ಗುರುವಾರ , ಆಗಸ್ಟ್ 22, 2019
27 °C

ಕಾಂಗ್ರೆಸ್, ಬಿಜೆಪಿ-ಕೆಜೆಪಿಯಿಂದ ನಾಮಪತ್ರ ಸಲ್ಲಿಕೆ

Published:
Updated:

ಮೈಸೂರು: ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಆಡಳಿತಾರೂಢ ಕಾಂಗ್ರೆಸ್, ಬಿಜೆಪಿ ಮತ್ತು ಕೆಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.ಮೈಸೂರು ಜಿಲ್ಲಾ (ಗ್ರಾಮಾಂತರ) ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಧರ್ಮಸೇನಾ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಯಶಸ್ವಿನಿ ಸೋಮಶೇಖರ್, ಕೆಜೆಪಿ ನಗರಾಧ್ಯಕ್ಷ ಯು.ಎಸ್. ಶೇಖರ್ ಅವರು ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಿದರು.ಧರ್ಮಸೇನಾ ಅವರು ಸಯ್ಯಾಜಿರಾವ್ ರಸ್ತೆಯ ಪಕ್ಷದ ಕಚೇರಿಯಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿ ಹೆಚ್ಚುವರಿ ಜಿಲ್ಲಾಧಿಕಾರಿಯೂ ಆದ ಸಹಾಯಕ ಚುನಾವಣಾಧಿಕಾರಿ ನಾಗನಾಯಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಶಾಸಕರಾದ ವಾಸು, ಎಚ್.ಪಿ. ಮಂಜುನಾಥ್, ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸಿ. ದಾಸೇಗೌಡ, ಮಾಜಿ ಸಂಸದ ಸಿದ್ದರಾಜು ಜೊತೆಯಲ್ಲಿ ಇದ್ದರು.ಯಶಸ್ವಿನಿ ಸೋಮಶೇಖರ್ ಅವರು ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿ ನಾಗನಾಯಕ್ ಅವರಿಗೆ ನಾಮಪತ್ರ ಸಲ್ಲಿಸಿದರು.ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಮಾಜಿ ಸದಸ್ಯ ತೋಂಟದಾರ್ಯ, ಮಾಜಿ ಸಚಿವ ಎಸ್.ಎ. ರಾಮದಾಸ್, ಮುಖಂಡ ಎ.ಆರ್. ಕೃಷ್ಣಮೂರ್ತಿ, `ಮುಡಾ' ಮಾಜಿ ಅಧ್ಯಕ್ಷ ಎಲ್. ನಾಗೇಂದ್ರ, ವಸ್ತುಪ್ರದರ್ಶನ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಹೇಂದ್ರ ಸೇರಿದಂತೆ ಇತರರು ಇದ್ದರು.ಕೆಜೆಪಿಯ ಶೇಖರ್ ಅವರು ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಪಾರ ಬೆಂಬಲಿಗರು ಮತ್ತು ಮುಖಂಡರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.ಮಾಜಿ ಶಾಸಕ ಬಾಲರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಚಾಮರಾಜನಗರ ಜಿಲ್ಲಾ ಪಂಚಾಯತ್ ಸದಸ್ಯ ಮಹದೇವಯ್ಯ, ಕೆಜೆಪಿ ಕಾರ್ಯದರ್ಶಿ ಕಾ.ಪು. ಸಿದ್ದಲಿಂಗಸ್ವಾಮಿ ಸೇರಿದಂತೆ ಇತರೆ ಬೆಂಬಲಿಗರು ಇದ್ದರು.ಜೆಡಿಎಸ್‌ನಿಂದ ಯಾವ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಲಿಲ್ಲ. ಕಳೆದ ಬಾರಿ ಬಿಜೆಪಿ ಮತ್ತು ಜೆಡಿಎಸ್ ತಲಾ ಒಂದು ಸ್ಥಾನ ಪಡೆದಿದ್ದವು. ಈ ಬಾರಿ ಜೆಡಿಎಸ್ ಯಾವುದೇ ನಾಮಪತ್ರ ಸಲ್ಲಿಸಿಲ್ಲ.ಪಕ್ಷೇತರ ಅಭ್ಯರ್ಥಿಗಳಾಗಿ ಗೌಸಿಯನಗರದ ಅಯೂಬ್ ಖಾನ್, ಗೌರಿಶಂಕರನಗರದ ಎಸ್.ಪಿ. ಮಂಜುನಾಥ್ ಉಮೇದುವಾರಿಕೆ ಸಲ್ಲಿಸಿದ್ದಾರೆ. ಒಟ್ಟು 5 ನಾಮಪತ್ರಗಳು ಸಲ್ಲಿಕೆಯಾಗಿವೆ. ಆ. 6 (ಮಂಗಳವಾರ) ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಆ. 8 ಕೊನೆ ದಿನ. ಆ. 22ರಂದು ಚುನಾವಣೆ ನಡೆಯಲಿದೆ.

Post Comments (+)