ಭಾನುವಾರ, ನವೆಂಬರ್ 17, 2019
24 °C

ಕಾಂಗ್ರೆಸ್ ಭದ್ರಕೋಟೆ ಭೇದಿಸಲು ತಂತ್ರ

Published:
Updated:

ಮೊಳಕಾಲ್ಮುರು: ಮೋಹಕ ರೇಷ್ಮೆಸೀರೆ ತಯಾರಿಕೆ, ಬಿರುಬಿಸಿಲು ಮತ್ತು ಸತತ ಬರಗಾಲಕ್ಕೆ ತುತ್ತಾಗುತ್ತಾ ಗಮನ ಸೆಳೆದಿರುವುದು ಗಡಿಭಾಗದ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ.ನೆರೆಯ ಆಂಧ್ರಗಡಿಗೆ ಕೂಗಳತೆ ದೂರದಲ್ಲಿರುವ ಈ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆ ಎಂದು ಹೆಸರು ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ ಈವರೆಗೆ ನಡೆದಿರುವ 12 ವಿಧಾನಸಭಾ ಚುನಾವಣೆಗಳ ಪೈಕಿ ಎರಡು ಭಾರಿ ಮಾತ್ರ ಜನತಾ ಪರಿವಾರಕ್ಕೆ ಈ ಕ್ಷೇತ್ರ ದಕ್ಕಿದ್ದು, ಉಳಿದ ಅವಧಿಯಲ್ಲಿ ಕಾಂಗ್ರೆಸ್ ತೆಕ್ಕೆಯಲ್ಲಿ ಇದೆ. ಮಾಜಿ ಮುಖ್ಯಮಂತ್ರಿ ದೊಡ್ಡಸಿದ್ದವ್ವನಹಳ್ಳಿ ನಿಜಲಿಂಗಪ್ಪ ಅವರನ್ನು ಹಾಗೂ ಮಾಜಿ ಸಂಪುಟ ಸಚಿವ ಭೀಮಪ್ಪ ನಾಯಕ ಅವರನ್ನು ಆರಿಸಿ ಕಳಿಸಿದ ಹೆಸರು ಈ ಕ್ಷೇತ್ರಕ್ಕಿದೆ.ಮೊಳಕಾಲ್ಮುರು ತಾಲ್ಲೂಕಿನ ಕಸಬಾ, ದೇವಸಮುದ್ರ ಮತ್ತು ಚಳ್ಳಕೆರೆ ತಾಲ್ಲೂಕಿನ ತಳಕು ಮತ್ತು ನಾಯನಕಹಟ್ಟಿ ಹೋಬಳಿಗಳನ್ನು ಒಳಗೊಂಡು ರಚನೆಯಾಗಿರುವ ಈ ಕ್ಷೇತ್ರವು ಪರಿಶಿಷ್ಟ ವರ್ಗ (ಸಾಮಾನ್ಯ)ಕ್ಕೆ ಮೀಸಲಾಗಿದೆ. 35 ಗ್ರಾಮಪಂಚಾಯ್ತಿ ಕೇಂದ್ರಗಳನ್ನು ಹೊಂದಿದ್ದು, 1,04,788 ಪುರುಷ ಹಾಗೂ 99,093 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,03,881 ಮತದಾರರು ಇದ್ದಾರೆ.ಚುನಾವಣೆಗೆ 263 ಹಾಗೂ ಎರಡು ಹೆಚ್ಚುವರಿ ಸೇರಿದಂತೆ ಒಟ್ಟು 265 ಮತಗಟ್ಟೆ ಸ್ಥಾಪನೆ ಮಾಡಲಾಗುವುದು ಎಂದು ಚುನಾವಣೆ ಶಾಖೆ ಅಧಿಕಾರಿಗಳು ಹೇಳುತ್ತಾರೆ.ಈ ಕ್ಷೇತ್ರದಿಂದ 1952ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಭೀಮಪ್ಪ ನಾಯಕ ಸಂಪುಟದರ್ಜೆ ಸಚಿವರಾಗಿ ಹಾಗೂ 1957ರಲ್ಲಿ ಆಯ್ಕೆಯಾದ ಎಸ್. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದು ಕ್ಷೇತ್ರದ ಹಿರಿಮೆಯಾದರೂ, ಮುಖ್ಯಮಂತ್ರಿ ಕ್ಷೇತ್ರವೆಂದು ಹೇಳಿಕೊಳ್ಳಲು ಇಲ್ಲಿ ಯಾವುದೇ ಗುರುತರ ಅಭಿವೃದ್ಧಿ ಕಾರ್ಯ ಆಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಅಲ್ಲಿಂದ ಯಾವುದೇ ಮಂತ್ರಿ ಪದವಿ ಕ್ಷೇತ್ರಕ್ಕೆ ದಕ್ಕಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್‌ವೈಜಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಅವರಿಗೆ ಮಂತ್ರಿ ಸ್ಥಾನ ಸಿಗುವ ನಿರೀಕ್ಷೆ ಹೊಂದಲಾಗಿದೆ.2004ರ ಚುನಾವಣೆಯ ವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದ ಈ ಕ್ಷೇತ್ರ 2008ರಲ್ಲಿ ಪರಿಶಿಷ್ಟ ವರ್ಗಕ್ಕೆ ಮೀಸಲಾಯಿತು. 2004ರಲ್ಲಿ ಜನತಾಪಕ್ಷದಿಂದ ಸ್ಪರ್ಧೆ ಮಾಡಿದ್ದ ರೆಡ್ಡಿ ಲಿಂಗಾಯತ ಕೋಮಿನ ಎಚ್.ಟಿ. ನಾಗರೆಡ್ಡಿ ಮುಂದಿನ ಚುನಾವಣೆಯಲ್ಲಿ ಇಲ್ಲಿಂದ ಆಯ್ಕೆ ಖಚಿತ ಎಂಬ ಮಾತುಗಳ ಬೆನ್ನಲ್ಲಿಯೇ 2008ರ ಚುನಾವಣೆಯಲ್ಲಿ ಕ್ಷೇತ್ರ ಎಸ್‌ಟಿಗೆ ಮೀಸಲಾದ ಪರಿಣಾಮ ಅವರ ಸ್ಪರ್ಧೆಗೆ ಅವಕಾಶ ಸಿಗಲಿಲ್ಲ. ನಂತರ ಅವರ ಸ್ಥಾನಕ್ಕೆ ಬಂದವರು ನೇರ್ಲಗುಂಟೆ ತಿಪ್ಪೇಸ್ವಾಮಿ. ಈ ಬಾರಿ ನೇರ್ಲಗುಂಟೆ ತಿಪ್ಪೇಸ್ವಾಮಿ ಬಿಜೆಪಿ ತೊರೆದು ಬಿಎಸ್‌ಆರ್‌ನಿಂದ ಸ್ಪರ್ಧೆ ಮಾಡಲು ಹೊರಟಿದ್ದು ಇವರಿಗೆ ಕಾಂಗ್ರೆಸ್‌ನ್ನು ಶತಾಯುಗತಾಯ ಸೋಲಿಸಲೇ ಬೇಕು ಎಂದು ನಾಗರೆಡ್ಡಿ ಬಿಎಸ್‌ಆರ್‌ನ ಪ್ರಚಾರ ಸಾರಥ್ಯ ವಹಿಸಿದ್ದಾರೆ.ಬಿಜೆಪಿಯಿಂದ ದಾಸವಿ ಕೀರ್ತಿಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ.ಬಳ್ಳಾರಿ ನಗರಪಾಲಿಕೆ ಸದಸ್ಯ ಕೆ.ಎಸ್. ದಿವಾಕರ್ ಮತ್ತು ನಾಲ್ಕು ಬಾರಿ ಜನತಾ ಪರಿವಾರದಿಂದ ಸ್ಪರ್ಧಿಸಿ ಪರಾಭವಗೊಂಡಿರುವ ಎತ್ನಟ್ಟಿಗೌಡ ಜೆಡಿಎಸ್ ತೊರೆದು ಬಿಎಸ್‌ಆರ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರಿಗೆ ಟಿಕೆಟ್ ಸಿಕ್ಕಿದೆ. ಉಳಿದಂತೆ ಕೆಜೆಪಿ ದಾಕ್ಷಾಯಣಮ್ಮ ಅವರಿಗೆ ಟಿಕೆಟ್ ನೀಡಿರುವುದು ಹೊರತುಪಡಿಸಿದಲ್ಲಿ  ಬಿಎಸ್‌ಆರ್, ಜೆಡಿಎಸ್ ಟಿಕೆಟ್ ಗುಟ್ಟು ಬಿಟ್ಟುಕೊಟ್ಟಿಲ್ಲ. ಬಿಎಸ್‌ಆರ್ ಟಿಕೆಟ್‌ಗೆ ಹೆಚ್ಚಿನ ಪೈಪೋಟಿ ಇದ್ದು ಸಂಸ್ಥಾಪಕ ಶ್ರೀರಾಮುಲು ಅಥವಾ ಸಂಸತ್ ಸದಸ್ಯೆ ಶಾಂತಾ ಅವರೇ ಇಲ್ಲಿಂದ ಸ್ಪರ್ಧೆ ಮಾಡಬಹುದು ಎಂಬ ವದಂತಿ ಹಬ್ಬಿದೆ.ಮೊಳಕಾಲ್ಮುರು ತಾಲ್ಲೂಕಿನ ಹನುಮನಗುಡ್ಡದಿಂದ ಚಳ್ಳಕೆರೆ ತಾಲ್ಲೂಕಿನ ಗಡಿಭಾಗದ ಓಬಳಾಪುರ ವರೆಗೆ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ಹರಡಿಕೊಂಡಿದ್ದು 100 ಕಿಮೀ ಹೆಚ್ಚು ಸುತ್ತಳತೆ ಹೊಂದುವ ಮೂಲಕ ಜಿಲ್ಲೆಯಲ್ಲಿಯೇ ಅತಿದೊಡ್ಡ ವಿಧಾನಸಭಾ ಕ್ಷೇತ್ರವಾಗಿದೆ. ಬಡತನ, ನಿರುದ್ಯೋಗ, ಮಳೆ ಕೊರತೆ, ಬರಗಾಲಕ್ಕೆ ಸಂಬಂಧಪಟ್ಟ ದಟ್ಟ ಲಕ್ಷಣಗಳನ್ನು ಕಾಣಬೇಕಾದಲ್ಲಿ ಇಲ್ಲಿಗೆ ಬರಬೇಕು ಎನ್ನುವ ಜತೆಗೆ ಶಾಪಗ್ರಸ್ತ ಕ್ಷೇತ್ರವೆಂದೂ ಹೆಸರು ಪಡೆದುಕೊಂಡಿದೆ.ಇಂತಹ ಸ್ಥಿತಿಯಲ್ಲಿ ಈಗ ಮತ್ತೊಂದು ಚುನಾವಣೆ ಎದುರಾಗಿದ್ದು, ರಾಜಕೀಯ ಲೆಕ್ಕಾಚಾರಗಳು ಎಲ್ಲೆಡೆ ಚುರುಕಿನಿಂದ ನಡೆಯುತ್ತಿವೆ. ಇದರಲ್ಲಿ ಮುಖ್ಯವಾಗಿ ಎನ್‌ವೈಜಿ ಸತತ 5ನೇ ಬಾರಿ ಜಯಶಾಲಿಯಾಗುವರೇ ಎಂಬ ನಿರೀಕ್ಷೆ, ಹಾಗೂ ಕುತೂಹಲ ಕ್ಷೇತ್ರದ ಮತದಾರಲ್ಲಿದೆ.ಪ್ರತಿಕ್ರಿಯಿಸಿ (+)