ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿರುಕು!

7
ಚುನಾವಣೆಗೂ ಮುನ್ನ ಭುಗಿಲೆದ್ದ ಭಿನ್ನಾಭಿಪ್ರಾಯ

ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿರುಕು!

Published:
Updated:

ಯಾದಗಿರಿ: ಭದ್ರಕೋಟೆ ಎಂದೇ ಖ್ಯಾತವಾಗಿರುವ ಜಿಲ್ಲೆಯ ಕಾಂಗ್ರೆಸ್ ಘಟಕದಲ್ಲಿ ಇದೀಗ ಬಿರುಕು ಮೂಡಲಾರಂಭಿಸಿದೆ. ಕಳೆದ ನಾಲ್ಕೈದು ದಿನಗಳಿಂದ ಆರಂಭವಾಗಿರುವ ಬೆಳವಣಿಗೆಗಳು ಇದಕ್ಕೆ ಪುಷ್ಠಿ ನೀಡುತ್ತಿದ್ದು, ಭಾನುವಾರ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಹೊರಬಿದ್ದಿವೆ.ಒಂದೆಡೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದ ಮುಖಂಡರು ಪಕ್ಷದಿಂದ ಹೊರನಡೆದಿದ್ದು, ಇನ್ನೊಂದೆಡೆ ಪಕ್ಷದಲ್ಲಿದ್ದುಕೊಂಡೇ ಶಾಸಕರ ಕಾರ್ಯವೈಖರಿಯ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ಇದರಿಂದಾಗಿ ಕಾಂಗ್ರೆಸ್ ಭದ್ರಕೋಟೆ ಎಂದೇ ಪರಿಗಣಿಸಲಾಗುತ್ತಿರುವ ಜಿಲ್ಲೆಯಲ್ಲಿ ಇದೀಗ ಹೊಸ ಬೆಳವಣಿಗೆಗಳು ತೀವ್ರಗೊಂಡಂತಾಗಿವೆ.ಪಕ್ಷದಲ್ಲಿ ಆಂತರಿಕ ಸ್ವಾತಂತ್ರ್ಯವಿಲ್ಲ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಲೇ ಇವೆ. ಇದರ ಜೊತೆಗೆ ಪಕ್ಷದ ಹೈಕಮಾಂಡ್ ಪ್ರತಿ ಸಾರಿ ಒಬ್ಬರಿಗೇ ಮಣೆ ಹಾಕುತ್ತಿರುವುದು ಎರಡನೇ ಸಾಲಿನ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಪಕ್ಷದಲ್ಲಿ ಸಾಕಷ್ಟು ಜನರು ಪ್ರಭಾವಿ ಮುಖಂಡರಿದ್ದರೂ, ಹೊಸಬರಿಗೆ ಅವಕಾಶ ಸಿಗುತ್ತಿಲ್ಲ. ಒಬ್ಬರನ್ನೇ ಪದೇ ಪದೇ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪಕ್ಷಕ್ಕಾಗಿ ದಶಕಗಳಿಂದ ದುಡಿಯುತ್ತಿರುವವರಿಗೆ ಯಾವುದೇ ಮನ್ನಣೆ ಇಲ್ಲದಂತಾಗಿದೆ ಎಂದು ಪಕ್ಷದ ಮುಖಂಡರು ಬಹಿರಂಗವಾಗಿವೆ ಕಿಡಿ ಕಾರುತ್ತಿದ್ದಾರೆ.

ಕಾಂಗ್ರೆಸ್‌ಗೆ ವಿದಾಯ: ಪಕ್ಷದಲ್ಲಿ ಸುಮಾರು 23 ವರ್ಷ ಶ್ರಮಿಸಿರುವ ಯುವ ಮುಖಂಡ ಡಾ. ಶರಣಭೂಪಾಲರಡ್ಡಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಡಾ. ಶೈಲಜಾ ಶರಣಭೂಪಾಲರಡ್ಡಿ ಅಧಿಕೃತವಾಗಿಯೇ ಭಾನುವಾರ ಕಾಂಗ್ರೆಸ್‌ಗೆ ವಿದಾಯ ಹೇಳುತ್ತಿರುವುದಾಗಿ ಪ್ರಕಟಿಸಿದ್ದಾರೆ.ಯಾದಗಿರಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಡಾ. ಶರಣಭೂಪಾಲರಡ್ಡಿ, ಇದೀಗ ಕಾಂಗ್ರೆಸ್‌ನಿಂದ ಹೊರನಡೆದಿದ್ದು, ಯಡಿಯೂರಪ್ಪನವರ ಕೆಜೆಪಿ ಪಕ್ಷ ಸೇರ್ಪಡೆ ಆಗುವುದು ಬಹುತೇಕ ಖಚಿತವಾದಂತಾಗಿದೆ. ಆದರೆ ಡಾ. ಶರಣಭೂಪಾಲರಡ್ಡಿ ಮಾತ್ರ ತಮ್ಮ ಮುಂದಿನ ಹೆಜ್ಜೆಯನ್ನು ಇನ್ನೂ ನಿಗೂಢವಾಗಿಯೇ ಇಟ್ಟಿದ್ದಾರೆ.ಇನ್ನೊಂದೆಡೆ ಗುರುಮಠಕಲ್ ಮತಕ್ಷೇತ್ರದ ಶಾಸಕ ಬಾಬುರಾವ ಚಿಂಚನಸೂರರ ಬಗ್ಗೆ ಅಸಮಾಧಾನಗೊಂಡಿರುವ ಕ್ಷೇತ್ರದ ಪ್ರಮುಖ ನಾಯಕರು, ಬಹಿರಂಗವಾಗಿಯೇ ಶಾಸಕರ ಕಾರ್ಯವೈಖರಿಯ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಹೊರಗಿನವರಿಗೆ ಮಣೆ ಹಾಕಲು ಸಾಧ್ಯವಿಲ್ಲ. ಈ ಬಾರಿ ಬಾಬುರಾವ ಚಿಂಚನಸೂರರಿಗೆ ಟಿಕೀಟ್ ನೀಡಿದಲ್ಲಿ ಬೆಂಬಲಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪಕ್ಷದ ರಾಜ್ಯ ಘಟಕದ ಮುಖಂಡರಿಗೆ ರವಾನಿಸಿದ್ದಾರೆ.ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ವಿವಾಹದ ನೆಪ ಮಾಡಿಕೊಂಡು ಬೆಂಗಳೂರಿಗೆ ತೆರಳಿದ್ದ ಕ್ಷೇತ್ರದ 300ಕ್ಕೂ ಹೆಚ್ಚಿನ ಜನರು ಕೇಂದ್ರ ಸಚಿವ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ, ಶಾಸಕ ಚಿಂಚನಸೂರರ ವಿರುದ್ಧ ಆರೋಪಗಳ ಪಟ್ಟಿಯನ್ನು ಸಲ್ಲಿಸಿದ್ದಾರೆ.ನೇತೃತ್ವ ವಹಿಸಿರುವ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಾಯಿಬಣ್ಣ ಬೋರಬಂಡ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಲಕ್ಷ್ಮಾರೆಡ್ಡಿ ಅನಪೂರ, ಈ ವಿವರವನ್ನು ಬಹಿರಂಗಪಡಿಸಿದ್ದು, ಮುಂದಿನ ಚುನಾವಣೆಯಲ್ಲಿ ಚಿಂಚನಸೂರರಿಗೆ ಟಿಕೀಟ್ ನೀಡಿದಲ್ಲಿ ಬೇರೆ ಹಾದಿ ನೋಡಬೇಕಾಗುತ್ತದೆ. ಸ್ಥಳೀಯರಿಗೆ ಆದ್ಯತೆ ನೀಡಲೇಬೇಕು ಎಂಬ ಮನವಿಯನ್ನು ವರಿಷ್ಠರಿಗೆ ಮಾಡಿರುವುದಾಗಿ ಹೇಳಿದ್ದಾರೆ.ದೂರ ಸರಿದ ನಾಯಕರು: ಇದೆಲ್ಲದರ ಮಧ್ಯೆ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಮುಖ ನಾಯಕರು ಇದೀಗ ಪಕ್ಷದ ಕಾರ್ಯಕ್ರಮಗಳಿಂದ ದೂರ ಸರಿಯುತ್ತಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರಡ್ಡಿ ಪಾಟೀಲ ತುನ್ನೂರ ಹಾಗೂ ಕೆಪಿಸಿಸಿ ಸದಸ್ಯ ಮೌಲಾಲಿ ಅನಪೂರ ಈಗಾಗಲೇ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಚೆನ್ನಾರಡ್ಡಿ ತುನ್ನೂರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರಿಗೆ ಈ ಕುರಿತು ಪತ್ರ ಬರೆದಿರುವುದು ಗುಟ್ಟಾಗಿ ಉಳಿದಿಲ್ಲ. ಈ ಬಾರಿ ಯಾದಗಿರಿ ಮತಕ್ಷೇತ್ರದಲ್ಲಿ ಚೆನ್ನಾರಡ್ಡಿ ಪಾಟೀಲ ತನ್ನೂರ ಸಹ ಪ್ರಬಲ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್ ವರಿಷ್ಠರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅದಾಗ್ಯೂ ತಮಗೆ ಟಿಕೀಟ್ ಸಿಗದೇ ಇದ್ದರೆ, ಜೆಡಿಎಸ್ ಅಥವಾ ಇನ್ನಾವುದೋ ಪಕ್ಷದಿಂದ ಸ್ಪರ್ಧೆಗೆ ಇಳಿಯುವ ಸ್ಪಷ್ಟ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.ಈ ಬಗ್ಗೆ ಸ್ಪಷ್ಟಪಡಿಸಿರುವ ಚೆನ್ನಾರಡ್ಡಿ ಪಾಟೀಲ ತನ್ನೂರ, ವಿಧಾನ ಪರಿಷತ್ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಳೆದ ಹಲವು ದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಶಾಸಕನಾಗಿ ಜನರ ಸೇವೆ ಮಾಡುವ ಇಚ್ಛೆ ಇರುವುದು ನಿಜ. ನಮ್ಮ ನಾಯಕರಿಗೂ ಈ ವಿಷಯವನ್ನು ತಿಳಿಸಿದ್ದೇನೆ. ಇನ್ನು ಪಕ್ಷದ ವರಿಷ್ಠರಿಗೆ ಬಿಟ್ಟ ವಿಷಯ.ಈ ಬಗ್ಗೆ ತಾವೇನೂ ಹೇಳುವುದಿಲ್ಲ. ಆದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಸದಸ್ಯ ಮೌಲಾಲಿ ಅನಪೂರ ಸಹ ಕಾಂಗ್ರೆಸ್ ಸಮಾರಂಭಗಳಿಂದ ದೂರವೇ ಉಳಿದಿದ್ದು, ಬಿಎಸ್ಸಾರ್ ಕಾಂಗ್ರೆಸ್‌ನಿಂದ ಯಾದಗಿರಿ ಮತಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಇನ್ನೊಬ್ಬ ಕೆಪಿಸಿಸಿ ಸದಸ್ಯ ಬುಚ್ಚಣ್ಣ ಜೈಗ್ರಾಮ್ ಸಹ ಈ ಬಾರಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.ಒಂದೆಡೆ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಪಕ್ಷದಲ್ಲಿರುವ ಹಿರಿಯರಿಗೆ ಯಾವ ಸ್ಥಾನ ನೀಡಬೇಕು ಎನ್ನುವ ಚಿಂತೆ ಹೈಕಮಾಂಡ್ ಅನ್ನು ಆವರಿಸಿದೆ.ಪಕ್ಷದ ಎರಡನೇ ಸಾಲಿನ ನಾಯಕರನ್ನು ಸಂತೃಪ್ತಗೊಳಿಸದೇ ಇದ್ದಲ್ಲಿ, ಪಕ್ಷಕ್ಕೆ ಹಿನ್ನಡೆ ಆಗಲಿದೆ ಎಂಬುದನ್ನು ಮನಗಂಡಿರುವ ಹೈಕಮಾಂಡ್ ಈಗಾಗಲೇ ಈ ಕುರಿತು ವರದಿ ಸಿದ್ಧಪಡಿಸಲು ತಂಡವೊಂದನ್ನು ಜಿಲ್ಲೆಗೆ ಕಳುಹಿಸಿದೆ.

ಕೆಪಿಸಿಸಿ ವೀಕ್ಷಕರು ಇಂದು ಜಿಲ್ಲೆಗೆ

ಯಾದಗಿರಿ
: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಕೆಪಿಸಿಸಿ ವೀಕ್ಷಕರು ಸೋಮವಾರ ಜಿಲ್ಲೆಗೆ ಆಗಮಿಸಲಿದ್ದಾರೆ.ವಿಧಾನ ಪರಿಷತ್ ಮಾಜಿ ಸದಸ್ಯ ಮಸೂದ್, ಶ್ರೀನಾಥ, ಕೆಪಿಸಿಸಿ ಕಾರ್ಯದರ್ಶಿ ಭೂಪತಿ ಹಾಗೂ ಡಿ. ಗೌತಮ್ ಅವರನ್ನು ಒಳಗೊಂಡ ತಂಡ ಜಿಲ್ಲೆಗೆ ಭೇಟಿ ನೀಡಲಿದೆ. ಗುರಮಠಕಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಚಿಸಿರುವ ಆಕಾಂಕ್ಷಿಗಳು ಸೋಮವಾರ (ಡಿ.3) ಮಧ್ಯಾಹ್ನ 3 ಗಂಟೆಗೆ  ನಗರದ ಕಾಂಗ್ರೆಸ್ ಕಚೇರಿಯಲ್ಲಿ ವೀಕ್ಷಕರಿಗೆ ಅರ್ಜಿಗಳನ್ನು ಸಲ್ಲಿಸಬಹುದು.

ಸಭೆಗೆ ಮತಕ್ಷೇತ್ರದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಗುರಮಠಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಪಾಲರಡ್ಡಿ ಪಾಟೀಲ ಹತ್ತಿಕುಣಿ ಪ್ರಕಟಣೆಯಲ್ಲಿ    ಕೋರಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry