ಗುರುವಾರ , ನವೆಂಬರ್ 21, 2019
20 °C

ಕಾಂಗ್ರೆಸ್: ಬೂದಿ ಮುಚ್ಚಿದ ಕೆಂಡ!

Published:
Updated:

ಶಿರಸಿ: ಕಾಂಗ್ರೆಸ್ ಪಕ್ಷದ ಒಳಗಿನ ಬಿಕ್ಕಟ್ಟು ಬೂದಿ ಮುಚ್ಚಿದ ಕೆಂಡದಂತಾಗಿದೆ. ಮೇಲ್ನೋಟಕ್ಕೆ ಎರಡು ಬಣಗಳ ನಡುವೆ ಹೊಂದಾಣಿಕೆ ಕಾಣುತ್ತಿದ್ದರೂ ಆಂತರಿಕವಾಗಿ ಭಿನ್ನಮತ ಹೊಗೆಯಾಡುತ್ತಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರೂ ಒಂದು ಬಣದ ಕಾಂಗ್ರೆಸ್ ಕಾರ್ಯಕರ್ತರು ನಿರ್ಲಿಪ್ತ ಮನೋಸ್ಥಿತಿಯಲ್ಲಿದ್ದಾರೆ.

ಇನ್ನೊಂದು ಬಣದ ಕೆಲವಷ್ಟು ಮಂದಿ ಗ್ರಾಮೀಣ ಭಾಗದಲ್ಲಿ ಚುನಾವಣಾ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಚುನಾವಣೆ ಘೋಷಣೆ ಪೂರ್ವದಲ್ಲಿ ಸದಾ ಜನರಿಂದ ಗಿಜಿಗುಡುತ್ತಿದ್ದ ಕಾಂಗ್ರೆಸ್ ಪಕ್ಷದ ಕಚೇರಿ ಈಗ ಬಣಗುಡುತ್ತಿದೆ. ಕಾರ್ಯಕರ್ತರಲ್ಲಿ ಚುನಾವಣೆ ಸಿದ್ಧತೆಯ ಬಗೆಗಿನ ಉತ್ಸಾಹ ತಣ್ಣಗಾದಂತಿದೆ.ಶಿರಸಿ-ಸಿದ್ದಾಪುರ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿದ್ದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಕೊನೆಯ ಕ್ಷಣದಲ್ಲಿ ಟಿಕೆಟ್ ವಂಚಿತರಾಗಿದ್ದರು. ದೇಶಪಾಂಡೆ ಮತ್ತು ಆಳ್ವಾ ಬಣದ ನಡುವೆ ನಡೆದ ಗುದ್ದಾಟದಲ್ಲಿ ದೀಪಕ ಹೊನ್ನಾವರ ಟಿಕೆಟ್ ಗಿಟ್ಟಿಸಿಕೊಳ್ಳುವ ಮೂಲಕ ಆಳ್ವಾ ಬಣದ ಕೈ ಮೇಲಾಯಿತು. ಈ ನಡುವೆ ಭೀಮಣ್ಣ ನಾಯ್ಕ ಬೆಂಬಲಿಗರ ಆಶಯದಂತೆ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆಂದು ಸುದ್ದಿ ಹರಡಿತು.

ನಾಮಪತ್ರ ಸಲ್ಲಿಸದೆ ಭೀಮಣ್ಣ ತಟಸ್ಥ ನಿಲುವು ತೋರಿದರೂ ಅವರ ಬೆಂಬಲಿಗರ ಆಂತರಿಕ ನಡೆ ಏನು ಎಂಬುದು ಈಗ ಕುತೂಹಲವಾಗಿದೆ. ಟಿಕೆಟ್ ವಂಚಿತರಾಗಿರುವ ಹಿನ್ನೆಲೆಯಲ್ಲಿ ನಿಮ್ಮ ಮುಂದಿನ ಹೆಜ್ಜೆ ಏನು ಎಂದು `ಪ್ರಜಾವಾಣಿ' ಸಂಪರ್ಕಿಸಿದಾಗ, `ಹೈಕಮಾಂಡ್ ಆಯ್ಕೆ ಮಾಡಿರುವ ಅಭ್ಯರ್ಥಿಗಳನ್ನು ಒಪ್ಪಿಕೊಂಡು ಜಿಲ್ಲೆಯ ಎಲ್ಲ ಆರು ಕ್ಷೇತ್ರಗಳಲ್ಲಿ ಪಕ್ಷದ ಪರ ಪ್ರಚಾರ ನಡೆಸುವೆ' ಎಂದರು.`ಕೇವಲ ಶಿರಸಿ, ಸಿದ್ದಾಪುರ ತಾಲ್ಲೂಕುಗಳಿಂದ ಮಾತ್ರವಲ್ಲ ಜಿಲ್ಲೆಯ ಎಲ್ಲ ಭಾಗಗಳಿಂದ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಟಿಕೆಟ್ ಕೈತಪ್ಪಿರುವ ಬಗ್ಗೆ ನೋವು ವ್ಯಕ್ತಪಡಿಸಿ, ಸ್ವತಂತ್ರವಾಗಿ ಸ್ಪರ್ಧಿಸುವಂತೆ ಒತ್ತಡ ತಂದರು. ನಾನು ಟಿಕೆಟ್ ಆಕಾಂಕ್ಷಿಯಾಗಿದ್ದು ನಿಜ, ಟಿಕೆಟ್ ಕೈ ತಪ್ಪಿದಾಗ ನೋವಾಗಿದ್ದೂ ನಿಜ. ಪಕ್ಷ ನೀಡಿರುವ ಜವಾಬ್ದಾರಿ ಸ್ಥಾನದಲ್ಲಿದ್ದು, ಹೈಕಮಾಂಡ್ ತೀರ್ಮಾನವನ್ನು ಒಪ್ಪಿದ್ದೇನೆ. ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ' ಎಂದು ಹೇಳಿಕೊಂಡರು.ದೇಶಪಾಂಡೆ ಬರುವರೇ?: ಈ ಹಿಂದೆ ತಾವೇ ಪಕ್ಷದಿಂದ ಉಚ್ಛಾಟನೆ ಮಾಡಿದ್ದ ಅಭ್ಯರ್ಥಿ ಪರ ಪ್ರಚಾರ ಮಾಡಲು ಕಾಂಗ್ರೆಸ್ ಪಕ್ಷದ ಮುಖಂಡ ಆರ್.ವಿ.ದೇಶಪಾಂಡೆ ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಆಗಮಿಸುವರೇ ಎಂಬ ಕುತೂಹಲ ಪಕ್ಷದ ಕಾರ್ಯಕರ್ತರದ್ದಾಗಿದೆ. ಇದಕ್ಕೆ ಪುಷ್ಟಿ ಎಂಬಂತೆ ದೇಶಪಾಂಡೆ ಪ್ರವಾಸ ಪಟ್ಟಿಯಲ್ಲಿ ಈ ಕ್ಷೇತ್ರ ಒಳಗೊಂಡಿಲ್ಲ.ಉಸ್ತುವಾರಿ ನೇಮಕ: ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಉಸ್ತುವಾರಿಗಳನ್ನು ನೇಮಿಸಿದೆ. ಹಳಿಯಾಳ- ಪ್ರಮೋದ ಹೆಗಡೆ (9448408598), ಕಾರವಾರ- ಎ.ರವೀಂದ್ರ ನಾಯ್ಕ (9449193801), ಕುಮಟಾ- ಕೆ.ಎಚ್.ಗೌಡ (9481109587), ಭಟ್ಕಳ- ಆರ್.ಎಂ.ಹೆಗಡೆ (9448965138), ಶಿರಸಿ- ಬಿ.ಎಫ್.ಬೆಂಡಿಗೇರಿ (9448575852), ಯಲ್ಲಾಪುರ- ಎನ್.ಪಿ.ಗಾಂವಕರ (9448034912).

ಪ್ರತಿಕ್ರಿಯಿಸಿ (+)