ಸೋಮವಾರ, ಜನವರಿ 20, 2020
18 °C

ಕಾಂಗ್ರೆಸ್ ಸದಸ್ಯರಿಂದ ಬಹಿಷ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇವಪುರ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕ್ಷೇತ್ರದ ದೊಡ್ಡನೆಕ್ಕುಂದಿ ಗ್ರಾಮದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿದಂತೆ ವಿವಿಧ ಅರ್ಹ ಫಲಾನುಭವಿಗಳ ಸಾಧನ- ಸಲಕರಣೆಗಳ ವಿತರಣಾ ಸಮಾರಂಭವನ್ನು ಯಾವುದೇ ಮುನ್ಸೂಚನೆ ನೀಡದೆ ಹಾಗೂ ಪೂರ್ವ ಸಿದ್ಧತಾ ಸಭೆಯನ್ನು ನಡೆಸದೆ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಆರೋಪಿಸಿದ ಕ್ಷೇತ್ರದ ಒಟ್ಟು ಆರು ವಾರ್ಡ್‌ಗಳ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಸಮಾರಂಭವನ್ನು ಬಹಿಷ್ಕರಿಸಿದರು.`ಕಾರ್ಯಕ್ರಮವನ್ನು ಸಂಘಟಿಸುವ ಮೊದಲು ಜಂಟಿ ಆಯುಕ್ತ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಪೂರ್ವ ಸಿದ್ಧತಾ ಸಭೆಗೆ ಒಟ್ಟು ಆರು ವಾರ್ಡ್‌ಗಳ ಸದಸ್ಯರುಗಳನ್ನು ಆಹ್ವಾನಿಸಿಲ್ಲ. ಕೇವಲ ಸ್ಥಳೀಯ ಶಾಸಕರಾದ ಅರವಿಂದ ಲಿಂಬಾವಳಿ ಅವರ ಸೂಚನೆ ಮೇರೆಗೆ ಸಮಾರಂಭವನ್ನು ಬಿಬಿಎಂಪಿ ನಡೆಸಿದೆ. ಸರ್ಕಾರ ಗೊತ್ತುಪಡಿಸಿದ ನಿಯಮಾವಳಿಗಳನ್ನು ಗಾಳಿಗೆ ತೂರಿ ಬಿಜೆಪಿ ಪಕ್ಷದ ಸಮಾರಂಭವನ್ನಾಗಿ ಸಂಘಟಿಸಲಾಗಿದೆ~ ಎಂದು ವರ್ತೂರು ವಾರ್ಡ್‌ನ ಸದಸ್ಯ ಎಸ್.ಉದಯಕುಮಾರ್ ಹಾಗೂ ಹಗದೂರು ವಾರ್ಡ್ ಸದಸ್ಯಎಚ್.ಎ. ಶ್ರೀನಿವಾಸ್ ಆರೋಪಿಸಿದರು.`ಅಭಿವೃದ್ಧಿ ವಿಚಾರದಲ್ಲಿ ಸ್ಥಳೀಯ ಶಾಸಕರು ಪದೇ ಪದೇ ಪಕ್ಷ ಭೇದ - ಭಾವ ಮಾಡುತ್ತಿದ್ದಾರೆ. ಈ ಹಿಂದೆ ಗುಂಜೂರು ಗ್ರಾಮದಲ್ಲಿ ತಮ್ಮ ಹಾಗೂ ಬಿಜೆಪಿ ಪಕ್ಷದ ಬ್ಯಾನರ್ ಅನ್ನು ಕಟ್ಟಿಕೊಂಡು ಬಿಬಿಎಂಪಿ ಸಭೆ ನಡೆಸಿದ್ದರು ಎಂದು ತಿಳಿಸಿದ ಅವರು ಇಂದು ಸಹ ಮತ್ತೆ ಅಂತಹ ಘಟನೆ ಮರುಕಳಿಸಿದೆ ಎಂದರು.ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡ ಪಾಲಿಕೆಯ ಸದಸ್ಯರನ್ನು ಕಡೆಗೆಣಿಸುತ್ತಿದ್ದಾರೆ. ಅಂತೆಯೇ ಬಿಬಿಎಂಪಿ ಜಂಟಿ ಆಯುಕ್ತ ದೇವರಾಜು ಸಹ ಬಿಜೆಪಿ ಪಕ್ಷದ ಮುಖಂಡರಂತೆ ವರ್ತಿಸುತ್ತಿದ್ದಾರೆ~ ಎಂದು ಅವರು ದೂರಿದರು.`ಮತ್ತೆ ಏನಾದರೂ ಪಕ್ಷ ಭೇದ- ಭಾವ ತೋರಿ ಸದಸ್ಯರನ್ನು ಸಂಪರ್ಕಿಸದೇ ಬಿಬಿಎಂಪಿ ಸರ್ಕಾರಿ ಕಾರ್ಯಕ್ರಮವನ್ನು ಸಂಘಟಿಸಿದಲ್ಲಿ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು~ ಎಂದು ಎಚ್ಚರಿಕೆ ನೀಡಿದ ಅವರು, `ಹೊಸದಾಗಿ ಮತ್ತೊಂದು ದಿನಾಂಕವನ್ನು ಗೊತ್ತುಪಡಿಸಿ, ಎಲ್ಲಾ ವಾರ್ಡ್‌ಗಳ ಸದಸ್ಯರನ್ನು ಗಮನಕ್ಕೆ ತೆಗೆದುಕೊಂಡು ಕಾರ್ಯಕ್ರಮವನ್ನು ಸಂಘಟಿಸಬೇಕು~ ಎಂದು ಆಗ್ರಹಿಸಿದರು.ಆಂಜನೇಯ ರೆಡ್ಡಿ (ಕಾಡುಗೋಡಿ ವಾರ್ಡ್), ವರಲಕ್ಷ್ಮೀ (ಮಾರತ್‌ಹಳ್ಳಿ), ಬಿ.ಪಿ.ಬಾಬು ರೆಡ್ಡಿ (ಬೆಳ್ಳಂದೂರು), ಬಿ.ಎ.ಬಸವರಾಜು (ಹೂಡಿ), ಎಚ್.ಎಸ್.ಪಿಳ್ಳಪ್ಪ (ಗರುಡಾಚಾರ್ಯಪಾಳ್ಯ) ಸೇರಿದಂತೆ ಒಟ್ಟು ಆರು ಮಂದಿ ಕಾಂಗ್ರೆಸ್ ಬೆಂಬಲಿತ ಬಿಬಿಎಂಪಿ ಸದಸ್ಯರು ಸಮಾರಂಭಕ್ಕೆ ಹಾಜರಾಗದೇ ಬಹಿಷ್ಕರಿಸಿದರು. ಇದಕ್ಕೂ ಮೊದಲು ಮಹದೇವಪುರದಲ್ಲಿನ ಜಂಟಿ ಆಯುಕ್ತರ ಕಚೇರಿಗೆ ತೆರಳಿ ವಿರೋಧ ವ್ಯಕ್ತಪಡಿಸಿದರು.ಈ ಘಟನೆಯ ಹಿನ್ನೆಲೆಯಲ್ಲಿ ದೊಡ್ಡನೆಕ್ಕುಂದಿ ವಾರ್ಡ್ ವ್ಯಾಪ್ತಿಯ ಫಲಾನುಭವಿಗಳಿಗೆ ಮಾತ್ರ ವಿವಿಧ ಸಾಧನ- ಸಲಕರಣೆಗಳನ್ನು ವಿತರಿಸಲಾಯಿತು.

ಪ್ರತಿಕ್ರಿಯಿಸಿ (+)