ಕಾಂಗ್ರೆಸ್ ಪ್ರಚಾರ: ಭ್ರಷ್ಟಾಚಾರದ ದಾಳ

7

ಕಾಂಗ್ರೆಸ್ ಪ್ರಚಾರ: ಭ್ರಷ್ಟಾಚಾರದ ದಾಳ

Published:
Updated:
ಕಾಂಗ್ರೆಸ್ ಪ್ರಚಾರ: ಭ್ರಷ್ಟಾಚಾರದ ದಾಳ

ಬಳ್ಳಾರಿ: ಜಿದ್ದಾಜಿದ್ದಿ ಕಣವಾಗಿ ರೂಪುಗೊಂಡಿರುವ ಬಳ್ಳಾರಿ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೂ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಅಕ್ರಮ ಗಣಿಗಾರಿಕೆ ಹಾಗೂ ಬಿಜೆಪಿ ಮುಖಂಡರ ಭ್ರಷ್ಟಾಚಾರವನ್ನು ಮುಖ್ಯ ದಾಳ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಮಂಗಳವಾರ ಅಧಿಕೃತ ಚಾಲನೆ ನೀಡಿತು.2008ರ ಚುನಾವಣೆಯಲ್ಲಿ ಶ್ರೀರಾಮುಲು ವಿರುದ್ಧ ಸ್ಪರ್ಧಿಸಿದ್ದ ಬಿ.ರಾಮಪ್ರಸಾದ್ ಅವರೇ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಸಂಸದ ಅನಿಲ್ ಲಾಡ್, ಶಾಸಕರಾದ ಕೆ.ಸಿ.ಕೊಂಡಯ್ಯ, ಸಂತೋಷ್ ಲಾಡ್, ಈ. ತುಕಾರಾಂ, ಅಪ್ಪಾಜಿ ನಾಡಗೌಡ, ಎನ್.ವೈ. ಹನುಮಂತಪ್ಪ, ಮಾಜಿ ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಶಂಕರರೆಡ್ಡಿ, ಭೂಪತಿ, ಶಿವಮೂರ್ತಿ ನಾಯ್ಕ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ರವೀಂದ್ರ, ಜಿ.ಎಸ್. ಆಂಜಿನೇಯುಲು, ಬೊಮ್ಮಣ್ಣ, ನಿರಂಜನನಾಯ್ಡು, ಕಮಲಾ ಮರಿಸ್ವಾಮಿ, ಮಂಜುಳಾ ನಾಯ್ಡು, ಕಮಲಮ್ಮ ಮತ್ತಿತರರು ಭಾಗವಹಿಸಿ ಪಕ್ಷದ ಬಲಾಬಲ ಪ್ರದರ್ಶಿಸಿದರು.ಮತದಾರರಿಗೆ ಶ್ರೀರಾಮುಲು, ಪಿ.ಗಾದಿಲಿಂಗಪ್ಪ ಬೇರೆ ಬೇರೆ ಆಗಿರಬಹುದು. ಕಾಂಗ್ರೆಸ್‌ಗೆ ಮಾತ್ರ ಅವರಿಬ್ಬರೂ ಒಂದೇ. ಬಿಜೆಪಿಯಿಂದ ಒಂದು ಕಾಲನ್ನು ಮಾತ್ರ ಹೊರಗಟ್ಟಿರುವ ಶ್ರೀರಾಮುಲು ಅವರಿಗೆ ಶಾಸಕರೂ. ಸಂಸದರೂ ಬಹಿರಂಗ ಬೆಂಬಲ ನೀಡಿದ್ದು, ಗೆದ್ದ ನಂತರ ಮತ್ತೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು, ಮಂತ್ರಿ ಪದವಿ ನೀಡಲಾಗುತ್ತಿದೆ ಎಂಬ ಗುಮಾನಿ ಈಗಾಗಲೇ ರಾಜ್ಯದಾದ್ಯಂತ ಹರಡಿದೆ.

 

ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಶಾಸಕರು, ಸಂಸದರಿಗೆ ಒಂದು ಎಚ್ಚರಿಕೆ ನೋಟಿಸ್ ನೀಡುವುದಕ್ಕೂ ಈಶ್ವರಪ್ಪ ಅವರಿಗೆ ತಾಕತ್ತಿಲ್ಲ ಎಂದು ಪಕ್ಷದ ಕಚೇರಿಯ ಬಳಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಟೀಕಿಸಿದರು.ಸಾಯದೇ ಚುನಾವಣೆ: ಐದು  ವರ್ಷಗಳಿಗೊಮ್ಮ ಮಾತ್ರ ಚುನಾವಣೆ ನಡೆಯುತ್ತದೆ ಎಂಬ ಕಲ್ಪನೆ ಮೊದಲು ಜನರಲ್ಲಿತ್ತು. ಒಂದೊಮ್ಮೆ ಅಭ್ಯರ್ಥಿ ಸತ್ತರೆ, ಅಥವಾ ಆತನಿಗೆ ಹುಚ್ಚು ಹಿಡಿದರೆ ಮಾತ್ರ ಉಪ ಚುನಾವಣೆ ನಡೆಯುತ್ತಿತ್ತು. ಆದರೆ, ಬಳ್ಳಾರಿಯಲ್ಲಿ ಶಾಸಕ ಸಾಯದೆ, ಹುಚ್ಚೂ ಹಿಡಿಯದೆ ಉಪ ಚುನಾವಣೆ ನಡೆಯುತ್ತಿದೆ. ಇಲ್ಲಿ ಮಾತ್ರವಲ್ಲ, ರಾಜ್ಯದ ಅನೇಕ ಕಡೆ ಈ ರೀತಿ ನಡೆದಿದೆ. ಇದಕ್ಕೆ ಬಿಜೆಪಿಯ ಭ್ರಷ್ಟ ಆಡಳಿತವೇ ಕಾರಣ ಎಂದು ಅವರು ದೂರಿದರು.ಶ್ರೀರಾಮುಲು ಅವರು ಪದೇಪದೇ ಸ್ವಾಭಿಮಾನ, ಸ್ವಾಭಿಮಾನ ಎಂದು ಹೇಳುತ್ತಿರುವುದರಿಂದ ಶಬ್ದಕೋಶದಲ್ಲಿ ~ಸ್ವಾಭಿಮಾನ~ ಎಂಬ ಪದದ ಅರ್ಥವನ್ನು ಹುಡುಕುವಂತಾಗಿದೆ ಎಂದು ಅವರು ಮೂದಲಿಸಿದರು.ಮತದಾರರು ಕಾಂಗ್ರೆಸ್ ಬೆಂಬಲಿಸಲು ತುದಿಗಾಲಲ್ಲಿ ನಿಂತಿದ್ದು, ಪಕ್ಷದ ಮುಖಂಡರು ಭಿನ್ನಾಭಿಪ್ರಾಯ ಬಿಟ್ಟು ಪ್ರತಿ ಗ್ರಾಮ, ವಾರ್ಡ್‌ಗೆ ತೆರಳಿ ಪಕ್ಷದ ಸಾಧನೆಯನ್ನು ಸಾರುವ ಮೂಲಕ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ, ಇಡೀ ದೇಶಕ್ಕೆ ಉತ್ತಮ ಸಂದೇಶ ನೀಡುವಂತಾಗಬೇಕು ಎಂದು ಅವರು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry