ಕಾಂಗ್ರೆಸ್ ಸಭೆಯಲ್ಲಿ ಚುನಾವಣಾ ಕಾವು

7

ಕಾಂಗ್ರೆಸ್ ಸಭೆಯಲ್ಲಿ ಚುನಾವಣಾ ಕಾವು

Published:
Updated:

ಬೆಂಗಳೂರು: ಬಿಜೆಪಿಯಲ್ಲಿನ ಅಂತಃಕಲಹದಿಂದ ಅವಧಿಗೂ ಮುನ್ನವೇ ವಿಧಾನಸಭಾ ಚುನಾವಣೆ ನಡೆಯಬಹುದೆನ್ನುವ ನಿರೀಕ್ಷೆಯಲ್ಲಿರುವ ಪ್ರದೇಶ ಕಾಂಗ್ರೆಸ್, ಸಾರ್ವತ್ರಿಕ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವುದಕ್ಕೆ ಚಾಲನೆ ನೀಡಿದೆ. ಇದರ ಒಂದು ಭಾಗವಾಗಿ ಅರಮನೆ ಮೈದಾನದ ಟೆನಿಸ್ ಪೆವಿಲಿಯನ್‌ನಲ್ಲಿ ಪಕ್ಷದ ಸರ್ವ ಸದಸ್ಯರ ಸಭೆ ನಡೆಸುವ ಮೂಲಕ ಪಕ್ಷದಲ್ಲಿ ಚುನಾವಣೆಯ ಕಾವು ಏರುವಂತೆ ಮಾಡಿದೆ.ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಶನಿವಾರ ಇಡೀ ದಿನ ನಡೆದ ಸರ್ವ ಸದಸ್ಯರ ಸಭೆಯಲ್ಲಿ ರಾಜ್ಯದ ಬಿಜೆಪಿ ಸರ್ಕಾರದ ವೈಫಲ್ಯಗಳ ಬಗ್ಗೆಯೇ ಪ್ರಧಾನವಾಗಿ ಚರ್ಚಿಸಲಾಗಿದೆ. ಭ್ರಷ್ಟಾಚಾರ ಆರೋಪದ ಮೇಲೆ ಬಿ.ಎಸ್.ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದು ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದಿದೆ. ನಂತರ ಮುಖ್ಯಮಂತ್ರಿಯಾದ ಸದಾನಂದ ಗೌಡ ನೇತೃತ್ವದ ಸರ್ಕಾರ, ಸಂಘ ಪರಿವಾರದ ಹಿಡಿತದಲ್ಲಿದೆ ಎಂದು ಸಭೆಯಲ್ಲಿ ಮಾತನಾಡಿದ ಹಲವು ಮುಖಂಡರು ವ್ಯಾಖ್ಯಾನಿಸಿದರು ಎನ್ನಲಾಗಿದೆ.ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಮಾತನಾಡಿ, `ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷದಲ್ಲಿ ಒಳಜಗಳ ಇಲ್ಲದಂತೆ ಎಲ್ಲರೂ ಒಮ್ಮತದಿಂದ ಇರಬೇಕು~ ಎಂದು ಅವರು ಕರೆ ನೀಡಿದರು.ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ,  `ಇದು ಚುನಾವಣೆ ಪೂರ್ವತಯಾರಿ ಸಭೆ~ ಎಂದು ಒಪ್ಪಿಕೊಂಡ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು `ಮಾರ್ಚ್‌ನಿಂದ ಮೂರು ತಿಂಗಳ ಕಾಲ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲೂ ಪ್ರವಾಸ ಮಾಡಲಾಗುವುದು~ ಎಂದು ಹೇಳಿದರು.`ಪಕ್ಷದ ಎಲ್ಲ ಮುಖಂಡರೂ ಈ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಅರ್ಹ ಅಭ್ಯರ್ಥಿಗಳನ್ನು ಗುರುತಿಸುವುದು ಮತ್ತು ಸರ್ಕಾರದ ವೈಫಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು~ ಎಂದರು.ಮಧ್ಯಾಹ್ನದ ಸಭೆ ನಂತರ ಕೆಲವರು ಗೈರುಹಾಜರಾಗಿದ್ದಕ್ಕೆ ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದರು. `ಪಕ್ಷದ ಒಂದು ದಿನದ ಇಡೀ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯ ಇಲ್ಲದವರು ಪಕ್ಷವನ್ನು ಹೇಗೆ ಕಟ್ಟುತ್ತೀರಿ. ಬೆಳಿಗ್ಗೆ ಸ್ವಲ್ಪ ಹೊತ್ತು ಇದ್ದು ಹೋದರೆ ಪ್ರಯೋಜನ ಇಲ್ಲ. ಇಡೀ ದಿನ ಇದ್ದು ಸಭೆಯ ತೀರ್ಮಾನಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು~ ಎಂದರು.ಮುಖಂಡ ಸಿದ್ದರಾಮಯ್ಯ ಮಾತನಾಡಿ, `ರಾಜ್ಯದ ಸಂಪತ್ತು ಲೂಟಿ ಮಾಡಿದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ಸಂಪತ್ತು ಉಳಿಸುವ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ. ಆ ಕಾರಣಕ್ಕಾಗಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾಗಿದೆ. ಇದಕ್ಕೆ ಪೂರಕವಾಗಿ ಪ್ರತಿಯೊಬ್ಬರೂ ಬದ್ಧತೆಯಿಂದ ದುಡಿಯಬೇಕು~ ಎಂದು ಹೇಳಿದರು.ಎನ್‌ಸಿಪಿ ಸೇರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದ ಶಾಸಕರಾದ ಮಾಲಿಕಯ್ಯ ಗುತ್ತೇದಾರ್, ಬಿ.ಸಿ.ಪಾಟೀಲ್ ಸಭೆಗೆ ಗೈರು ಹಾಜರಾಗಿದ್ದರು. ಇದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯ ಇಲ್ಲ ಎಂದು ಪರಮೇಶ್ವರ್ ಹೇಳಿದರು. `1200 ಮಂದಿ ಸರ್ವ ಸದಸ್ಯರ ಪೈಕಿ ಒಂದಿಬ್ಬರು ಬಂದಿಲ್ಲ ಅಂದರೆ ಅದೇನು ದೊಡ್ಡ ವಿಷಯವಲ್ಲ~ ಎಂದು ಅವರು ಪ್ರತಿಕ್ರಿಯೆ ನೀಡಿದರು.ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ, ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಕಾರ್ಯದರ್ಶಿಗಳಾದ ಹನುಮಂತರಾವ್, ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಡು, ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್, ಮುಖಂಡರಾದ ಎಚ್.ಕೆ.ಪಾಟೀಲ್, ಸಲೀಂ ಅಹಮದ್ ಸೇರಿದಂತೆ ಇತರ ಗಣ್ಯರು ಸಭೆಯಲ್ಲಿ ಹಾಜರಿದ್ದರು. ಕೆಪಿಸಿಸಿ ಸದಸ್ಯರು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕೂಡ ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry