರಚಾರ ಸಮಿತಿಯಲ್ಲಿ 56 ಸದಸ್ಯರಿದ್ದಾರೆ. ಆದರೆ, ಬುಧವಾರದ ಸಭೆಯಲ್ಲಿ ಪಕ್ಷದ ಪ್ರಮುಖ ನಾಯಕರೇ ಭಾಗವಹಿಸಿರಲಿಲ್ಲ. ಬಹುತೇಕ ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ದೊರಕಿಸಿಕೊಳ್ಳಲು ದೆಹಲಿಯಲ್ಲಿ ಠಿಕಾಣಿ ಹೂಡಿರುವುದು ಇದಕ್ಕೆ ಕಾರಣ.

ಕೇಂದ್ರದ ಮಾಜಿ ಸಚಿವರಾದ ಎಸ್.ಎಂ.ಕೃಷ್ಣ, ಸಿ.ಕೆ.ಜಾಫರ್ ಷರೀಫ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಆಸ್ಕರ್ ಫರ್ನಾಂಡಿಸ್, ಬಿ.ಕೆ.ಹರಿಪ್ರಸಾದ್, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಯಿಲಿ, ಕೆ.ರೆಹಮಾನ್ ಖಾನ್, ಕೆ.ಎಚ್.ಮುನಿಯಪ್ಪ ಸೇರಿದಂತೆ ಪ್ರಚಾರ ಸಮಿತಿ ಸದಸ್ಯರಾಗಿರುವ ಪ್ರಮುಖ ನಾಯಕರು ಸಭೆಯಿಂದ ದೂರ ಉಳಿದಿದ್ದರು. ಕೆಪಿಸಿಸಿ ಮೂಲಗಳ ಪ್ರಕಾರ, ಇವರಲ್ಲಿ ಬಹುತೇಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.ಮಾರ್ಚ್ 30ಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ ಮುಖಂಡರಲ್ಲಿ ಇತ್ತು. ಈ ಕಾರಣಕ್ಕಾಗಿಯೇ ಬುಧವಾರ ಪ್ರಚಾರ ಸಮಿತಿಯ ಸಭೆ ನಿಗದಿ ಮಾಡಲಾಗಿತ್ತು. ಆದರೆ, ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಇನ್ನೂ ಅಂತಿಮಗೊಳಿಸದೇ ಇರುವುದರಿಂದ ಬಹುತೇಕ ನಾಯಕರು ದೆಹಲಿಯಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)