ಬುಧವಾರ, ಜನವರಿ 22, 2020
28 °C

ಕಾಂಗ್ರೆಸ್ ಪ್ರಶ್ನೆ: ಪರಿಸರ ಸೂಕ್ಷ್ಮ ವಲಯ ಯಾರ ಮಾತು ನಂಬಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರ್ಪಡೆ ಕುರಿತಂತೆ ಸಂವಿಧಾನ ಬದ್ಧವಾಗಿ ರಚಿತವಾಗಿರುವ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷರು ನೀಡಿರುವ ಹೇಳಿಕೆಯನ್ನು ಜನರು ನಂಬಬೇಕಾ ಅಥವಾ ಬಿಜೆಪಿ ಪಕ್ಷದ ವಕ್ತಾರರು ನೀಡಿರುವ ಹೇಳಿಕೆಯನ್ನು ನಂಬಬೇಕಾ? ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಟಿ. ಪ್ರದೀಪ್ ಪ್ರಶ್ನಿಸಿದ್ದಾರೆ.ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಜಿಲ್ಲೆಯನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರ್ಪಡಿಸುವ ಹುನ್ನಾರದಲ್ಲಿ ತೊಡಗಿರುವಾಗ ಆಡಳಿತರೂಢ ಬಿಜೆಪಿ ಪಕ್ಷದವರೇ ಆದ ಅನಂತ ಹೆಗಡೆ ಅಶೀಸರ ಹಾಗೂ ಮನುಮುತ್ತಪ್ಪ ಅವರು ವಿಭಿನ್ನ ಹೇಳಿಕೆ ನೀಡುವ ಮೂಲಕ ಜನರನ್ನು ಗೊಂದಲದಲ್ಲಿ ಸಿಲುಕಿಸುತ್ತಿದ್ದಾರೆ. ಜನರು ಯಾರ ಮಾತನ್ನು ನಂಬಬೇಕು ಎಂದು ಅವರು ಪ್ರಶ್ನಿಸಿದರು.ಈ ಯೋಜನೆ ಯಾವಾಗ ಆರಂಭವಾಯಿತು? ಯಾರ ಆಡಳಿತದಲ್ಲಿ ಎನ್ನುವುದು ಮುಖ್ಯವಲ್ಲ. ಇದನ್ನು ತಡೆಯುವುದು ಹೇಗೆ ಎನ್ನುವುದರ ಬಗ್ಗೆ ತೀರ್ಮಾನವಾಗಬೇಕಾಗಿದೆ. ಇಲ್ಲಿ ಪಕ್ಷಗಳು ಮುಖ್ಯವಲ್ಲ. ರಾಜಕೀಯ ರಹಿತವಾಗಿ ಎಲ್ಲ ನಾಯಕರು ಒಗ್ಗೂಡಿ ವಿರೋಧಿಸಬೇಕಾಗಿದೆ ಎಂದು ಹೇಳಿದರು.ಇತ್ತೀಚೆಗೆ ಅಶೀಸರ ಅವರು ನೀಡಿರುವ ಹೇಳಿಕೆಗಳನ್ನು ಗಮನಿಸಿದರೆ, ರಾಜ್ಯ ಸರ್ಕಾರದ ಉನ್ನತ ಮಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯಕ್ಕೆ ಸೇರ್ಪಡೆ ಮಾಡಲು ಹುನ್ನಾರ ನಡೆದಿದೆ. ಇದನ್ನು ಅರಿತಿರುವ ಶಾಸಕ ಅಪ್ಪಚ್ಚು ರಂಜನ್ ಅವರು ಯೋಜನೆಗೆ ತಡೆಯೊಡ್ಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.ಜಿಲ್ಲೆಗೆ ಮಾರಕವಾಗುವ ಎಲ್ಲ ಯೋಜನೆಗಳಿಗೂ ಸಂಸದ ಎಚ್.ವಿಶ್ವನಾಥ್ ವಿರೋಧ ವ್ಯಕ್ತಪಡಿಸುತ್ತಾರೆ. ಅದರ ವಿರುದ್ಧ ಹೋರಾಡಲು ಸಿದ್ಧರಿದ್ದಾರೆ. ಜಿಲ್ಲೆಯ ಜನತೆ ಪರವಾಗಿ ನಿಲ್ಲುವುದಾಗಿ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಪ್ರದೀಪ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಪಕ್ಷದ ಕಾರ್ಯದರ್ಶಿ ವಿ.ಪಿ. ಸುರೇಶ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)