ಕಾಂಗ್ರೆಸ್ ಸದಸ್ಯರಿಗೆ ಆನೆ ದುಃಸ್ವಪ್ನ

7

ಕಾಂಗ್ರೆಸ್ ಸದಸ್ಯರಿಗೆ ಆನೆ ದುಃಸ್ವಪ್ನ

Published:
Updated:
ಕಾಂಗ್ರೆಸ್ ಸದಸ್ಯರಿಗೆ ಆನೆ ದುಃಸ್ವಪ್ನ

ಲಖನೌ (ಪಿಟಿಐ): ಕಾಂಗ್ರೆಸ್ ಸದಸ್ಯರಿಗೆ ತಮ್ಮ ಪಕ್ಷದ ಚುನಾವಣಾ ಚಿಹ್ನೆಯಾದ `ಆನೆ~ಯು ದುಃಸ್ವಪ್ನದಂತೆ ಕಾಡುತ್ತಿದ್ದು ರಾಜ್ಯದಿಂದ ಅವರೆಲ್ಲರನ್ನು ದೂರ ಇಟ್ಟಿದೆ. ಆದರೆ ರಾಹುಲ್ ಗಾಂಧಿ ಸಂಸತ್ ಕಲಾಪಕ್ಕೆ ಹಾಜರಾಗುವ ಬದಲು ರ‌್ಯಾಲಿ ನಡೆಸಿ `ನಾಟಕೀಯ ನಡೆನುಡಿ~ಯಲ್ಲಿ ತೊಡಗಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಭಾನುವಾರ ಇಲ್ಲಿ ಟೀಕಾ ಪ್ರಹಾರ ನಡೆಸಿದರು.ದಲಿತರು- ಇತರ ಹಿಂದುಳಿದ ಜನಾಂಗದವರ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, `ಬಿಎಸ್ಪಿಯ ಜನಪ್ರಿಯತೆಗೆ ಕಾಂಗ್ರೆಸ್ ಹೆದರಿದೆ. ಆದ್ದರಿಂದಲೇ  ಉತ್ತರಪ್ರದೇಶದಲ್ಲಿ ನಾಟಕೀಯ ವರ್ತನೆ ತೋರಿ ಜನರ ಗಮನ ಸೆಳೆಯಲು ಆ ಪಕ್ಷದ `ಯುವರಾಜ~ ಸಂಸತ್ತಿಗೆ ಹಾಜರಾಗುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಬಿಎಸ್ಪಿಯ ಚಿಹ್ನೆಯಾದ `ಆನೆ~ಯು  ಕಾಂಗ್ರೆಸ್ ಸದಸ್ಯರಿಗೆ ಕನಸಿನಲ್ಲೂ ಕಾಡುತ್ತಿದೆ. ಆದ್ದರಿಂದಲೇ ಅವರು ಆಧಾರ ರಹಿತ ಹೇಳಿಕೆಗಳನ್ನು ಅವರು ನೀಡುತ್ತಿದ್ದಾರೆ~ ಎಂದು ಕಿಡಿ ಕಾರಿದರು.ಮುಂದಿನ ವರ್ಷ ಇಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದ್ದು ರಾಹುಲ್‌ಗಾಂಧಿ ಅವರು ಮಾಯಾವತಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಜರಿದಿದ್ದರು. ಅಲ್ಲದೆ ಶುಕ್ರವಾರ ಸಿದ್ಧಾರ್ತನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ಉತ್ತರಪ್ರದೇಶದಲ್ಲಿನ ಬಡವರಿಗೆಂದು ಕೇಂದ್ರ ಸರ್ಕಾರ ಕಳುಹಿಸಿದ ಹಣವನ್ನು ಲಖನೌದಲ್ಲಿನ `ಆನೆ~ಯು ತಿಂದು ಹಾಕಿದೆ ಎಂದು ಆರೋಪಿಸಿದ್ದರು.ರಾಹುಲ್ ಅವರ ಈ ಹೇಳಿಕೆಯು ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದ ಬಿಎಸ್ಪಿ ನಾಯಕಿ ಮಾಯಾವತಿ, ಉತ್ತರಪ್ರದೇಶದ ಅಭಿವೃದ್ಧಿಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಕಡೆಗಣಿಸಿದ್ದರಿಂದಲೇ ಇಂದು ಬಡವರು ಬೇರೆ ರಾಜ್ಯಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದರು.ಐದು ವರ್ಷಗಳಲ್ಲಿ ರಾಜ್ಯವನ್ನು `ನಂಬರ್ 1~ ರಾಜ್ಯವನ್ನಾಗಿ ಮಾಡುವುದಾಗಿ ರಾಹುಲ್ ನೀಡಿದ ಭರವಸೆ ಬಗ್ಗೆ, ಇದು ಕೇವಲ `ರಾಜಕೀಯ ತಂತ್ರ~. ರಾಜ್ಯವನ್ನು 40 ವರ್ಷಗಳವರೆಗೆ ಆಳಿದ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ ಎಂದು ಪ್ರತಿಕ್ರಿಯಿಸಿದರು. `ಅವರ ಪಕ್ಷ 40 ವರ್ಷಗಳವರೆಗೆ ಅಧಿಕಾರವಿದ್ದಾಗ ರಾಜ್ಯವನ್ನು ಮೊದಲ ಸ್ಥಾನದಲ್ಲಿ ತರಲು ಆಗಲಿಲ್ಲ. ಈಗ ಅದನ್ನು ಅವರು ಐದು ವರ್ಷಗಳಲ್ಲಿ ಹೇಗೆ ಮಾಡುತ್ತಾರೆ~? ಎಂದು ಕೇಳಿದರು. `ಜೀವನೋಪಾಯಕ್ಕಾಗಿ `ಸರ್ವಜನ ಸಮಾಜ~ದ ಜನರು ಇತರ ರಾಜ್ಯಗಳಿಗೆ ವಲಸೆ ಹೋಗಬೇಕಾಗಿರುವುದೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ದಲಿತರು ಮತ್ತು ಇತರ ಹಿಂದುಳಿದ ಜನಾಂಗದವರು ಶೋಷಣೆಗೆ ಒಳಗಾಗಿದ್ದಾರೆ~ ಎಂದು ಮಾಯಾವತಿ ದೂರಿದರು.ಎಂಎನ್‌ಆರ್‌ಇಜಿಎಸ್ ಜಾರಿಯಲ್ಲಿ ಅವ್ಯವಹಾರ ಆರೋಪಗಳನ್ನು ತಳ್ಳಿಹಾಕಿದ ಅವರು, ಕಾಂಗ್ರೆಸ್ ಕೇವಲ `ಪ್ರಚಾರ ಮತ್ತು ರಾಜಕೀಯ ಲಾಭಕ್ಕಾಗಿ~ ಮಾತ್ರ ಈ ವಿಷಯವನ್ನು ಎತ್ತಿದೆ ಎಂದರು.ಈ ಯೋಜನೆಗಾಗಿ ಇರುವ ಹಣ `ರಾಜ್ಯದ ಹಕ್ಕು~ ಹೊರತು ಕೇಂದ್ರದ `ಕೃಪಾಕಟಾಕ್ಷ~ ಅಲ್ಲ ಎಂದೂ ಹೇಳಿದರು.

ಈ ಯೋಜನೆಯಲ್ಲಿ ಅವ್ಯವಹಾರ ನಡೆಸಿದವರ ವಿರುದ್ಧ ಉತ್ತರಪ್ರದೇಶದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದ ಅವರು ಕೇಂದ್ರದಲ್ಲಿ ಬಿಎಸ್ಪಿ ಸರ್ಕಾರ ರಚನೆಯಾದರೆ, ಉದ್ಯೋಗ ಯೋಜನೆಯಡಿ ಎಲ್ಲಾ 365 ದಿನಗಳಲ್ಲೂ ಉದ್ಯೋಗ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.ಉತ್ತರಪ್ರದೇಶಕ್ಕೆ ಮಾತ್ರ ಕೇಂದ್ರೀಯ ಆಯೋಗಗಳನ್ನು ಕಳುಹಿಸಲಾಗುತ್ತಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಈ ಆಯೋಗಗಳು ಪ್ರಮುಖ ಘಟನೆಗಳನ್ನೂ ಗಮನಿಸುತ್ತಿಲ್ಲ. ಬದಲು ಉತ್ತರಪ್ರದೇಶದಲ್ಲಿನ `ಸಣ್ಣ ಪುಟ್ಟ ಘಟನೆಗಳ ಬಗ್ಗೆ ಬೊಬ್ಬೆ ಹಾಕುತ್ತವೆ~ ಎಂದು ಟೀಕಿಸಿದರು.ಮುಂದಿನ 15 ವರ್ಷಗಳವರೆಗೆ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಇರಬೇಕು ನಂತರದ ವರ್ಷಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು ಮುಖ್ಯಮಂತ್ರಿ ಆಗಬೇಕು ಎಂಬುದು ತಮ್ಮ ಗುರಿ. ಇದರಿಂದಾದರೂ ಈ ಸಮುದಾಯಗಳ ಸಮಸ್ಯೆ ಪರಿಹಾರ ಆಗಬಹುದು ಎಂದೂ ನುಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry