ಕಾಗಕ್ಕ ಗೂಬಕ್ಕನ ಕತೆ ಹೇಳಲಾರೆ...

7

ಕಾಗಕ್ಕ ಗೂಬಕ್ಕನ ಕತೆ ಹೇಳಲಾರೆ...

Published:
Updated:

“ಕನ್ನಡದ ಮಣ್ಣಿಗೆ ಸಂಬಂಧಿಸದೇ ಇರದ ಚಿತ್ರಗಳನ್ನು ಮಾಡಲಾರೆ. ಚಿತ್ರವೊಂದು ಸೋತ ಮಾತ್ರಕ್ಕೆ ನಂಬಿಕೆಗಳನ್ನು ಕೈಬಿಡಲಾರೆ”ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಚಿತ್ರ ಬದುಕಿಗೆ `ಬ್ರೇಕಿಂಗ್ ನ್ಯೂಸ್~ ಉತ್ತಮ ಸೋಪಾನವಾಗಲಿದೆಯೇ ಎಂಬುದು ಗಾಂಧಿನಗರದಲ್ಲಿ ನಡೆಯುತ್ತಿರುವ ಬಿಸಿ ಬಿಸಿ ಚರ್ಚೆ. 2007ರಿಂದ ಈಚೆಗೆ ಅವರ ಅನೇಕ ಚಿತ್ರಗಳು ಸಾಕಷ್ಟು ಯಶಸ್ಸು ಕಂಡಿರಲಿಲ್ಲ ಎಂಬುದು ಚರ್ಚೆಗೆ ಕಾರಣ.ಆದರೆ ಈ ಬಗ್ಗೆ ಅವರದು ಮಾತ್ರ ತಣ್ಣನೆ ಪ್ರತಿಕ್ರಿಯೆ. `ಚಿತ್ರ ಸೋಲುತ್ತದೋ ಗೆಲ್ಲುತ್ತದೋ ಎಂಬುದನ್ನು ನಿರ್ಧರಿಸುವುದು ಪ್ರೇಕ್ಷಕರು. ಚಿತ್ರದ ಗೆಲುವು ಮುಖ್ಯ. ಆದರೂ ಅದಕ್ಕಿಂತಲೂ ಸಿನಿಮಾ ನಿರ್ಮಾಣ ಪ್ರಕ್ರಿಯೆಯೇ ನನಗೆ ಹೆಚ್ಚು ಖುಷಿ ನೀಡುತ್ತದೆ~ ಎನ್ನುತ್ತಾರೆ ಅವರು. ಅವರ ಪ್ರಕಾರ ಸಿನಿಮಾ ಎನ್ನುವುದು ಒಬ್ಬರ ಮಾಧ್ಯಮವಲ್ಲ.ಪ್ರೇಕ್ಷಕರೂ ಸೈ ಎಂದಾಗ ಮಾತ್ರ ಅದಕ್ಕೆ ಪರಿಪೂರ್ಣತೆ ಸಲ್ಲುತ್ತದೆ. ಹಾಗಾಗಿಯೇ ಅವರ ಪಾಲಿಗೆ ಯಾವುದೇ ಚಿತ್ರ `ನಮ್ಮ ನಿಮ್ಮ ಸಿನಿಮಾ~.ಗಣಿಗಾರಿಕೆಯ ಸಮಸ್ಯೆ ಹೇಳುವ `ಮಾತಾಡ್ ಮಾತಾಡ್ ಮಲ್ಲಿಗೆ~, ಸೈದ್ಧಾಂತಿಕ ಸೋಲುಗಳನ್ನು ಹೇಳುವ `ಒಲವೆ ಜೀವನ ಲೆಕ್ಕಾಚಾರ~, `ನೂರು ಜನ್ಮಕೂ~ ಚಿತ್ರಗಳನ್ನು ಪ್ರೇಕ್ಷಕರು ಗೆಲ್ಲಿಸಲಿಲ್ಲ.

 

ಮನರಂಜನೆಯ ಅಂಶಗಳನ್ನು ಒಳಗೊಂಡಿದ್ದರೂ ಇವುಗಳಲ್ಲಿ ಬಹುಪಾಲು ಪ್ರಸ್ತುತ ಸಮಾಜಕ್ಕೆ ಕನ್ನಡಿ ಹಿಡಿಯುವ ಕೃತಿಗಳಾಗಿದ್ದವು. ಈಗ ಅಂತದ್ದೇ ಒಂದು ವಿಷಯಾಧಾರಿತ ಚಿತ್ರ `ಬ್ರೇಕಿಂಗ್ ನ್ಯೂಸ್~. ಇಂಥ ಸಿನಿಮಾಗಳು ಸೋಲು ಕಂಡಿರುವಾಗ ಮತ್ತೆ ಈ ಬಗೆಯ ಪ್ರಯತ್ನ ಏಕೆ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ಹೀಗಿತ್ತು: ಕನ್ನಡದ ಮಣ್ಣಿಗೆ ಸಂಬಂಧಿಸದೇ ಇರದ ಚಿತ್ರಗಳನ್ನು ಮಾಡಲಾರೆ.ನಾನು ಹೊರಟಿರುವುದು ಕಾಗಕ್ಕ ಗೂಬಕ್ಕನ ಕತೆ ಹೇಳಲು ಅಲ್ಲ. ನನ್ನಂಥವನಿಗೆ ವರ್ತಮಾನ ಮುಖ್ಯ.  `...ಮಲ್ಲಿಗೆ~ ಸೋತಿರಬಹುದು. ಆದರೆ ಅದು ಹೆಚ್ಚು ತೃಪ್ತಿ ತಂದಿತ್ತ ಚಿತ್ರ. `...ನ್ಯೂಸ್~ನಲ್ಲಿ ಐದಾರು ವರ್ಷಗಳಿಂದ ಈಚೆಗೆ ನಡೆದ ರಾಜಕೀಯ ವಿದ್ಯಮಾನಗಳನ್ನು ಬಿಂಬಿಸಲಾಗಿದೆ. ಮಾಧ್ಯಮಗಳು ಹೇಗಿರಬೇಕು ಎಂಬ ಉತ್ತಮ ಸಂದೇಶವಿದೆ.ವಿಡಂಬನೆ ಹಾಸ್ಯಮಯ ಧಾಟಿಯಲ್ಲಿ ಅಂದುಕೊಂಡದ್ದನ್ನು ತಲುಪಿಸುವ ಯತ್ನ ನಡೆದಿದೆ. ಸುದ್ದಿ ವಾಹಿನಿಗಳು ಹೆಚ್ಚಿರುವ ರಾಜಧಾನಿಯೇ ಚಿತ್ರದ ಕಾರಸ್ತಾನ. ಗೋವಾ ಮತ್ತಿತರ ಕಡೆಗಳಲ್ಲಿ ಚಿತ್ರೀಕರಣ ನಡೆದಿದ್ದರೂ ಅವರಿಗೆ ಲೊಕೇಶನ್ ಮುಖ್ಯವಾಗಿಲ್ಲ, ಬದಲಿಗೆ ಚಿತ್ರದಲ್ಲಿ ನಡೆಯುವ ವಿದ್ಯಮಾನಗಳು ಮುಖ್ಯ ಅನ್ನಿಸಿವೆ.ಮಾತು ಅವರ ಇತ್ತೀಚಿನ ಕತೆಗಳತ್ತಲೂ ಹೊರಳಿತು. ಅವರ ಕೆಲ ಕತೆಗಳಲ್ಲೂ ದೃಶ್ಯ ಮಾಧ್ಯಮದ ವಿಮರ್ಶೆ ನಡೆದಿದೆ. ಹಾಗೆ ದೃಶ್ಯ ಮಾಧ್ಯಮ ಕಾಡಲು ಕಾರಣವೇನು ಎಂದು ಕೇಳಿದಾಗ  ನಾಗತಿಹಳ್ಳಿ, `ರಂಗಭೂಮಿ, ಸಿನಿಮಾ ತರುವಾಯ ಟೀವಿ ಜನರ ಮನಸ್ಸನ್ನು ಇನ್ನಿಲ್ಲದಂತೆ ಆವರಿಸಿಕೊಂಡಿದೆ. ಇಂಥ ಸೂಕ್ಷ್ಮಗಳನ್ನು ಗಮನಿಸುವುದು ಹಾಗೂ ಅದನ್ನು ಬಿಂಬಿಸುವುದು ಒಬ್ಬ ಬರಹಗಾರನಾಗಿ ನನಗೆ ತೀರಾ ಪ್ರಸ್ತುತ ಅನ್ನಿಸುತ್ತಿದೆ~ ಎಂದರು.ಕಾನ್ ಚಲನಚಿತ್ರೋತ್ಸವದಲ್ಲಿ ಭೇಟಿಯಾಗಿದ್ದ ಫ್ರಾನ್ಸ್‌ನ ಪತ್ರಕರ್ತನೊಬ್ಬ ಹೇಳಿದ ಮಾತು ಅವರಿಟ್ಟಿರುವ ಹೆಜ್ಜೆಗೆ ಸ್ಫೂರ್ತಿಯಾಗಿದೆ. `...ಮಲ್ಲಿಗೆ~ಯನ್ನು ಸವಿದಿದ್ದ ಆ ಪತ್ರಕರ್ತ `ಹಾಲಿವುಡ್‌ನಲ್ಲಿ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು. ಭಾರತ, ಆಫ್ರಿಕಾ, ದಕ್ಷಿಣ ಅಮೆರಿಕಾದ ಚಿತ್ರಗಳು ಕಡಿಮೆ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಿದರೂ ಜನರ ಬದುಕಿಗೆ ಹತ್ತಿರವಾದ ಚಿತ್ರ ನೀಡುತ್ತವೆ~ ಎಂದಿದ್ದರು. `ಹಾಗಾಗಿ ನನ್ನ ನಂಬಿಕೆಯ ಚಿತ್ರ ಸೋತರೂ ಚಿಂತೆಯಿಲ್ಲ.

 

ಉತ್ತಮ ಚಿತ್ರ ನೀಡಿದೆ ಎಂಬ ಸಮಾಧಾನ ಇದ್ದೇ ಇರುತ್ತದೆ. ಚಿತ್ರ ಸೋತ ಮಾತ್ರಕ್ಕೆ ನಂಬಿಕೆಗಳನ್ನು ಕೈ ಬಿಡಲಾರೆ~ ಎಂಬುದು ಅವರ ನಿರ್ಧಾರ.ಸಂಗೀತ ನಿರ್ದೇಶಕ ಸ್ಟೀಫನ್ ಅವರ ಬಗ್ಗೆಯೂ ನಾಗತಿಹಳ್ಳಿ ಪ್ರಸ್ತಾಪಿಸಿದರು. ಲಂಡನ್‌ನ ಟ್ರಿನಿಟಿ ಸ್ಕೂಲ್ ಆಫ್ ಮ್ಯೂಸಿಕ್‌ನಿಂದ ಪದವಿ ಪಡೆದಿರುವ ಸ್ಟೀಫನ್ ಈಗ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಂಗೀತ ಕುರಿತು ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದಾರೆ.ಅನೇಕ ಪ್ರಯೋಗಗಳನ್ನು ಮಾಡಿರುವ ಸ್ಟೀಫನ್ ಅವರಿಗೆ ನಾಗತಿಹಳ್ಳಿ ಇಟ್ಟಿರುವ ಹೆಸರು ಸ್ಟೀಫನ್ ಪ್ರಯೋಗ್! ಪಾಶ್ಚಾತ್ಯ ಹಾಗೂ ಭಾರತೀಯ ಸಂಗೀತವನ್ನು ಬಲ್ಲವರಾದ್ದರಿಂದ ಅವರಿಂದ ಚಿತ್ರರಂಗಕ್ಕೆ ಹೆಚ್ಚು ಲಾಭವಾಗಲಿದೆ ಎಂಬುದು ಇವರ ನಂಬಿಕೆ. ಚಿತ್ರದಲ್ಲಿ ಗಂಭೀರ್ ನಾಟ್, ಹಾಗೂ ಹಂಸನಾದ ರಾಗಗಳ `ಪ್ರಯೋಗ~ ನಡೆದಿದೆ.ಉಳಿದಂತೆ `ನ್ಯೂಸ್~ನಲ್ಲಿ ಕೆಲವು ವಿಶೇಷಗಳಿವೆ. `ಉಂಡುಹೋದ ಕೊಂಡುಹೋದ~ ಚಿತ್ರದಲ್ಲಿ ನಟಿಸಿದ್ದ ಅನಂತನಾಗ್ 25 ವರ್ಷಗಳ ಬಳಿಕ ಮತ್ತೆ ನಾಗತಿಹಳ್ಳಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ 25 ವರ್ಷಗಳ ಹಿಂದೆ ಕರಿಬಸವಯ್ಯ `ಉಂಡುಹೋದ...~ ಚಿತ್ರದಿಂದ ಸಿನಿಮಾ ಬದುಕು ಆರಂಭಿಸಿದ್ದರು.`ಈಗ ಆತನ ಕಡೆಯ ಚಿತ್ರ `ಬ್ರೇಕಿಂಗ್ ನ್ಯೂಸ್~ ಕೂಡ ನನ್ನದೇ ಎನ್ನುವುದು ವಿಷಾದದ ಸಂಗತಿ~ ಎಂದರು ನಾಗತಿಹಳ್ಳಿ. ಗಂಭೀರ ವಿಷಯವನ್ನು ಒಳಗೊಂಡಿದ್ದರೂ ಚಿತ್ರಕ್ಕೆ ಭರ್ತಿ ಮನರಂಜನೆಯ ಹೂರಣವಿದೆ. ರಂಗಾಯಣ ರಘು, ಸಾಧು ಕೋಕಿಲ, ಅರುಣ್ ಸಾಗರ್ ಅವರು ಹಾಸ್ಯದ ಹೊಳೆ ಹರಿಸಿದ್ದಾರೆ.ಚಿತ್ರದಲ್ಲಿ ಅರುಣ್ ಅವರದು ಅಭಿನವ ಪಿಕಾಸೊ ಪಾತ್ರ. ನಗ್ನತೆಯನ್ನು ಆರಾಧಿಸಲು ತೊಡಗುವ ಈ ಪೇಂಟರ್, ಅದರಿಂದ ಅನುಭವಿಸುವ ಸಂಕಷ್ಟಗಳನ್ನು ಚಿತ್ರದಲ್ಲಿ ಹಾಸ್ಯ ಲೇಪನದೊಂದಿಗೆ ಹಿಡಿದಿಡಲಾಗಿದೆಯಂತೆ.ತಮ್ಮ ಮುಂದಿನ ಚಿತ್ರದ ಕುರಿತೂ ನಾಗತಿಹಳ್ಳಿ ಮಾತನಾಡಿದರು. ಪಂಪನ ಕಾವ್ಯ, ಜನಪದ, ರಾಮಾಯಣ, ಮಹಾಭಾರತಗಳನ್ನು ಓದುತ್ತಿರುವ ಅವರು ಈ ಕಾವ್ಯಗಳನ್ನು ವರ್ತಮಾನದ ಬೆಳಕಿನಲ್ಲಿ ನೋಡುವ, ಅದನ್ನೆಲ್ಲಾ ಸೇರಿಸಿ ಒಂದು ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದಾರೆ. ಆ ಕತೆ ಕಾಗದದ ಮೇಲೆ ಮೂಡುತ್ತಿದ್ದರೂ ಅದಕ್ಕೆ ಇನ್ನೂ ಸ್ಪಷ್ಟವಾದ ಆಕಾರ ದೊರೆತಿಲ್ಲವಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry