ಮಂಗಳವಾರ, ಜೂನ್ 22, 2021
28 °C

ಕಾಂಗ್ರೆಸ್ ಮುಳುಗುವ, ಬಿಜೆಪಿ ಅರಳುವ ಪಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ಉಡುಪಿ  ಜಿಲ್ಲೆಯಲ್ಲಿ ಡಾ.ವಿ.ಎಸ್.ಆಚಾರ್ಯ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಬಹುಮತದಿಂದ ಗೆಲ್ಲಲು ನೆರವಾಗಲಿದೆ~ ಎಂದು ಬಿಜೆಪಿ ಮುಖಂಡ ಮುಖ್ಯಮಂತ್ರಿ ಚಂದ್ರು ಇಲ್ಲಿ ಅಭಿಪ್ರಾಯಪಟ್ಟರು.ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆ ಬಹಿರಂಗ ಪ್ರಚಾರದ ಅಂತಿಮ ದಿನವಾದ ಶುಕ್ರವಾರ ಉಡುಪಿ ನಗರದಲ್ಲಿ ಬಿಜೆಪಿ ಮುಖಂಡರು ಪಾದಯಾತ್ರೆ ನಡೆಸಿ ಬಳಿಕ ಚಿತ್ತರಂಜನ್ ವೃತ್ತದಲ್ಲಿ ಬಹಿರಂಗ ಪ್ರಚಾರ ನಡೆಸಿದರು.ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಹಳಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಇತರ ಜಿಲ್ಲೆಗಳಿಗೆ ಅನುದಾನ ಹೋಗುವಲ್ಲಿ ತಾರತಮ್ಯ ಆಗಿದೆಯೇನೋ ಎನ್ನುವಷ್ಟು ಅಭಿವೃದ್ಧಿ ಕೆಲಸಗಳು ಇಲ್ಲಿ ಕಣ್ಣಿಗೆ ಬೀಳುತ್ತಿವೆ. ನಮ್ಮ ಮೇಲಿನ ಭ್ರಷ್ಟಾಚಾರದ ಬಗ್ಗೆ ವೃಥಾ ಆರೋಪ ಮಾಡುವ ಬದಲು ಇತರೆ ಅಭಿವೃದ್ಧಿ ಕೆಲಸಗಳತ್ತ ಕಾಂಗ್ರೆಸ್ ಗಮನ ಹರಿಸುವುದು ಒಳಿತು ಎಂದು ಹೇಳಿದರು.ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಅಧಿಕಾರ ಮಾಡಿ ಬಿಟ್ಟ ಮೇಲಿನ ಕೊಳೆ ತೊಳೆಯುವುದು ಬಿಜೆಪಿಗೆ ಕೇವಲ ಮೂರುವರೆ ವರ್ಷದಲ್ಲಿ ಆಗುವ ಕೆಲಸವಲ್ಲ, ಆದರೂ ಬಿಜೆಪಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ ಎಂದು ಹೇಳಿದರು.`ಕಾಂಗ್ರೆಸ್ ಮುಳುಗುವ ಪಕ್ಷ, ಬಿಜೆಪಿ ಅರಳುವ ಪಕ್ಷ~: ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ವೈಯಕ್ತಿಕ ನಿಂದನೆ ಬಿಟ್ಟು ಕಾಂಗ್ರೆಸ್ ತನ್ನ ಸಾಧನೆಹೇಳಿಕೊಂಡು ಚುನಾವಣೆ ಎದುರಿಸಬೇಕು ಎಂದು ಹೇಳಿದರು. `ಕಾಂಗ್ರೆಸ್ ಮುಳುಗುವ ಪಕ್ಷ, ಬಿಜೆಪಿ ಅರಳುವ ಪಕ್ಷ~ ಎಂದು ಲೇವಡಿ ಮಾಡಿದ ಅವರು, ಕಳೆದ 25 ವರ್ಷಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಈ ಕ್ಷೇತ್ರಕ್ಕೆ ಮಾಡಿರುವ ಕೊಡುಗೆ ಹಾಗೂ ತಮ್ಮ ಸಾಧನೆಗಳನ್ನು ಸಾರ್ವಜನಿಕರ ಎದುರು ಇಡಲಿ ಹಾಗೂ ಬಿಜೆಪಿ ಕೇವಲ ಮೂರುವರೆ ವರ್ಷದಲ್ಲಿ ಮಾಡಿದ ಸಾಧನೆಗಳ ಪಟ್ಟಿಯನ್ನು ಹೋಲಿಕೆ ಮಾಡಲಿ ಎಂದು ಸವಾಲು ಹಾಕಿದರು.ಸಚಿನ್‌ಗೆ ಅಭಿನಂದನೆ: 5 ಗಂಟೆಗೆ ಚಿತ್ತರಂಜನ್ ವೃತ್ತದಲ್ಲಿ ನಡೆಸುತ್ತಿದ್ದ ಬಹಿರಂಗ ಪ್ರಚಾರ ಕಾರ್ಯವನ್ನು ಮುಕ್ತಾಯಗೊಳಿಸಿದ ಬಿಜೆಪಿ ಅದೇ ಸಂದರ್ಭದಲ್ಲಿ ಕಾಕತಾಳೀಯ ಎಂಬಂತೆ ಸಚಿನ್ ತೆಂಡೂಲ್ಕರ್ ತಮ್ಮ ನೂರನೇ ಶತಕ ಬಾರಿಸಿದ ಸುದ್ದಿಯೂ ಕೇಳಿ ಬಂದಿತು. ಹೀಗಾಗಿ ಪಕ್ಷದ ವತಿಯಿಂದ ಅದೇ ಸಂದರ್ಭದಲ್ಲಿ ಸಚಿನ್‌ಗೆ ಅಭಿನಂದನೆ ಸಲ್ಲಿಸಲಾಯಿತು.ಮುಖಂಡರಾದ ಶಾಸಕ ರಘುಪತಿ ಭಟ್, ನಾಗರಾಜ ಶೆಟ್ಟಿ, ಯಶಪಾಲ ಸುವರ್ಣ, ಕಿರಣ್ ಕುಮಾರ್, ಶೀಲಾ ಕೆ.ಶೆಟ್ಟಿ, ಶ್ಯಾಮಲಾ ಕುಂದರ್, ಜ್ಯೋತಿ ಪುತ್ರನ್, ಸುಧಾಕರ ಶೆಟ್ಟಿ, ಸುರೇಶ್ ನಾಯಕ್, ಮಟ್ಟಾರು ರತ್ನಾಕರ ಹೆಗ್ಡೆ, ರಾಘವೇಂದ್ರ ಕಿಣಿ, ಎನ್.ಬಿ.ಅಬೂಬಕ್ಕರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.