ಕಾಂಗ್ರೆಸ್ ವೇದಿಕೆಯಲ್ಲಿ ಗುಂಪುಗಳ ರಂಪಾಟ

7

ಕಾಂಗ್ರೆಸ್ ವೇದಿಕೆಯಲ್ಲಿ ಗುಂಪುಗಳ ರಂಪಾಟ

Published:
Updated:

ಶ್ರೀರಂಗಪಟ್ಟಣ: ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಲು ಶನಿವಾರ ಇಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ವೀಕ್ಷಕರ ಸಮ್ಮುಖದಲ್ಲೇ ವೇದಿಕೆಯಲ್ಲಿ ಎರಡು ಗುಂಪುಗಳ ನಡುವೆ ತಳ್ಳಾಟ ನಡೆಯಿತು.ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆದ ಸಭೆಯಲ್ಲಿ ಅಂಬರೀಷ್ ಗುಂಪು ಮತ್ತು ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗ ಕಾರ್ಯಕರ್ತರ ಗುಂಪುಗಳ ನಡುವೆ ಮಾತಿನ ಚಕಮಕಿ, ವಾಗ್ವಾದಗಳು ಒಂದು ತಾಸಿಗೂ ಹೆಚ್ಚು ಕಾಲ ನಡೆದವು. ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.ಎಐಸಿಸಿ ವೀಕ್ಷಕ ಕೊಟ್ಟು ಸತ್ಯನಾರಾಯಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು ಎದುರಿನಲ್ಲೇ ಈ ರಂಪಾಟ ನಡೆಯಿತು. ಬ್ಲಾಕ್ ಕಾಂಗ್ರೆಸ್ ಮುಖಂಡರು ಮತ್ತು ಅಂಬರೀಷ್ ಬೆಂಬಲಿಗರು ಇದ್ದ ಸಭೆಗೆ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ದಿಢೀರನೆ ನುಗ್ಗಿ ಅವಾಂತರ ಸೃಷ್ಟಿಸಿದರು. ಈ ಹಂತದಲ್ಲಿ ಎರಡೂ ಗುಂಪುಗಳ ಕಾಯಕರ್ತರು ಪರಸ್ಪರ ತಳ್ಳಾಡಿಕೊಂಡರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಆತ್ಮಾನಂದ ಸಭೆಯನ್ನು ಹತೋಟಿಗೆ ತರಲು ಯತ್ನಿಸಿದರಾದರೂ ಪ್ರಯೋಜನ ಆಗಲಿಲ್ಲ. ಪಕ್ಷದ ಮುಖಂಡರನ್ನು ಪ್ರತ್ಯೇಕವಾಗಿ ಕರೆದು ಅಭಿಪ್ರಾಯ ಸಂಗ್ರಹಿಸುವ ಯತ್ನ ನಡೆಯಿತು, ಆದರೆ ಸಭೆ ನಡೆಯುತ್ತಿದ್ದ ಶಿಕ್ಷಕರ ಭವನದ ಒಳ, ಹೊರಗೆ ಗದ್ದಲ ಮಿತಿ ಮೀರಿದ್ದರಿಂದ ಅದು ಸಾಧ್ಯವಾಗದೆ ವೀಕ್ಷಕರು ಕೈ ಚೆಲ್ಲಿದರು. ಈ ಮಧ್ಯೆ ಪುಟ್ಟ ವೇದಿಕೆ ಎರಡು ಬಾರಿ ಕುಸಿದು ಬಿತ್ತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಯೋಗಾನಂದ ಪಟೇಲ್ ಮತ್ತು ಎಸ್.ಎಲ್. ಲಿಂಗರಾಜು ಅದನ್ನು ಸರಿಪಡಿಸಿದರಾದರೂ ಮತ್ತೆ ಕುಸಿಯಿತು.ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು, `ನಾವೂ ಕಾಂಗ್ರೆಸ್ಸಿಗರಲ್ಲವೆ? ನಮ್ಮನ್ನೇಕೆ ಸಭೆಗೆ ಕರೆದಿಲ್ಲ?~ ಎಂದು ವೀಕ್ಷಕರನ್ನು ಪ್ರಶ್ನಿಸಿದರು. ಕೊಟ್ಟು ಸತ್ಯನಾರಾಯಣ ಅವರಿಗೆ ರವೀಂದ್ರ ಬೆಂಬಲಿಗರು ಲಿಖಿತ ಮನವಿ ಸಲ್ಲಿಸಿದರು.ವೀಕ್ಷಕರು ತೆರಳಿದ ನಂತರವೂ ಕಾಂಗ್ರೆಸ್ ಮುಖಂಡ ಭಾಸ್ಕರ್ (ಅಂಬರೀಷ್ ಗೌಡ) ಮತ್ತು ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry