ಭಾನುವಾರ, ಜೂನ್ 20, 2021
21 °C
ಯುದ್ಧ ಕಾಲದಲ್ಲೇಕೆ ಭಿನ್ನಾಭಿಪ್ರಾಯ

ಕಾಂಗ್ರೆಸ್ ಬಿರುಕಿಗೆ ಎಸ್‌ಪಿಎಂ ಮುಲಾಮು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ/ಹುಳಿಯಾರು: ತಾಲ್ಲೂಕು ಕಾಂಗ್ರೆಸ್‌ ನಾಯಕರ ಭಿನ್ನಾಭಿಪ್ರಾಯಕ್ಕೆ ತೇಪೆ ಹಚ್ಚುವ ಯತ್ನವನ್ನು ಲೋಕಸಭೆ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡ ಮಂಗಳವಾರ ಮಾಡಿದರು.ಮಾಜಿ ಶಾಸಕ ಬಿ.ಲಕ್ಕಪ್ಪ, ಮುಖಂಡರಾದ ಸೀಮೆಎಣ್ಣೆ ಕೃಷ್ಣಯ್ಯ, ಎಚ್.ಬಿ.ಎಸ್.­ನಾರಾ­ಯಣ­ಗೌಡ, ಪುರಸಭೆ ಸದಸ್ಯರಾದ ಸಿ.ಪಿ.­ಮಹೇಶ್, ರೇಣುಕಾ ಗುರುಮೂರ್ತಿ ಮನೆಗಳಿಗೆ ಭೇಟಿ ನೀಡಿ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು.ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ವಿನಂತಿಸಿದರು.ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿದ ಮಾಜಿ ಶಾಸಕ ಲಕ್ಕಪ್ಪ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷತೆ ಕುರಿತ ಗೊಂದಲ ಹಾಗೂ  ಸಾಸಲು ಸತೀಶ್ ಕಾಂಗ್ರೆಸ್ ಸಿದ್ದಾಂತ ಮತ್ತು ಮೂಲ ಕಾಂಗ್ರೆಸಿಗರನ್ನು ಕಡೆಗಣಿಸುತ್ತಿರುವುದೇ ಭಿನ್ನಾ­ಭಿಪ್ರಾಯಕ್ಕೆ ಕಾರಣ ಎಂದರು.ಭಿನ್ನ ಧ್ವನಿ ಆಲಿಸಿದ ಎಸ್‌ಪಿಎಂ, ಪಕ್ಷದ ಗೆಲುವಿಗಾಗಿ ಒಗ್ಗಟ್ಟಿನಿಂದ ದುಡಿಯಿರಿ ಎಂದು ಮನವಿ ಮಾಡಿದರು. ಒಟ್ಟಾಗಿ ಕುಳಿತು ಪ್ರಚಾರ ತಂತ್ರ ರೂಪಿಸೋಣ ಎಂದರು.ಹುಳಿಯಾರಿನಲ್ಲಿ ಕಾಂಗ್ರೆಸ್ ಮುಖಂಡ ಧನಿಶ್ ರಂಗನಾಥ್ ಮನೆಗೆ ಭೇಟಿ ನೀಡಿ ಚರ್ಚಿಸಿದರು. ಯುದ್ದ ಸಮಯದಲ್ಲಿ ಸೈನ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿದರೆ ಎದುರಾಳಿಗೆ ಅನುಕೂಲವಾಗುತ್ತದೆ ಎಂದು ಮಾರ್ಮಿಕವಾಗಿ ಒಗ್ಗಟ್ಟಿನ ಅನಿವಾರ್ಯತೆ ಬಿಡಿಸಿಟ್ಟರು.ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ, ಶಾಸಕ ಕೆ.ಎನ್.ರಾಜಣ್ಣ ಇಬ್ಬರೂ ನನ್ನ ಪರ ಪ್ರಚಾರ ನಡೆಸುತ್ತಾರೆ. ನಿಮ್ಮ ಅಭಿಪ್ರಾಯದಂತೆ ಇಲ್ಲಿನ ಚುನಾವಣೆ ಉಸ್ತುವಾರಿಯನ್ನು ಸಂತೋಷ್ ಜಯಚಂದ್ರ, ಆರ್.ರಾಜೇಂದ್ರ ಅವರಿಗೆ ವಹಿಸಿಕೊಳ್ಳಲು ಸೂಚಿಸುತ್ತೇನೆ ಎಂದು ವಿವರಿಸಿದರು.ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳೋಣ. ಮಾಧ್ಯಮಗಳ ಮುಂದೆ ಹೋಗುವುದು ಬೇಡ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.ನಾನಿದ್ದೇನೆ ಚಿಂತಿಸಬೇಡಿ...

‘ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ನಾಯಕರಿಲ್ಲ’ ಎಂಬ ಕಾರ್ಯಕರ್ತರ ಕಳವಳಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿಎಂ ‘ಸಾಮಾನ್ಯ ಜನರು ಫೋನ್ ಮಾಡಿ ತಮ್ಮ ತೊಂದರೆ ತೋಡಿಕೊಂಡರೆ ೧೫ ನಿಮಿಷದಲ್ಲಿ ವಾಪಸ್ ಫೋನ್ ಮಾಡಿ, ಸಮಸ್ಯೆಗೆ ಪರಿಹಾರ ಸೂಚಿಸುವ ವ್ಯಕ್ತಿತ್ವ ರೂಢಿಸಿಕೊಂಡಿದ್ದೇನೆ. ಅಂಥದ್ದರಲ್ಲಿ ನಿಮ್ಮ ಕೈಬಿಡುತ್ತೇನೆಯೇ ? ನಿಮಗಾಗಿ ನಾನಿದ್ದೇನೆ, ಚಿಂತಿಸಬೇಡಿ. ಯಾವಾಗಬೇಕಾದರೂ ಫೋನ್ ಮಾಡಿ, ಸ್ಪಂದಿಸುತ್ತೇನೆ’ ಎಂದು ಭರವಸೆ ನೀಡಿದರು. ಚುನಾವಣೆ ವೇಳೆ ಸಣ್ಣಪುಟ್ಟ ವಿಚಾರ­ಗಳನ್ನು ದೊಡ್ಡದು ಮಾಡುವುದು ಬೇಡ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.