ಗುರುವಾರ , ನವೆಂಬರ್ 21, 2019
26 °C

ಕಾಂಗ್ರೆಸ್ ಮುಖಂಡರಿಂದ ಒಗ್ಗಟ್ಟಿನ ಜಪ

Published:
Updated:

ಬೆಂಗಳೂರು: ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ತನಗೆ ಸಮಾನ ಎದುರಾಳಿಗಳು ಎಂದು ಘೋಷಿಸಿದೆ. ಈ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರ ಹಿಡಿಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು, ಗುರಿ ಸಾಧನೆಗಾಗಿ ಒಗ್ಗಟ್ಟಿನ ಮಂತ್ರ ಜಪಿಸಿದರು.ನಗರದ ಮಲ್ಲೇಶ್ವರ ಆಟದ ಮೈದಾನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕೆಪಿಸಿಸಿ ಚುನಾವಣಾ ಪ್ರಚಾರಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ರಾಜ್ಯ ಕಾಂಗ್ರೆಸ್ ನಾಯಕರು, ಕೇಂದ್ರ ಸಚಿವರು, ಸಂಸದರು, ಶಾಸಕರು, ಎಐಸಿಸಿ ಮತ್ತು ಕೆಪಿಸಿಸಿ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.ಬಿಜೆಪಿ, ಜೆಡಿಎಸ್ ಸೇರಿದಂತೆ ಎದುರಾಳಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, `ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದು ದುರಾಡಳಿತ ನಡೆಸಲು ಜೆಡಿಎಸ್ ನೇರ ಕಾರಣ. ಬಿಜೆಪಿ ಬಹಿರಂಗವಾಗಿ ಕೋಮುವಾದವನ್ನು ಬೆಂಬಲಿಸುತ್ತದೆ. ಅಷ್ಟೇ ಅಪಾಯಕಾರಿಯಾದ ಜೆಡಿಎಸ್ ಜಾತ್ಯತೀತತೆಯ ಮುಖವಾಡ ಧರಿಸಿರುವ ಕೋಮುವಾದಿ ಪಕ್ಷ' ಎಂದರು.

`ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿ ಲೋಕಾಯುಕ್ತರು ಸಲ್ಲಿಸಿರುವ ವರದಿಯನ್ನು ಬಿಜೆಪಿ ಸರ್ಕಾರ ಕಸದಬುಟ್ಟಿಗೆ ಹಾಕಿದೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವರದಿಯನ್ನು ಅನುಷ್ಠಾನಕ್ಕೆ ತರುತ್ತದೆ. ಲೋಕಾಯುಕ್ತರ ಶಿಫಾರಸಿನಂತೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿ, ಅಕ್ರಮ ಗಣಿಗಾರಿಕೆ ನಡೆಸಿದವರಿಂದ ನಷ್ಟ ವಸೂಲಿ ಮಾಡುತ್ತದೆ' ಎಂದು ಘೋಷಿಸಿದರು.ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, `ರಾಜ್ಯದಲ್ಲಿ ಐದು ವರ್ಷಗಳ ಕಾಲ ಅಧಿಕಾರ ನಡೆಸಿದ ಬಿಜೆಪಿ ಭ್ರಷ್ಟಾಚಾರದ ಮೂಲಕ ಕರ್ನಾಟಕದ ಗೌರವಕ್ಕೆ ಮಸಿ ಬಳಿದಿದೆ. ಹಲವು ಸಚಿವರು ಜೈಲಿಗೆ ಹೋದರು. ಭೂ ಹಗರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ಬಿಜೆಪಿ ಸರ್ಕಾರದ 22 ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. 2008ರಿಂದ ಈವರೆಗೆ ಬಿಜೆಪಿ ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳ ಸಮಗ್ರ ವಿವರವುಳ್ಳ ಆರೋಪಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ' ಎಂದರು.

`ಸಿ.ಎಂ ಚಿಂತೆ ಬಿಡಿ'

`ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮೂರನೇ ಎರಡರಷ್ಟು ಬಹುಮತ ನೀಡಲು ಜನರು ಸಿದ್ಧರಿದ್ದಾರೆ. ಅದನ್ನು ಕ್ರೋಡೀಕರಿಸಲು ಪಕ್ಷದ ನಾಯಕರು, ಕಾರ್ಯಕರ್ತರು ಶ್ರಮಿಸಬೇಕು. ಅಧಿಕಾರ ಹಿಡಿಯುವುದಕ್ಕಿಂತ ರಾಜ್ಯದ ಘನತೆಯನ್ನು ಮರಳಿ ತರುವುದು ನಮಗೆ ಮುಖ್ಯವಾಗಬೇಕು' ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.ಅಭ್ಯರ್ಥಿಗಳ ಆಯ್ಕೆಯಲ್ಲಿ ಕೆಲವೆಡೆ ಸಣ್ಣಪುಟ್ಟ ತಪ್ಪುಗಳಾಗಬಹುದು. ಕಾಂಗ್ರೆಸ್ ಒಂದು ಸಮುದ್ರ. ಇಲ್ಲಿಗೆ ಹಲವಾರು ನದಿಗಳು, ಕಾಲುವೆಗಳು ಬಂದು ಸೇರುತ್ತವೆ. ಯಾವುದೋ ಒಂದು ಕಾಲುವೆಯಲ್ಲಿ ಸ್ವಲ್ಪ ಕೆಟ್ಟ ನೀರು ಬಂದು ಸೇರಿದರೆ ಇಡೀ ಸಮುದ್ರವೇ ಕೊಳಕಾಯಿತು ಎಂದು ಭಾವಿಸಕೂಡದು ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದರು.ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ, ಸಹ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ವಿ.ಹನುಮಂತರಾವ್, ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ಚಿತ್ರನಟಿ ಭಾವನಾ, ಮುಖಂಡರಾದ ಸಚಿವ ಸಿ.ಕೆ.ಜಾಫರ್ ಷರೀಫ್, ಆರ್.ವಿ.ದೇಶಪಾಂಡೆ ಮಾತನಾಡಿದರು. ಚುನಾವಣಾ ಕಾರ್ಯತಂತ್ರ ಸಮಿತಿ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ತಮ್ಮ ಎಂದಿನ ಶೈಲಿಯಲ್ಲೇ ಬಿಜೆಪಿ ನಾಯಕರ ವಿರುದ್ಧ ವಾಕ್‌ಪ್ರಹಾರ ಮಾಡಿದರು.

ಕಾಂಗ್ರೆಸ್ ವೇದಿಕೆಯಲ್ಲಿ ಸಾಹಿತಿಗಳು

ಬೆಂಗಳೂರು: ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಜಿ.ಕೆ.ಗೋವಿಂದರಾವ್ ಮತ್ತು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ದಾರೆ.ನಗರದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಈ ಮೂವರು ಸಾಹಿತಿಗಳು ಕಾಣಿಸಿಕೊಂಡರು. ಬಿಜೆಪಿ ಮತ್ತೆ ಅಧಿಕಾರ ಹಿಡಿಯುವುದನ್ನು ತಪ್ಪಿಸುವುದಕ್ಕಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿರುವುದಾಗಿ ಘೋಷಿಸಿದರು.`ರಾಜ್ಯದ ನಾಗರಿಕರ ಪ್ರತಿನಿಧಿಗಳಾಗಿ ನಾವು ಇಲ್ಲಿ ಬಂದಿದ್ದೇವೆ. ಕಣ್ಣೆದುರಿನಲ್ಲಿ ದುರಾಡಳಿತ ನಡೆಯುವುದನ್ನು ನೋಡಿದ ಮೇಲೂ ತಟಸ್ಥರಾಗಿ ಉಳಿಯುವುದು ಸಲ್ಲ. ನಮ್ಮಿಂದ ಸಾಧ್ಯ ಆಗಬಹುದಾದ ಕೆಲಸವನ್ನು ಮಾಡಲೇಬೇಕು. ಅದನ್ನೇ ನಾವು ಈಗ ಮಾಡುತ್ತಿದ್ದೇವೆ' ಎಂದು ಗೋವಿಂದರಾವ್ ಹೇಳಿದರು.ಮರುಳಸಿದ್ದಪ್ಪ ಮಾತನಾಡಿ, `ಸ್ಥಿರ ಸರ್ಕಾರವನ್ನು ಪಡೆಯುವುದಕ್ಕೆ ರಾಜ್ಯದ ಜನರ ಎದುರು ಹೆಚ್ಚಿನ ಆಯ್ಕೆಗಳಿಲ್ಲ. ಬಿಜೆಪಿ ಕೋಮುವಾದಿ ಪಕ್ಷ. ಜಾತ್ಯತೀತ ತತ್ವದ ಹಣೆಪಟ್ಟಿ ಅಂಟಿಸಿಕೊಂಡಿರುವ ಜೆಡಿಎಸ್‌ನಿಂದಾಗಿಯೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಮಾತ್ರ ನಮಗಿರುವ ಆಯ್ಕೆ. ಅದಕ್ಕಾಗಿಯೇ ನಾವು ಬೆಂಬಲ ನೀಡುತ್ತಿದ್ದೇವೆ' ಎಂದು ಹೇಳಿದರು.

ಕಾಂಗ್ರೆಸ್‌ಗೆ ಸುಧಾಕರ್ ರಾಜೀನಾಮೆ

ಚಿಂತಾಮಣಿ: ಕ್ಷೇತ್ರದ ಶಾಸಕ ಡಾ.ಎಂ.ಸಿ.ಸುಧಾಕರ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಚಿಂತಾಮಣಿ ವಿಧಾನಸಭೆ ಕ್ಷೇತ್ರದಿಂದ 2004 ಮತ್ತು 2008ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.ವೈಯಕ್ತಿಕ ಕಾರಣಗಳಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಅವರು ತಿಳಿಸಿದ್ದಾರೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಡಾ.ಸುಧಾಕರ್ ಸಿದ್ಧತೆ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)