ಶುಕ್ರವಾರ, ನವೆಂಬರ್ 22, 2019
26 °C
ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನ

ಕಾಂಗ್ರೆಸ್ ಬಂಡಾಯ ಜೋರು

Published:
Updated:

ಬೆಂಗಳೂರು: ನಾಮಪತ್ರ ಸಲ್ಲಿಕೆಯ ಕೊನೆ ದಿನ (ಬುಧವಾರ) ಸಮೀಪಿಸಿರುವ ಹೊತ್ತಿನಲ್ಲೇ ಕಾಂಗ್ರೆಸ್‌ನಲ್ಲಿ ಬಂಡಾಯ ಭುಗಿಲೆದ್ದಿರುವ ಕ್ಷೇತ್ರಗಳ ಸಂಖ್ಯೆ ಹತ್ತನ್ನು ದಾಟಿದೆ. ಮಂಡ್ಯದಲ್ಲಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಅಂಬರೀಷ್ ವಿರುದ್ಧ ತಿರುಗಿಬಿದ್ದಿದ್ದಾರೆ. ಬಹುತೇಕ ಕಡೆಗಳಲ್ಲಿ ಬಂಡಾಯಗಾರರು ಪಕ್ಷೇತರರಾಗಿ ಕಣಕ್ಕಿಳಿಯಲು ಮುಂದಾಗಿರುವ ಬೆಳವಣಿಗೆಯಿಂದ ಕಾಂಗ್ರೆಸ್ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.ಶ್ರೀರಂಗಪಟ್ಟಣದಲ್ಲಿ ಎ.ಎಸ್.ರವೀಂದ್ರ ಅವರಿಗೆ ಎರಡನೆ ಪಟ್ಟಿಯಲ್ಲಿ ಟಿಕೆಟ್ ಘೋಷಿಸಿದ್ದನ್ನು ವಿರೋಧಿಸಿ ಅಂಬರೀಷ್ ಬಂಡಾಯ ಎದ್ದಿದ್ದರು. ಹಿಂದಿನ ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದ್ದ ರವೀಂದ್ರ ಅವರಿಗೆ ಟಿಕೆಟ್ ನೀಡಬಾರದು ಎಂದು ಪಟ್ಟು ಹಿಡಿದಿದ್ದರು. ಅವರ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಹೈಕಮಾಂಡ್, ರವೀಂದ್ರ ಬದಲಿಗೆ ಎಲ್. ಲಿಂಗರಾಜು ಅವರಿಗೆ ಟಿಕೆಟ್ ನೀಡುವುದಾಗಿ ಸೋಮವಾರ ಮಧ್ಯರಾತ್ರಿ ಪ್ರಕಟಿಸಿತ್ತು.ಒಂದು ಸುತ್ತಿನ ಬಿಕ್ಕಟ್ಟು ಪರಿಹಾರ ಮಾಡಿ ಕಾಂಗ್ರೆಸ್ ನಾಯಕರು ನಿಟ್ಟುಸಿರು ಬಿಡುತ್ತಿರುವಾಗಲೇ ಮಂಗಳವಾರ ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಅಂಬರೀಷ್ ವಿರುದ್ಧ ಬಂಡೆದ್ದಿದ್ದಾರೆ. ಟಿಕೆಟ್ ನಿರಾಕರಣೆಗೆ ಒಳಗಾಗಿರುವ ರವೀಂದ್ರ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಮುಖರು ಪ್ರಚಾರದಿಂದ ದೂರ ಉಳಿಯಲು ಮುಂದಾಗಿದ್ದಾರೆ.ಬಳ್ಳಾರಿ ಬೇಗುದಿ: ಬಳ್ಳಾರಿ ನಗರ ಕ್ಷೇತ್ರದಲ್ಲಿ ಅನಿಲ್ ಲಾಡ್ ಅವರಿಗೆ ಟಿಕೆಟ್ ನೀಡಿರುವುದರ ವಿರುದ್ಧ ಬಂಡಾಯ ಮತ್ತಷ್ಟು ಬಲವಾಗುತ್ತಿದೆ. ಅಲ್ಲಿನ ಮಹಾನಗರ ಪಾಲಿಕೆ 25 ಮಂದಿ ಸದಸ್ಯರು ಬಂಡಾಯದ ಕಹಳೆ ಮೊಳಗಿಸಿರುವ ದಿವಾಕರ ಬಾಬು ಬೆಂಬಲಕ್ಕೆ ನಿಂತಿದ್ದಾರೆ. ದಿವಾಕರ ಬಾಬು ಅವರಿಗೆ ಟಿಕೆಟ್ ನೀಡದಿದ್ದಲ್ಲಿ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ.`ಗಣಿ ಮಾಫಿಯಾದಲ್ಲಿ ಇರುವವರಿಗೆ ಟಿಕೆಟ್ ನೀಡಲೇಬಾರದು. ಹಾಗೊಂದು ವೇಳೆ ಪಕ್ಷ ಅಂತಹ ನಿರ್ಧಾರ ಕೈಗೊಂಡಲ್ಲಿ ಗಣಿ ಮಾಫಿಯಾದವರು ಕಣಕ್ಕಿಳಿದ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ನಾವು ಭಾಗವಹಿಸುವುದಿಲ್ಲ' ಎಂದು ದಿವಾಕರ ಬಾಬು ಘೋಷಿಸಿದ್ದಾರೆ. ಇಕ್ಬಾಲ್ ಮಹಮ್ಮದ್ ಹೊತ್ತೂರು, ಪಂಪಾಪತಿ ಮತ್ತಿತರರೂ ಅನಿಲ್ ಲಾಡ್‌ಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿದ್ದಾರೆ.ಪಕ್ಷೇತರರಾಗಿ ರೇವಣ್ಣ?: ಹೆಬ್ಬಾಳ ಕ್ಷೇತ್ರದಲ್ಲಿ ಟಿಕೆಟ್ ವಂಚಿತರಾಗಿರುವ ಎಚ್.ಎಂ.ರೇವಣ್ಣ ಅವರನ್ನು ಸಮಾಧಾನಪಡಿಸಲು ಕಾಂಗ್ರೆಸ್ ನಾಯಕರು ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಮಂಗಳವಾರವೂ ಖಾಸಗಿ ಹೋಟೆಲ್‌ನಲ್ಲಿ ಬೆಂಬಲಿಗರ ಸಭೆ ನಡೆಸಿದ ಅವರು, ಜಾಫರ್ ಷರೀಫ್, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.ಹೆಬ್ಬಾಳ ಕ್ಷೇತ್ರದಲ್ಲೇ ಪಕ್ಷೇತರರಾಗಿ ಕಣಕ್ಕಿಳಿಯುವ ಕುರಿತೂ ಬೆಂಬಲಿಗರ ಜೊತೆ ಸಮಾಲೋಚನೆ ನಡೆಸಿದರು. ಬಂಡಾಯ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೆ.ಆರ್.ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಮಾಜಿ ಸಚಿವ ಎ.ಕೃಷ್ಣಪ್ಪ ಜೆಡಿಎಸ್ ಸೇರಿದ್ದಾರೆ. ಸೋಮವಾರ ರಾತ್ರಿ ಅವರ ಮನೆಗೆ ಭೇಟಿ ನೀಡಿದ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ, ಪಕ್ಷಕ್ಕೆ ಬರಮಾಡಿಕೊಂಡರು. ಹಿರಿಯೂರು ಅಭ್ಯರ್ಥಿ ಎಂದೂ ಘೋಷಿಸಿದರು. ಬುಧವಾರ ಬೆಳಿಗ್ಗೆ ಅವರು ಹಿರಿಯೂರಿನಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಾರೆ.ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಗೌಡ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಸುಷ್ಮಾ ರಾಜಗೋಪಾಲ ರೆಡ್ಡಿ ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಕಾರ್ಯದರ್ಶಿ ಜಿ.ಪದ್ಮಾವತಿ ಪಕ್ಷೇತರರಾಗಿ ರಾಜಾಜಿನಗರ ಕ್ಷೇತ್ರದಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಮತ್ತಷ್ಟು ಹೆಚ್ಚಾಗುವ ಲಕ್ಷಣಗಳಿವೆ.ಕಚೇರಿ ಧ್ವಂಸ:

ಚಿಕ್ಕಬಳ್ಳಾಪುರದಲ್ಲಿ ಡಾ.ಸುಧಾಕರ್‌ಗೆ ಟಿಕೆಟ್ ನೀಡಿರುವುದನ್ನು ಮತ್ತೊಬ್ಬ ಆಕಾಂಕ್ಷಿ ಆಂಜನಪ್ಪ ವಿರೋಧಿಸಿದ್ದಾರೆ. ಮಂಗಳವಾರ ಅವರ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಒಳಕ್ಕೆ ನುಗ್ಗಿ ಕಚೇರಿಯ ಪೀಠೋಪಕರಣಗಳನ್ನೂ ಧ್ವಂಸ ಮಾಡಿದ್ದಾರೆ. ಆಂಜನಪ್ಪ ಅವರು ಪಕ್ಷದ ಹಿರಿಯ ನಾಯಕರಾದ ಎಸ್.ಎಂ.ಕೃಷ್ಣ, ಎಂ.ವೀರಪ್ಪಮೊಯಿಲಿ ಮತ್ತಿತರರ ಮೇಲೆ ವಾಗ್ದಾಳಿ ನಡೆಸಿದ್ದಾರೆ.ಮುಳಬಾಗಿಲು ಕ್ಷೇತ್ರದಲ್ಲಿ ಹಾಲಿ ಶಾಸಕ ಅಮರೇಶ್ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಒಂದು ಗುಂಪು ಮಂಗಳವಾರ ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದೆ. ರಾಜ್ಯ ಕಾಂಗ್ರೆಸ್ ಪ್ರಮುಖರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಜಿಎಫ್‌ನಲ್ಲಿ ಕೆ.ಎಚ್.ಮುನಿಯಪ್ಪ ಪುತ್ರಿ ರೂಪಕಲಾ ಅವರಿಗೆ ಟಿಕೆಟ್ ನಿರಾಕರಿಸಿರುವುದರ ವಿರುದ್ಧ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ರೂಪಕಲಾ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವುದಾಗಿಯೂ ಘೋಷಿಸಿದ್ದಾರೆ. ಭದ್ರಾವತಿಯಲ್ಲಿ ಟಿಕೆಟ್ ವಂಚಿತರಾಗಿರುವ ಹಾಲಿ ಶಾಸಕ ಬಿ.ಕೆ.ಸಂಗಮೇಶ್ವರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಶಾಸಕರಿಗೆ ಟಿಕೆಟ್ ನಿರಾಕರಿಸಿರುವುದನ್ನು ವಿರೋಧಿಸಿದ ಬೆಂಬಲಿಗನೊಬ್ಬ ಅವರ ಮನೆಯ ಮಹಡಿಯಿಂದ ಜಿಗಿದು ಆತ್ಮಾಹುತಿ ಮಾಡಿಕೊಳ್ಳಲು ಪ್ರಯತ್ನಿಸಿದ ಘಟನೆಯೂ ಭದ್ರಾವತಿಯಲ್ಲಿ ನಡೆದಿದೆ.ಬಾದಾಮಿಯಲ್ಲಿ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ದೇವರಾಜ್ ಪಾಟೀಲ್ ಬದಲಿಗೆ ಬಿ.ಬಿ.ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ನೀಡಿರುವುದನ್ನು ಪಾಟೀಲ್ ಬೆಂಬಲಿಗರು ವಿರೋಧಿಸಿದ್ದಾರೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಮಲ್ಲಿಕಾರ್ಜುನ ಅವರಿಗೇ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)