ಕಾಂಗ್ರೆಸ್-ಬಿಜೆಪಿ ನಡುವೆ ಜಂಗಿಕುಸ್ತಿ!

7

ಕಾಂಗ್ರೆಸ್-ಬಿಜೆಪಿ ನಡುವೆ ಜಂಗಿಕುಸ್ತಿ!

Published:
Updated:

ಕಾಳಗಿ: ಸಮೀಪದ ಗೋಟೂರ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಮೊದಲ ಹಂತದ ಅಧಿಕಾರ ಅವಧಿ ಡಿ.28ಕ್ಕೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಇಂದು ಡಿ.27ರ ಗುರುವಾರ ಎರಡನೇ ಅವಧಿಯ ಚುನಾವಣೆ ನಡೆಯಲಿದೆ.ಈ ಹಿನ್ನೆಲೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಸದಸ್ಯರ ನಡುವೆ ಭಾರಿ ಪೈಪೋಟಿ ಶುರುವಾಗಿದ್ದು, ಗೆಲ್ಲುವವರು ಯಾರು? ಎಂಬ ಪ್ರಶ್ನೆಗೆ ಇಂದಿನ ಚುನಾವಣೆಯ ಫಲಿತಾಂಶವೇ ಸ್ಪಷ್ಟ ಚಿತ್ರಣ ನೀಡಲಿದೆ.ಗೋಟೂರ, ಕಣಸೂರ, ಅಶೋಕ ನಗರ, ಸುಗೂರ ಮತ್ತು ಎರಡು ತಾಂಡಾಗಳು ಒಳಗೊಂಡಿರುವ ಕೇಂದ್ರ ಸ್ಥಾನ ಗೋಟೂರ ಗ್ರಾಮ ಪಂಚಾಯತಿಗೆ 9ಜನ ಪುರುಷರು ಹಾಗೂ 7ಜನ ಮಹಿಳೆಯರು ಹೀಗೆ ಒಟ್ಟು 16ಜನರ ಸದಸ್ಯ ಬಲವಿದೆ.ಈ ನಡುವೆ ಕಳೆದ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲ ಹೊಂದಿದ್ದರೂ ಕುರ್ಚಿಯ ಚುಕ್ಕಾಣಿ ಹಿಡಿಯುವಲ್ಲಿ ಮಾತ್ರ ಬಿಜೆಪಿ ಯಶಸ್ವಿಯಾಗಿದೆ. ಈ ಮೂಲಕ ರೇಣುಕಾ ಶಂಭುಲಿಂಗ ಅಧ್ಯಕ್ಷೆಯಾಗಿ, ಶರಣಬಸಪ್ಪ ಮಠಪತಿಗೆ ಉಪಾಧ್ಯಕ್ಷನ್ನಾಗಿ ಮಾಡಿ ಈತನಕ ಬಿಜೆಪಿ ನೇತೃತ್ವದ ಆಡಳಿತ ನಡೆದಿದೆ ಎಂದು ಹೇಳಲಾಗಿದೆ.ಹೀಗೆ ಮೊದಲ ಅವಧಿ ಮುಗಿಯುತ್ತಿದ್ದಂತೆ ಚುನಾವಣಾ ಆಯೋಗ ಎರಡನೇಯ ಅವಧಿಯ ಅಧಿಸೂಚನೆ ಪ್ರಕಟಗೊಳಿಸಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಹುದ್ದೆಯನ್ನು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರಿಸಿ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.ಹೀಗಾಗಿ ಇಂದು ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತದ ಪರಮೇಶ್ವರರೆಡ್ಡಿ ಭಾವಿ, ಬಿಜೆಪಿ ಗುಂಪಿನ ಶಿವಶರಣರೆಡ್ಡಿ ಮಾಲಿಪಾಟೀಲ ಪ್ರಬಲ ಆಕಾಂಕ್ಷಿ ಅಭ್ಯರ್ಥಿಗಳಾಗಿದ್ದಾರೆ ಎನ್ನಲಾಗಿದೆ. ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಯಾರು ಕಾಣದಿದ್ದರಿಂದ ಕಾಂಗ್ರೆಸ್‌ನ ಏಕೈಕ ಅಭ್ಯರ್ಥಿ ಸುಮಿತ್ರಾಬಾಯಿ ಮಾಪಣ್ಣ ಸಾಗರ ಸ್ಪರ್ಧಿಸಿ ಗೆಲುವು ಸಾಧಿಸುವುದು ಬಹುತೇಕ ಖಚಿತವೆಂದು ಹೇಳಲಾಗುತ್ತಿದೆ.ಹೇಗಾದರೂ ಮಾಡಿ ಬಿಜೆಪಿ ಅಧಿಕಾರ ಕಿತ್ತಿಕೊಳ್ಳಲು ಹವಣಿಸುತ್ತಿರುವ ಕಾಂಗ್ರೆಸ್ ಮುಖಂಡರು, ಈ ಸಲ ಕಾಂಗ್ರೆಸ್ ಆಡಳಿತದ ಛಾಪು ಮೂಡಿಸಲೇಬೇಕೆಂಬ ಪಣತೊಟ್ಟು ತಮ್ಮ ಸಂಖ್ಯೆ ಬಲವನ್ನು 9ಕ್ಕೆ ಏರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.ಹೀಗಾಗಿ ಪರಮೇಶ್ವರರೆಡ್ಡಿ ಭಾವಿ ಅವರನ್ನೇ ಅಧ್ಯಕ್ಷ ಕುರ್ಚಿಗೆ ಕೂಡಿಸುವ ಪ್ರಯತ್ನ ಕಾಂಗ್ರೆಸ್‌ನಲ್ಲಿ ನಿಚ್ಚಳವಾಗಿ ಕಂಡುಬರುತ್ತಿದೆ. ಈ ನಡುವೆ ಅಧಿಕಾರ ಬಿಟ್ಟುಕೊಡಲು ಹಿಂಜರಿಯುತ್ತಿರುವ ಬಿಜೆಪಿ ಮುಖಂಡರು, ಹೇಗಾದರೂ ಮಾಡಿ ಈ ಅವಧಿಯಲ್ಲೂ ಬಿಜೆಪಿ ಆಡಳಿತವನ್ನೇ ಬೇರೂರಿಸಬೇಕೆಂಬ ಶತಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.ಒಟ್ಟಾರೆ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬಲವೇ ಹೆಚ್ಚಿಗೆ ಕಾಣುತ್ತಿದ್ದು, ಪರಮೇಶ್ವರರೆಡ್ಡಿ ಭಾವಿ ಅಧ್ಯಕ್ಷರಾಗಿ, ಸುಮಿತ್ರಾಬಾಯಿ ಮಾಪಣ್ಣ ಸಾಗರ ಉಪಾಧ್ಯಕ್ಷೆಯಾಗಿ ಆಯ್ಕೆ ಆಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.ಕೊನೆಯ ಘಳಿಗೆಯಲ್ಲಿ ಏನಾದರೂ ಏರುಪೇರಾದರೆ ಬಿಜೆಪಿಯ ಶಿವಶರಣರೆಡ್ಡಿ ಮಾಲಿಪಾಟೀಲ ಅಧ್ಯಕ್ಷರಾಗಲೂ ಬಹುದು ಎನ್ನಲಾಗುತ್ತಿದೆ. ಇನ್ನೊಂದು ಆಶ್ಚರ್ಯದ ಸಂಗತಿಯೆಂದರೆ, ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆಬಲದ ಕೊರತೆ ಕಂಡುಬಂದರೆ ಶಿವಶರಣರೆಡ್ಡಿ ಮಾಲಿಪಾಟೀಲ ಸ್ಪರ್ಧಿಸದೆ ಇರಬಹುದು.ಆಗ ಪರಮೇಶ್ವರರೆಡ್ಡಿ ಭಾವಿ ಅವಿರೋಧವಾಗಿ ಆಯ್ಕೆ ಆಗಬಹುದಾಗಿದೆ. ಯಾವುದಕ್ಕೂ ಇವತ್ತು ನಡೆಯುವ ಚುನಾವಣೆಯ ಫಲಿತಾಂಶವೇ ಉತ್ತರ ನೀಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry