ಭಾನುವಾರ, ನವೆಂಬರ್ 17, 2019
25 °C

ಕಾಂಗ್ರೆಸ್ ಮುಖಂಡರಿಂದ ಕೃಷ್ಣ ಭೇಟಿ

Published:
Updated:

ಬೆಂಗಳೂರು: ಕೇಂದ್ರ ಸಚಿವರಾದ ಎ.ಕೆ.ಆಂಟನಿ, ಅಂಬಿಕಾ ಸೋನಿ. ಜಿತೇಂದ್ರ ಸಿಂಗ್, ರಾಜ್ಯ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಮತ್ತಿತರರು ಬುಧವಾರ ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರನ್ನು ಭೇಟಿಮಾಡಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.ಬೆಳಿಗ್ಗೆ ನಡೆದ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಮಾರಂಭದಿಂದ ಕೃಷ್ಣ ದೂರ ಉಳಿದಿದ್ದರು. ಸಂಜೆ ಸದಾಶಿವನಗರದ ಕೃಷ್ಣ ನಿವಾಸಕ್ಕೆ ತೆರಳಿದ ಆಂಟನಿ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗ ಕೆಲಕಾಲ ಅವರೊಂದಿಗೆ ಚರ್ಚೆ ನಡೆಸಿತು.ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿದ್ದ ಗೋವಾದ ಮಾಜಿ ಮುಖ್ಯಮಂತ್ರಿ ಲೂಸಿಯಾನೊ ಫೆಲೆರೊ, ಕಾಂಗ್ರೆಸ್ ಮುಖಂಡರಾದ ಸಿ.ಕೆ.ಜಾಫರ್ ಷರೀಫ್ ಕೂಡ ನಿಯೋಗದಲ್ಲಿದ್ದರು. ಕಾಂಗ್ರೆಸ್ ಮೂಲಗಳ ಪ್ರಕಾರ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸೂಚನೆ ಮೇರೆಗೆ ಈ ಭೇಟಿ ನಡೆದಿದೆ.ಟಿಕೆಟ್ ಹಂಚಿಕೆ, ಚುನಾವಣಾ ಸಿದ್ಧತೆಗೆ ಸಂಬಂಧಿಸಿದಂತೆ ಪಕ್ಷ ತಮ್ಮನ್ನು ಕಡೆಗಣಿಸಿದೆ ಎಂದು ಕೃಷ್ಣ ಮುನಿಸಿಕೊಂಡಿದ್ದರು. ಇದರಿಂದ ಒಕ್ಕಲಿಗ ಸಮುದಾಯದ ವಿರೋಧವನ್ನೂ ಎದುರಿಸಬೇಕಾಗಬಹುದು ಎಂಬ ಆತಂಕವನ್ನು ಪಕ್ಷದ ಹಲವು ಮುಖಂಡರು ವ್ಯಕ್ತಪಡಿಸಿದ್ದರು. ಈ ಕಾರಣಕ್ಕಾಗಿಯೇ ಅವರ ಜೊತೆ ಮಾತುಕತೆ ನಡೆದಿದೆ. ತಮ್ಮನ್ನು ಕಡೆಗಣಿಸಿಲ್ಲ ಎಂಬುದನ್ನು ಕೃಷ್ಣ ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವೂ ನಿಯೋಗದಿಂದ ನಡೆದಿದೆ ಎಂದು ಮೂಲಗಳು ತಿಳಿಸಿವೆ.ಭೇಟಿಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಆಂಟನಿ, `ಹಿರಿಯರಾದ ಕೃಷ್ಣ ಅವರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಿದೆ. ಕರ್ನಾಟಕದ  ಘನತೆಯನ್ನು ಮರುಸ್ಥಾಪಿಸುವುದಕ್ಕೂ ಅವರ ಮಾರ್ಗದರ್ಶನ ಬೇಕು. ಈ ಕಾರಣಕ್ಕಾಗಿಯೇ ಅವರನ್ನು ಭೇಟಿ ಮಾಡಿದ್ದೇವೆ. ಕೃಷ್ಣ ಹಾಗೂ ಜಾಫರ್ ಷರೀಫ್ ಹಿರಿಯ ನಾಯಕರು. ಅವರೊಂದಿಗೆ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದೇವೆ' ಎಂದರು.ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೃಷ್ಣ ಅವರ ಸಹಕಾರ ಅಗತ್ಯ. ಚುನಾವಣಾ ಪ್ರಚಾರ, ಪಕ್ಷದ ಭವಿಷ್ಯದ ನಡೆಗಳು ಮತ್ತಿತರ ವಿಷಯಗಳ ಕುರಿತು ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.

ಪಕ್ಷದಲ್ಲಿರುವ ಭಿನ್ನಾಭಿಪ್ರಾಯ ಕುರಿತು ಪ್ರಶ್ನಿಸಿದಾಗ, `ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಕಾಂಗ್ರೆಸ್ ನಾಯಕರಿಗೆ ತಿಳಿದಿದೆ. ಶೀಘ್ರದಲ್ಲೇ ಎಲ್ಲವೂ ಸರಿಹೋಗಲಿದೆ. ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಈ ಭೇಟಿ ವೇಳೆ ಚರ್ಚೆ ನಡೆಸಿಲ್ಲ' ಎಂದು ಉತ್ತರಿಸಿದರು.ಭಿನ್ನಾಭಿಪ್ರಾಯ ಸಾಮಾನ್ಯ: ಎಲ್ಲ ಚುನಾವಣೆಗಳಲ್ಲೂ ಪಕ್ಷದೊಳಗೆ ಭಿನ್ನಾಭಿಪ್ರಾಯ ಸೃಷ್ಟಿಯಾಗುವುದು ಸಾಮಾನ್ಯ ಸಂಗತಿ. ಅದಕ್ಕೆ ಪರಿಹಾರ ಕಂಡುಕೊಳ್ಳಲು ಪಕ್ಷದ ನಾಯಕರು ಪ್ರಯತ್ನಿಸುತ್ತಾರೆ. ಈಗ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್‌ನ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಒಟ್ಟಾಗಿ ಶ್ರಮಿಸಬೇಕಿದೆ ಎಂದು ಕೃಷ್ಣ ಪ್ರತಿಕ್ರಿಯಿಸಿದರು.`ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಹತ್ತು ವರ್ಷಗಳಾಗಿದೆ. ಇದರಿಂದಾಗಿ ಪಕ್ಷದ ಕಾರ್ಯಕರ್ತರಿಗೂ ತೊಂದರೆ ಉಂಟಾಗಿದೆ. ಈಗ ದೊರೆತಿರುವ ಅವಕಾಶವನ್ನು ಕಳೆದುಕೊಳ್ಳಲು ಕಾಂಗ್ರೆಸ್ ಬಯಸುವುದಿಲ್ಲ. ನಾನು ಈಗಾಗಲೇ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ' ಎಂದರು.ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿ ಇಲ್ಲ. ಪಕ್ಷ ಬಹುಮತ ಗಳಿಸಿದರೆ ಶಾಸಕರೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)