ಕಾಂಗ್ರೆಸ್ ಮುಖಂಡರ ದೌರ್ಜನ್ಯ: ಸೋನಿಯಾಗೆ ರೈತ ವಿಧವೆಯ ಪತ್ರ

7

ಕಾಂಗ್ರೆಸ್ ಮುಖಂಡರ ದೌರ್ಜನ್ಯ: ಸೋನಿಯಾಗೆ ರೈತ ವಿಧವೆಯ ಪತ್ರ

Published:
Updated:

ನಾಗಪುರ (ಪಿಟಿಐ): ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಪೊಲೀಸರ ದೌರ್ಜನ್ಯದಿಂದ ತಮಗೆ ಆತ್ಮಹತ್ಯೆಯ ದಾರಿ ಮಾತ್ರ ಉಳಿದಿದೆ ಎಂದು ಇಲ್ಲಿನ ರೈತ ವಿಧವೆಯೋರ್ವರು ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.ಇತ್ತೀಚೆಗಷ್ಟೆ ಟಿವಿ ಚಾನೆಲ್‌ವೊಂದರ `ಕೌನ್ ಬನೇಗಾ ಕೌರಡ್ ಪತಿ~ ಕಾರ್ಯಕ್ರಮದಿಂದ ಪ್ರಸಿದ್ದಿಯಾದ ಅಪರ್ಣಾ ಮಾಲೀಕಾರ್ ಎಂಬ ವಿಧವೆಯೇ ಈ ಪತ್ರ ಬರೆದಿದ್ದು, ತಮಗೆ ಸ್ಥಳಿಯ ಕಾಂಗ್ರೆಸ್ ಮುಖಂಡರು ಹಾಗೂ ಪೊಲೀಸರು ನೀಡುತ್ತಿರುವ ಕಿರುಕುಳ ನಿಲ್ಲದೆ ಹೋದಲ್ಲಿ ತಾವು, ತಮ್ಮ ಸಹೋದರ ಹಾಗೂ ತಂದೆಯೊಡನೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ.

ರೈತರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ವಿಧವೆಯರಿಗೆ ಆಸ್ತಿಯ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಮಾತ್ರವಲ್ಲ, ಜಮೀನಿನಲ್ಲಿ ಉಳುಮೆ ಮಾಡುವುದಕ್ಕೂ ಅವಕಾಶ ನೀಡಲಾಗುತ್ತಿಲ್ಲ ಎಂಬುದು ಈಕೆಯ ಪ್ರಮುಖ ಆಪಾದನೆಯಾಗಿದೆ. ಈಕೆಯ ಪತಿ ಸಂಜಯ್ ಮಾಲೀಕರ್ ಅವರು ರೈತರಾಗಿದ್ದು, ಹತ್ತಿ ಬೆಳೆಯುತ್ತಿದ್ದರು. ಬೆಳೆ ನಾಶ ಹಾಗೂ ಸಾಲದ ಹೊರೆ ತಾಳಲಾರದೆ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡರು. ಆದರೆ ಇವರ ಸಹೋದರ ಕಾಂಗ್ರೆಸ್ ಮುಖಂಡರಾಗಿದ್ದು, ಇವರು ತಮ್ಮ ಪ್ರಭಾವ ಬಳಸಿ ತಮಗೆ ನ್ಯಾಯಬದ್ಧವಾಗಿ ಸೇರಬೇಕಾದ ಜಮೀನಿನಲ್ಲಿ ಉಳುಮೆ ಮಾಡುವುದಕ್ಕೆ ಅವಕಾಶ ನೀಡುತ್ತಿಲ್ಲ ಅಲ್ಲದೆ ಪೊಲೀಸರನ್ನು ಬಳಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ಅಪರ್ಣಾ ಪತ್ರದಲ್ಲಿ ಆರೋಪಿಸಿದ್ದಾರೆ.ತಮ್ಮ ಪತಿ ಆತ್ಮಹತ್ಯೆ ಮಾಡಿಕೊಂಡ ನಂತರ ತಮ್ಮನ್ನು ಹಾಗೂ ತಮ್ಮ ಮಕ್ಕಳನ್ನು ಮನೆಯಿಂದ ಹೊರ ಹಾಕಿದರು. ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ವಾಸ ಮಾಡ ಹೋದರೆ ಅಲ್ಲಿಂದಲೂ ತಮ್ಮನ್ನು ಓಡಿಸಲಾಯಿತು ಮಾತ್ರವಲ್ಲ ಉಳುಮೆಗೆ ಅವಕಾಶ ನೀಡಲೇ ಇಲ್ಲ. ಆದರೆ ತಮ್ಮ ಪತಿಯ ಸಾಲವನ್ನೂ ತೀರಿಸದೆ ಅವರ ಜಮೀನಿನಲ್ಲಿ ತಮ್ಮ ಮೈದುನರು ಸಾಗುವಳಿ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಅಷ್ಟು ಸಾಲದೆಂಬಂತೆ ಕಾಂಗ್ರೆಸ್‌ನ ಸ್ಥಳಿಯ ಮುಖಂಡರಾಗಿರುವ ತಮ್ಮ ಮೈದುನ ಪೊಲೀಸರಲ್ಲಿ ಸುಳ್ಳು ದೂರು ನೀಡಿ ತಮ್ಮ ತಂದೆ ಹಾಗೂ ಸಹೋದರರನ್ನು ಜೈಲಿಗೆ ತಳ್ಳಿದ್ದಾರೆ.ಇದೇ ರೀತಿಯ ಸಮಸ್ಯೆಯನ್ನು ಈಕೆ ಮಾತ್ರವಲ್ಲ ಸಾವಿರಾರು ರೈತ ವಿಧವೆಯರು ಈ ಭಾಗದಲ್ಲಿ ಎದರಿಸುತ್ತಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಹೊರಗೆಡಹಿದ್ದು, ಸಮಸ್ಯೆಯ ವ್ಯಾಪಕತೆಯನ್ನು ಇದು ತೋರಿಸುತ್ತದೆ.ಸರಿಸುಮಾರು 8 ಸಾವಿರ ಮಂದಿ ರೈತರು ಕೆಲ ವರ್ಷಗಳಿಂದೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ವಿಧವೆಯರು ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಅವರು ತಮ್ಮ ತಿಳಿಸಿದ್ದಾರೆ. ಅಲ್ಲದೆ ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವೆಯರಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು ಮತ್ತು ಅವರ ರಕ್ಷಣೆಗೆ ಕಾನೂನನ್ನು ರೂಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry