ಗುರುವಾರ , ನವೆಂಬರ್ 21, 2019
24 °C
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವಿಶೇಷ

ಕಾಂಗ್ರೆಸ್ 8, ಬಿಜೆಪಿ 5 ಬಾರಿ ಗೆಲುವು

Published:
Updated:

ಶಿವಮೊಗ್ಗ: ರಾಜ್ಯಕ್ಕೆ ಉಪ ಮುಖ್ಯಮಂತ್ರಿಯೊಬ್ಬರನ್ನು ನೀಡಿದ ಶಿವಮೊಗ್ಗ ನಗರ 14ನೇ ವಿಧಾನಸಭಾ ಚುನಾವಣೆ ಎದುರು ನೋಡುತ್ತಿದೆ. 1985 ಹಾಗೂ 2008ರ ಎರಡು ಉಪ ಚುನಾವಣೆ ಸೇರಿದಂತೆ 13 ಚುನಾವಣೆಗಳಲ್ಲಿ ಕಾಂಗ್ರೆಸ್ ಎಂಟು ಬಾರಿ, ಬಿಜೆಪಿ ಐದು ಗೆಲುವು ಸಾಧಿಸಿವೆ. ಈ ಎರಡು ಪಕ್ಷಗಳನ್ನು ಹೊರತುಪಡಿಸಿದರೆ ಬೇರೆ ಯಾವುದೇ ಪಕ್ಷದ ಅಭ್ಯರ್ಥಿಗಳು ಇಲ್ಲಿ ನೆಲೆಯೂರಲು ಸಾಧ್ಯವಾಗಿಲ್ಲ. ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಈಗ ಬಿಜೆಪಿಯ ಪ್ರಾಬಲ್ಯವಿದೆ.1952ರ ಮೊದಲ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಶಿಕ್ಷಣತಜ್ಞ ಎಸ್.ಆರ್. ನಾಗಪ್ಪಶೆಟ್ಟಿ. 10,069 ಮತ ಪಡೆಯುವ ಮೂಲಕ ಕಾಂಗ್ರೆಸ್ಸಿನ ಖಾತೆ ತೆರೆದರು. ಆವಾಗ ಸ್ಪರ್ಧಾ ಕಣದಲ್ಲಿದಿದ್ದು ಕಾಂಗ್ರೆಸ್, ಸಮಾಜವಾದಿ, ಭಾರತೀಯ ಜನಸಂಘ ಪಕ್ಷಗಳು. ಅಂದು ಶಿವಮೊಗ್ಗ ನಗರದ ಮತದಾರರ ಸಂಖ್ಯೆ 40,541.ತದನಂತರ 1957 ಹಾಗೂ 1962ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರತ್ನಮ್ಮ ಮಾಧವರಾವ್ ಸತತ ಗೆಲುವು ಸಾಧಿಸಿದ್ದರು. ಪ್ರಥಮ ಮಹಿಳಾ ಜನಪ್ರತಿನಿಧಿಯಾಗಿ 10 ವರ್ಷ ಆಳ್ವಿಕೆ ನಡೆಸಿದ್ದರು. 1957ರಲ್ಲಿ ಕಾಂಗ್ರೆಸ್, ಭಾರತೀಯ ಜನಸಂಘ ಹಾಗೂ ಇಂಡಿಯನ್ ಡೆಮಾಕ್ರೆಟಿಕ್ ಪಕ್ಷಗಳು ಸ್ಪರ್ಧಿಸಿದ್ದವು. 1962ರಲ್ಲಿ ಕಾಂಗ್ರೆಸ್, ಪ್ರಜಾ ಸೋಷಲಿಸ್ಟ್ ಪಾರ್ಟಿ ಹಾಗೂ ಭಾರತೀಯ ಜನಸಂಘ ಕಣಕ್ಕೆ ಇಳಿದಿದ್ದವು.1967 ಹಾಗೂ 1972ರಲ್ಲಿ ಕಾಂಗ್ರೆಸ್‌ನ ಎ.ಆರ್. ಬದರಿನಾರಾಯಣ್ ಸತತ ಗೆಲುವು ದಾಖಲಿಸಿದ್ದರು. 1967ರಲ್ಲಿ ಕಾಂಗ್ರೆಸ್, ಸಂಯುಕ್ತ ಸೋಷಲಿಸ್ಟ್ ಪಾರ್ಟಿ, ಭಾರತೀಯ ಜನಸಂಘ  ಸ್ಪರ್ಧೆ ಮಾಡಿದ್ದವು. 1972ರಲ್ಲಿ ಕಾಂಗ್ರೆಸ್, ಸಮಾಜವಾದಿ, ಭಾರತೀಯ ಜನಸಂಘ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದ್ದವು.ಈಗ ಕೆಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಮಾಜಿ ಸಚಿವ ಕೆ.ಎಚ್. ಶ್ರೀನಿವಾಸ್ ಅವರಿಗೆ ವಿಧಾನಸಭೆಯ ಮೆಟ್ಟಿಲು ಹತ್ತಿಸಿದ್ದು 1978ರ ಚುನಾವಣೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರು ಭಾರತೀಯ ಜನಸಂಘ ಹಾಗೂ ಪಕ್ಷೇತರರು ಸೇರಿದಂತೆ ಸ್ಪರ್ಧಿಸಿದ್ದ ನಾಲ್ವರನ್ನು ಮಣಿಸಿದ್ದರು.1983ರಲ್ಲಿ ನಡೆದ ಚುನಾವಣೆಯಲ್ಲಿ ಎಂ. ಆನಂದರಾವ್ ಬಿಜೆಪಿಗೆ ಮೊದಲ ಗೆಲುವು ತಂದುಕೊಟ್ಟರು. ಅದುವರೆಗೂ ಜಯದ ಅಲೆಯಲ್ಲಿ ತೇಲುತ್ತಿದ್ದ ಕಾಂಗ್ರೆಸ್, ಮೊದಲ ಬಾರಿಗೆ ಮುಖಭಂಗ ಅನುಭವಿಸಿತ್ತು. 1985ರಲ್ಲೇ ನಡೆದ ಉಪಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಕೆ.ಎಚ್. ಶ್ರೀನಿವಾಸ್ ಗೆಲುವು ಸಾಧಿಸಿ, ವಿಜಯದ ನಗು ಬೀರಿದ್ದರು.   1989ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೆ.ಎಸ್. ಈಶ್ವರಪ್ಪ ಸ್ಪರ್ಧಿಸಿದ್ದರು. ಮೊದಲ ಪ್ರಯತ್ನದಲ್ಲೇ ಅಪರಿಚಿತ ಈಶ್ವರಪ್ಪ, ಸಚಿವರಾಗಿದ್ದ ಕೆ.ಎಚ್. ಶ್ರೀನಿವಾಸರನ್ನು ಪರಾಭವಗೊಳಿಸಿ, ಶಾಸಕರಾದರು. ಆವಾಗ ಕಣದಲ್ಲಿದ್ದಿದ್ದು ಒಟ್ಟು 17ಜನ. ಈಶ್ವರಪ್ಪ ಆಗ ತೆಗೆದುಕೊಂಡ ಮತ 32,209. 1994ರ ಚುನಾವಣೆಯಲ್ಲಿ ಮತ್ತೊಮ್ಮೆ ವಿಜಯಮಾಲೆ ಈಶ್ವರಪ್ಪ (ಮತ ಗಳಿಕೆ 57,385) ಅವರ ಕೊರಳು ಏರಿತು.ಈಶ್ವರಪ್ಪ ಸತತ ಗೆಲುವಿಗೆ ಕಡಿವಾಣ ಹಾಕಿ, ಅವರಿಗೆ ಸೋಲಿನ ರುಚಿ ತೋರಿಸಿದ್ದು 1999ರ ಚುನಾವಣೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಚ್.ಎಂ. ಚಂದ್ರಶೇಖರಪ್ಪ 59,490 ಮತ ಪಡೆದು ಈಶ್ವರಪ್ಪ ಅವರನ್ನು ಸುಮಾರು 7 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.2004ರ ಚುನಾವಣೆಯಲ್ಲಿ ಬಿಜೆಪಿ 79 ಸ್ಥಾನಗಳೊಂದಿಗೆ ರಾಜ್ಯದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಸಂದರ್ಭದಲ್ಲಿ ಇತ್ತ ಶಿವಮೊಗ್ಗ ನಗರದಿಂದ ಈಶ್ವರಪ್ಪ ಭಾರೀ ಅಂತರ ಗೆಲುವು ಸಾಧಿಸಿದ್ದರು. ಸಮೀಪ ಸ್ಪರ್ಧಿ ಎಚ್.ಎಂ. ಚಂದ್ರಶೇಖರಪ್ಪ ಅವರಿಗಿಂತ ಸುಮಾರು 20 ಸಾವಿರ ಹೆಚ್ಚು ಪಡೆದಿದ್ದರು. ಇದೇ ಸಮಯದಲ್ಲಿ ಈಶ್ವರಪ್ಪ ಜಲಸಂಪನ್ಮೂಲ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.2008ರಲ್ಲಿ ನಡೆದ 13ನೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಪ್ರಾಪ್ತವಾಯಿತು. ಈ ಚುನಾವಣೆಯಲ್ಲಿ ಇನ್ನೊಂದು ಭರ್ಜರಿ ಗೆಲುವು ಈಶ್ವರಪ್ಪ ಅವರ ಪಾಲಾಯಿತು. ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಇಸ್ಮಾಯಿಲ್ ಖಾನ್‌ಕ್ಕಿಂತ 32,419 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿ ಅಧಿಕಾರಕ್ಕೂ ಬಂತು. ಈಶ್ವರಪ್ಪ ಈ ಸರ್ಕಾರದಲ್ಲಿ ವಿದ್ಯುತ್ ಸಚಿವರಾಗಿ, ತದನಂತರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ, ಕೊನೆಗೆ ಉಪ ಮುಖ್ಯಮಂತ್ರಿಯೂ ಆದರು.ಪ್ರತಿಕ್ರಿಯಿಸಿ (+)