ಮಂಗಳವಾರ, ಏಪ್ರಿಲ್ 13, 2021
23 °C

ಕಾಂಗ್ರೆಸ್- ಬಿಜೆಪಿ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಬಿಜೆಪಿ ಮತ್ತು ಕಾಂಗ್ರೆಸ್ ಭ್ರಷ್ಟಾಚಾರ, ದುರಾಡಳಿತದಿಂದ ರಾಜ್ಯ- ರಾಷ್ಟ್ರದ ಗೌರವ ಹಾಳು ಮಾಡಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಪಾದಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡಲಿಲ್ಲ. ಕೇಂದ್ರದಲ್ಲಿ 2ಜಿ, ಕಾಮನ್‌ವೆಲ್ತ್, ಕಲ್ಲಿದ್ದಲು ಮುಂತಾದ ಭಾರೀ ಪ್ರಮಾಣದ ಹಗರಣಗಳಿಂದ ಕಾಂಗ್ರೆಸ್ ನೈತಿಕತೆಯನ್ನು ಕಳೆದುಕೊಂಡು ರಾಜ್ಯ ಸರ್ಕಾರವನ್ನು ಪ್ರಶ್ನಿಸಲಾಗುತ್ತಿಲ್ಲ.ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ವೈಫಲ್ಯ ಕಾರಣ ಎಂಬುದನ್ನು ಮಲ್ಲಿಕಾರ್ಜುನ ಖರ್ಗೆ ಒಪ್ಪಿಕೊಂಡಿದ್ದಾರೆಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ರಾಜ್ಯದಲ್ಲಿ ಗೃಹ ಇಲಾಖೆ ಸತ್ತು ಹೋಗಿದೆ. ಈಶಾನ್ಯ ರಾಜ್ಯಗಳ ಜನತೆ ಹೊರಹೋಗುತ್ತಿದ್ದ ಸಂದರ್ಭದಲ್ಲಿ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಲಾಠಿ ಹಿಡಿದು ಗಸ್ತು ತಿರುಗಿದರು. ಪೊಲೀಸ್ ಇಲಾಖೆ ಕೆಲಸವನ್ನು ಗೃಹ ಸಚಿವರು ಆರ್‌ಎಸ್‌ಎಸ್‌ಗೆ ಗುತ್ತಿಗೆ ನೀಡಿದ್ದಾರೆಯೇ ಎಂದು ಅವರು ವಾಗ್ದಾಳಿ ನಡೆಸಿದರು.ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ಸ್ವತಂತ್ರ ಸರ್ಕಾರ ರಚಿಸಲು ಹೋರಾಟ ನಡೆಸುತ್ತದೆ. ಮುಂದೆ ಬರುವ ಸರ್ಕಾರ ಈಗಿನ ಸಚಿವರ ಮತ್ತಷ್ಟು ಹಗರಣಗಳನ್ನು ಹೊರತೆಗೆಯಬಹುದು. ಮತ್ತ್ಯಾರು ಜೈಲಿಗೆ ಹೋಗುತ್ತಾರೆ ಎಂಬುದು ಮುಂದೆ ತಿಳಿಯಲಿದೆ. ಈಗ ತಮ್ಮ ಮುಂದಿರುವುದು ಪಕ್ಷವನ್ನು ಬಲಪಡಿಸುವ ಕೆಲಸ. ಉತ್ತರ ಕರ್ನಾಟಕದಲ್ಲಿ ಸಹ ಪಕ್ಷವನ್ನು ಕಟ್ಟಲಾಗುತ್ತಿದೆ ಎಂದು ಹೇಳಿದರು.ರಾಜ್ಯದಾದ್ಯಂತ ಪ್ರವಾಸ ಮಾಡಿ ಸಂಘಟನೆ ಮಾಡಲಾಗುತ್ತಿದೆ. ಈಗಾಗಲೇ ಮುಸ್ಲಿಂ ಮತ್ತು ಯುವ ಸಮಾವೇಶ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಅಂಗವಿಕಲರ ಸಮಾವೇಶ ಆಯೋಜಿಸಲಾಗಿದೆ. ಆನಂತರ ಮಹಿಳಾ ಮತ್ತು ಹಿಂದುಳಿದ ವರ್ಗಗಳ ಸಮಾವೇಶ ನಡೆಸಲಾಗುವುದು. ಪಕ್ಷದ ನಾಯಕರ ಸಭೆ ಕರೆದು, ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಡಲಾಗುವುದು. ಮುಂದಿನ ಚುನಾವಣೆ ದೃಷ್ಟಿಯಿಂದ ಅಭ್ಯರ್ಥಿಗಳ ಆಯ್ಕೆ ಅಧಿಕಾರ ನೀಡಲಾಗುವುದು ಎಂದರು.ಆ. 26ರಂದು ನಗರದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಸಮಾವೇಶ ನಡೆಸಲಾಗುತ್ತಿದ್ದು, ದಲಿತರ ಸಮಸ್ಯೆಗಳನ್ನು ಅರಿತು ಪರಿಹರಿಸುವ ಪ್ರಯತ್ನ ಮಾಡಲಾಗುವುದು. ಶಿವಮೊಗ್ಗದಲ್ಲಿ ಬಗರಹುಕುಂ ರೈತರು ಮತ್ತು ಅಡಿಕೆ ಬೆಳೆಗಾರರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಮಧುಬಂಗಾರಪ್ಪ ನೇತೃತ್ವದಲ್ಲಿ ಸೆಪ್ಟಂಬರ್ 4ರಿಂದ ಪಾದಯಾತ್ರೆ ನಡೆಯಲಿದೆ ಎಂದು ಅವರು ಹೇಳಿದರು.ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇನ್ನು ಯಾರಿಗೂ ಟಿಕೆಟ್ ನೀಡುವುದಾಗಿ ಭರವಸೆ ನೀಡಿಲ್ಲ. ಆದರೆ ಆಕಾಂಕ್ಷಿಗಳು ಪಕ್ಷ ಸಂಘಟನೆ ಮಾಡಿದರೆ ಅಭ್ಯಂತರವಿಲ್ಲ. ಇದರಿಂದ ಪಕ್ಷಕ್ಕೆ ಲಾಭವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.ಶಾಸಕರಾದ ಎಂ.ಟಿ.ಕೃಷ್ಣಪ್ಪ, ಸುರೇಶ್‌ಬಾಬು, ಶ್ರೀನಿವಾಸ್, ಹುಲಿನಾಯ್ಕರ್, ಮುಖಂಡರಾದ ಚನ್ನಿಗಪ್ಪ, ನಿಂಗಪ್ಪ ಮತ್ತಿತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.