ಬುಧವಾರ, ನವೆಂಬರ್ 20, 2019
27 °C
ಗೌರಿಬಿದನೂರು ವಿಧಾನ ಸಭಾ ಕ್ಷೇತ್ರ

ಕಾಂಗ್ರೆಸ್ ಭದ್ರಕೋಟೆಯಲ್ಲಿ ಜೆಡಿಎಸ್ ಹುಡುಕಾಟ

Published:
Updated:

ಚಿಕ್ಕಬಳ್ಳಾಪುರ: ವಿಚಾರವಂತರ ಮತ್ತು ಪ್ರಗತಿಪರ ಚಿಂತಕರ ವಿಧಾನಸಭಾ ಕ್ಷೇತ್ರವೆಂದೇ ಪರಿಗಣಿಸುವ ಗೌರಿಬಿದನೂರಿನಲ್ಲಿ  ಗದ್ದುಗೆಯನ್ನು ಹೆಚ್ಚು ಹಂಚಿಕೊಂಡಿದ್ದು ಕಾಂಗ್ರೆಸ್ ಮತ್ತು ಜನತಾ ಪರಿವಾರ.ಕೆಲವರಿಗೆ ಮತದಾರರು ಹೆಚ್ಚಿನ ಮತವನ್ನು ನೀಡಿ ಗೆಲ್ಲುವಂತೆ ಮಾಡಿದರೆ, ಇನ್ನೂ ಕೆಲವರನ್ನು ಕಡಿಮೆ ಮತಗಳ ಅಂತರದಲ್ಲಿ ಸೋಲುವಂತೆಯೂ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಜನತಾ ಪರಿವಾರದ ಅಭ್ಯರ್ಥಿಗಳನ್ನೇ ಹೆಚ್ಚು ನೆಚ್ಚಿಕೊಂಡಿರುವ ಇಲ್ಲಿನ ಮತದಾರರು ಕೆಲ ಸಂದರ್ಭಗಳಲ್ಲಿ ಪಕ್ಷೇತರರಿಗೆ ಅವಕಾಶ ನೀಡಿದ್ದಾರೆ.ಆಸಕ್ತಿಕರ ಸಂಗತಿಯೆಂದರೆ, ಜನಪ್ರತಿನಿಧಿಯ ಮೇಲೆ ಇಟ್ಟಿರುವ ನಂಬಿಕೆಯನ್ನು ಮತದಾರರು ಸುಲಭವಾಗಿ ಕಳೆದುಕೊಳ್ಳಲು ಬಯಸುವುದಿಲ್ಲ. ಒಮ್ಮೆ ನಂಬಿಕೆ ಕಳೆದುಕೊಂಡರೆ, ಅವರನ್ನು ಮತ್ತೆ ಗೆಲ್ಲಿಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದು ಬಿಡುತ್ತಾರೆ.ಇದೇ ಕಾರಣಕ್ಕೆ ಇಲ್ಲಿ ಇಬ್ಬರು ಸತತ ಎರಡು ಮತ್ತು ಮೂರು ಬಾರಿ ಶಾಸಕರಾಗಿ ಪುನರಾಯ್ಕೆಯಾಗಿ ದಾಖಲೆ ಮಾಡಿದ್ದಾರೆ. ಆರ್.ಎನ್.ಲಕ್ಷ್ಮಿಪತಿ ಮತ್ತು ಎನ್.ಎಚ್.ಶಿವಶಂಕರ ರೆಡ್ಡಿ ದಾಖಲೆಯನ್ನು ಇದುವರೆಗೆ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ.1962 ಮತ್ತು 1967ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸತತ ಎರಡು ಬಾರಿ ಗೆಲುವು ದಾಖಲಿಸಿದ ಆರ್.ಎನ್.ಲಕ್ಷಿಪತಿಯವರು 1972 ಮತ್ತು 1978ರ ಚುನಾವಣೆಗಳಲ್ಲಿ ಸತತ ಸೋಲು ಅನುಭವಿಸಿದರು. 1972ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಆರ್ಗನೈಸೇಷನ್) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು 1978ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು.ಆದರೆ ಪುನಃ ಒಲವು ತೋರಿದ ಮತದಾರರು 1983ರ ಚುನಾವಣೆಯಲ್ಲಿ ಅವರನ್ನು ಗೆಲ್ಲುವಂತೆ ಮಾಡಿದರು. ಆಗ ಜನತಾ ಪಕ್ಷದ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಿದ್ದರು.1999ರ ಚುನಾವಣೆಯಲ್ಲಿ ಮೊದಲ ಬಾರಿಗೆ ಪಕ್ಷೇತರರಾಗಿ ಕಣಕ್ಕೆ ಇಳಿದ ಎನ್.ಎಚ್.ಶಿವಶಂಕರ ರೆಡ್ಡಿ ಸತತ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. 2004 ಮತ್ತು 2008ರ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಜಯಶಾಲಿಯಾದರು. ಇದೀಗ ನಾಲ್ಕನೇ ಬಾರಿಗೆ ಸ್ಪರ್ಧಾ ಕಣದಲ್ಲಿದ್ದಾರೆ. ಈ ಬಾರಿ ಮತದಾರರು ಯಾವ ನಿರ್ಣಯ ಕೈಗೊಳ್ಳುವರು ಕಾದು ನೋಡಬೇಕು.ಕಾಂಗ್ರೆಸ್ ಮತ್ತು ಜನತಾ ಪರಿವಾರಕ್ಕೆ ಮಾತ್ರ ಸೀಮಿತವಾಗಿದ್ದ ಕ್ಷೇತ್ರದಲ್ಲಿ ಬಿಜೆಪಿ ಕಮಲ ಮೊದಲ ಬಾರಿಗೆ 1994ರ ಚುನಾವಣೆಯಲ್ಲಿ ಕಾಣಿಸಿಕೊಂಡಿತು. ಆಗ ಬಿಜೆಪಿ ವತಿಯಿಂದ ಸ್ಪರ್ಧಿಸಿದ್ದ ಎನ್.ಟಿ.ಮದನಗೋಪಾಲರೆಡ್ಡಿ 5284 ಮತಗಳನ್ನು ಗಳಿಸಿ, ನಾಲ್ಕನೇ ಸ್ಥಾನ ತಲುಪಿದ್ದರು.ಮತ್ತೆ ಬಿಜೆಪಿ ಸ್ಪರ್ಧಿಸಿದ್ದು 2008ರ ಚುನಾವಣೆಯಲ್ಲಿ. ಆಗ ಬಿಜೆಪಿ ರವಿನಾರಾಯಣರೆಡ್ಡಿ 27959 ಮತಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದರು. ಹಾಲಿ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಅವರು 11,169 ಮತಗಳ ಅಂತರದಿಂದ ಜಯಗಳಿಸಿದ್ದರು.ಒಂದು ವೇಳೆ ಎನ್.ಎಚ್.ಶಿವಶಂಕರ ರೆಡ್ಡಿ ಪುನರಾಯ್ಕೆಯಾದರೆ, ನಾಲ್ಕನೇ ಬಾರಿ ಗೆಲುವು ದಾಖಲಿಸಿದಂತಾಗುತ್ತದೆ. ಎನ್.ಎಂ.ರವಿನಾರಾಯಣರೆಡ್ಡಿ ವಿಜೇತರಾದರೆ ಬಿಜೆಪಿಯು ಪ್ರಥಮ ಬಾರಿಗೆ ಗದ್ದುಗೆ ಹಿಡಿಯಲಿದೆ. ಜೆಡಿಎಸ್‌ನಿಂದ ಅಶ್ವತ್ಥನಾರಾಯಣರೆಡ್ಡಿ ಅಥವಾ ಎನ್.ಜ್ಯೋತಿರೆಡ್ಡಿ ಯಾರೇ ಗೆಲುವು ಸಾಧಿಸಿದರೂ ಅವರು ಎರಡನೇ ಬಾರಿ ಆಯ್ಕೆಯಾದಂತೆ. ಒಂದು ವೇಳೆ ಹೊಸ ಪಕ್ಷಗಳಾದ ಬಿಎಸ್‌ಆರ್ ಕಾಂಗ್ರೆಸ್ ಮತ್ತು ಕೆಜೆಪಿಯತ್ತ ಮತದಾರರು ಒಲವು ತೋರಿದರೆ ಅದು ಮತ್ತೊಂದು ಅಚ್ಚರಿ ಫಲಿತಾಂಶ.ಪ್ರತಿಕ್ರಿಯಿಸಿ (+)