ಶನಿವಾರ, ಮೇ 15, 2021
24 °C

ಕಾಂಗ್ರೆಸ್-ಬಿಜೆಪಿ ಮಾತಿನ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಟ್ವಾಳ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ `ನಾಗರಿಕ ಸನ್ನದು~ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಇಲ್ಲಿನ ಬಿ.ಸಿ.ರೋಡ್ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆಯಿತು.ಉದ್ಘಾಟನಾ ಸಮಾರಂಭಕ್ಕೆ ಶಾಸಕ ಬಿ.ರಮಾನಾಥ ರೈ ಅವರ ಹೆಸರನ್ನು ಮಾತ್ರ ಹಾಕಿ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿತ್ತು. ಇದನ್ನು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್ ಅವರು ಉಪ ತಹಶೀಲ್ದಾರ್ ಭಾರತಿ ಮತ್ತು ಕಿಶೋರ್ ಕುಮಾರ್ ಅವರಲ್ಲಿ ಪ್ರಶ್ನಿಸಿದರು.ಬಿಜೆಪಿ ಆಡಳಿತ ಹೊಂದಿರುವ ತಾಲ್ಲೂಕು ಪಂಚಾಯಿತಿ ಮತ್ತು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಬೂಡಾ ಅಧ್ಯಕ್ಷರಿಗೆ ಮಾಹಿತಿ ನೀಡಿಲ್ಲ. ಮಾತ್ರವಲ್ಲ, ತಾಲ್ಲೂಕು ಮಟ್ಟದ ಈ ಕಾರ್ಯಕ್ರಮ ಮತ್ತು ಯೋಜನೆ ಮಹತ್ವದ ಬಗ್ಗೆ ಪತ್ರಕರ್ತರ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಗೋಜಿಗೂ ಅಧಿಕಾರಿಗಳು ಮುಂದಾಗಿಲ್ಲ ಎಂದು ದೂರಿದರು.ತಕ್ಷಣವೇ ಶಾಸಕ ಬಿ.ರಮಾನಾಥ ರೈ ಪ್ರತಿಕ್ರಿಯಿಸಿ, ಪ್ರಸಕ್ತ ಆಡಳಿತ ನಡೆಸುತ್ತಿರುವ ನಿಮ್ಮದೇ ಸರ್ಕಾರಕ್ಕೆ ಖಾಯಂ ತಹಶೀಲ್ದಾರ್ ನೇಮಕ ಮಾಡಲು ಸಾಧ್ಯವಾಗಿಲ್ಲ ಎಂದು ಕೆಣಕಿದರು. ಈ ಬಗ್ಗೆ ನೀವು ವಿಧಾನಸಭೆಯಲ್ಲಿ ಮಾತನಾಡಿ ಎಂದು ರಾಮದಾಸ್ ಪ್ರತ್ಯುತ್ತರ ನೀಡಿದರು.ಪುರಸಭೆಯಲ್ಲಿ ಶಾಸಕರಿಗೆ ನೀವೆಷ್ಟು ಗೌರವ ನೀಡುತ್ತೀರಿ ಎಂಬುದು ನನಗೆ ಗೊತ್ತು ಎಂದು ರೈ ಮತ್ತೆ ಗುಡುಗಿದರು.ಇದೇ ವೇಳೆ ಬೂಡಾ ಅಧ್ಯಕ್ಷ ಎ.ಗೋವಿಂದ ಪ್ರಭು ಮತ್ತು ಪುರಸಭಾ ಅಧ್ಯಕ್ಷ ದಿನೇಶ್ ಪ್ರಭು, ರೈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸಿಟ್ಟಾದ ಶಾಸಕ ರೈ ಅವರು ಬಿಜೆಪಿ ಭಯೋತ್ಪಾದಕರ ಪಕ್ಷ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸುವ ಜಾಯಮಾನದವರು ಎಂದು ಅಬ್ಬರಿಸಿದರು.

 

ಬಳಿಕ ಪ್ರಭಾರ ತಹಶೀಲ್ದಾರ್ ರವಿಚಂದ್ರ ನಾಯಕ್ ಆಗಮಿಸುತ್ತಿದ್ದಂತೆಯೇ `ಉದ್ಘಾಟನಾ ಕಾರ್ಯಕ್ರಮ~ ಕಾಟಾಚಾರ ರೀತಿ ನೆರವೇರಿತು. ವಿವಿಧ ಗ್ರಾ.ಪಂ. ಅಧ್ಯಕ್ಷರು, ತಾ.ಪಂ. ಅಧ್ಯಕ್ಷೆ ಶೈಲಜಾ ಪಿ.ಶೆಟ್ಟಿ, ಉಪಾಧ್ಯಕ್ಷ ದಿನೇಶ ಅಮ್ಟೂರು, ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ ಮತ್ತಿತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.