ಮಂಗಳವಾರ, ಮೇ 18, 2021
24 °C

ಕಾಂಚಾಣ ಕಂತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಚಾಣ ಕಂತೆ!

ನಿರ್ದೇಶಕ ಗಣೇಶ್ ತಲೆತುಂಬಾ ಪ್ರಚಾರದ ಹುಳು ಗುಂಯ್‌ಗುಡುತ್ತಿದೆ. ಅವರ ಮಾತು ಶುರುವಾದದ್ದೇ ಪ್ರಚಾರದ ವರಸೆಗಳನ್ನು ಹಂಚಿಕೊಳ್ಳುವುದರೊಂದಿಗೆ.`ಕಾರ್ಪೋರೆಟ್ ಕಂಪೆನಿಗಳು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸುಮಾರು 3 ಸಾವಿರ ಟಿಕೆಟನ್ನು ಮುಂಗಡವಾಗಿಯೇ ಮಾರಾಟ ಮಾಡುತ್ತೇವೆ.

 

ಪ್ರಮುಖ ಊರುಗಳ ಚಿತ್ರಮಂದಿರಗಳಿಗೆ ಇಡೀ ಚಿತ್ರತಂಡ ತೆರಳಿ ಜನರೊಂದಿಗೆ ಬೆರೆತು ಪ್ರಚಾರ ಮಾಡುತ್ತೇವೆ. ಹೈದರಾಬಾದ್, ಚೆನ್ನೈ, ಮುಂಬೈಗಳಲ್ಲೂ ಚಿತ್ರ ಬಿಡುಗಡೆ ಮಾಡುತ್ತೇವೆ....~ ಹೀಗೆ ಒಂದಾದ ಮೇಲೊಂದರಂತೆ ಪ್ರಚಾರ ಪ್ರಣಾಳಿಕೆಯನ್ನು ಬಿಚ್ಚುತ್ತಾ ಹೋದರು.ಈ ವಾರ ತೆರೆಕಾಣುತ್ತಿರುವ `ಕಾಂಚಾಣ~ ಚಿತ್ರದ ಪತ್ರಿಕಾಗೋಷ್ಠಿ ಅದು. ಬಹುತೇಕ ಸುದ್ದಿಗೋಷ್ಠಿಗಳಿಗೇ ಗೈರು ಹಾಜರಾಗುವ ನಾಯಕ ನಟ ದಿಗಂತ್ ಚಿತ್ರದ ಪ್ರಚಾರಕ್ಕೆ ನಿಮ್ಮ ಜೊತೆ ಊರೂರು ಸುತ್ತಲು ಬರುತ್ತಾರೆಯೇ? ಎಂಬ ಪ್ರಶ್ನೆ ಪತ್ರಕರ್ತರ ಸಾಲಿನಿಂದ ತೂರಿಬಂದಾಗ ಗಣೇಶ್ ಸ್ವಲ್ಪ ತಡವರಿಸಿದರು.`ಹಾಗೇನೂ ಇಲ್ಲ. ದಿಗಂತ್ ಮುಂಬೈಗೆ ಹೋಗಿದ್ದಾರೆ. ಈಗ ಕೆಲವೇ ನಿಮಿಷಗಳ ಮುಂಚೆ ಫೋನ್ ಮಾಡಿದ್ದರು. ನಾಡಿದ್ದು ಖಂಡಿತ ಬರುತ್ತಾರೆ~ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು.ದಿಗಂತ್ ಅನುಪಸ್ಥಿತಿ ಕಾಡದಂತೆ ತಡೆಯಲು ನಟಿ ರಾಗಿಣಿ ಪ್ರಯತ್ನಿಸಿದರು. ಎರಡು ವಾರದಲ್ಲಿ ಅವರ ಅಭಿನಯದ ಎರಡು ಚಿತ್ರಗಳು ಬಿಡುಗಡೆಯಾಗುತ್ತಿರುವುದು ಅವರಿಗೆ ಸಾಕಷ್ಟು ಖುಷಿ ನೀಡಿದೆ.

 

`ಒಳ್ಳೆಯ ಕಥೆಯುಳ್ಳ ಚಿತ್ರ ಇದು. ಚೆನ್ನಾಗಿ ಮೂಡಿಬಂದಿದೆ~ ಎಂದು ಪಟಪಟನೆ ಮಾತುದುರಿಸಿದ ರಾಗಿಣಿ, ನಿರ್ದೇಶಕ ಗಣೇಶ್ ಮತ್ತು ನಿರ್ಮಾಪಕ ಶ್ರೀನಾಥ್ ರೆಡ್ಡಿ ಅವರನ್ನು ಹೊಗಳಿದರು. ಚಿತ್ರದಲ್ಲಿ ಅವರು ದಿಗಂತ್‌ಗೆ ಬಾಲ್ಯದ ಗೆಳತಿಯಂತೆ.`ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳದ ದಿಗಂತ್‌ರನ್ನು ಸರಿದಾರಿಗೆ ತರುವ ಪಾತ್ರ ನನ್ನದು. ಇಡೀ ಚಿತ್ರ ದುಡ್ಡಿನ ಕುರಿತೇ ಸಾಗುತ್ತದೆ~ ಎಂದು ಹೇಳಿದರು.

ಮನೆ ಸಮೀಪದಲ್ಲಿದ್ದ ಸದಾ ಬಾಗಿಲು ತೆರೆದಿರುವ ಎಟಿಎಂ ಅನ್ನು ದಿನವೂ ನೋಡಿ ನೋಡಿ ಗಣೇಶ್‌ಗೆ ದುಡ್ಡಿನ ಮೇಲೆ ಸಿನಿಮಾ ಮಾಡುವ ಬಯಕೆ ಹುಟ್ಟಿತಂತೆ.`ದುಡ್ಡಿನ ಕುರಿತು ಸಾಕಷ್ಟು ಚಿತ್ರ ಬಂದಿರಬಹುದು. ಆದರೆ ನನ್ನ ಚಿತ್ರದಲ್ಲಿ ಯಾವುದೇ ಚಿತ್ರದ ಛಾಯೆಯ ಲವಲೇಶವೂ ಕಾಣುವುದಿಲ್ಲ. ಇದು ಸಂಪೂರ್ಣ ವಿಭಿನ್ನ ಚಿತ್ರ~ ಎಂದು ಅವರು ತಮಗೇ ಸರ್ಟಿಫಿಕೇಟ್ ಕೊಟ್ಟುಕೊಂಡರು.ನಿರ್ಮಾಪಕ ಶ್ರೀನಾಥ್ ರೆಡ್ಡಿ ಅವರಿಗೆ `ಮರ್ಯಾದೆ ರಾಮಣ್ಣ~ ಚಿತ್ರದಿಂದ ಎದುರಿಸಬೇಕಾದ ಪೈಪೋಟಿ ಬಗ್ಗೆ ಆತಂಕವಿದೆ. ಆದರೆ ಆ ಚಿತ್ರಗಳನ್ನು ಯಶಸ್ವಿಯಾಗಿ ಎದುರಿಸುತ್ತೇವೆ ಎಂದು ಆತ್ಮವಿಶ್ವಾಸದಿಂದ ನುಡಿದರು.ಇದು ದುಡ್ಡಿನ ಯುಗ. ಎಲ್ಲೆಡೆ ಕಾಂಚಾಣ ಸದ್ದು ಮಾಡುತ್ತಿದೆ. ಹಾಗಾಗಿ ಚಿತ್ರವೂ ತಮ್ಮ ಭರವಸೆಯನ್ನು ಉಳಿಸುತ್ತದೆ ಎಂಬುದು ನಿರ್ಮಾಪಕರ ನಂಬಿಕೆ.

     

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.