ಮಂಗಳವಾರ, ಏಪ್ರಿಲ್ 13, 2021
32 °C

ಕಾಗದದಲ್ಲಿ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಶ್ರಯ ಯೋಜನೆ ಹೆಸರು ಬದಲಾಗಿ ಬಸವ ವಸತಿ ಯೋಜನೆಯಾಗಿದೆ. ಆದರೆ ಈ ಯೋಜನೆಯನ್ನು ಕಾಡುತ್ತಾ ಬಂದಿರುವ ಅಧಿಕಾರಿಗಳ ಅಸಡ್ಡೆ, ಜನಪ್ರತಿನಿಧಿಗಳ ಮಧ್ಯಪ್ರವೇಶ ಮತ್ತು ನಿವೇಶನ ಕೊರತೆಯಂತಹ ಸಮಸ್ಯೆಗಳು ಬದಲಾಗಿಲ್ಲ. ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲೆಲ್ಲ ಇದೇ ಸ್ಥಿತಿ.ಗ್ರಾಮ ಪಂಚಾಯಿತಿ ಹಂತದಲ್ಲಿ ಅರ್ಹ ಫಲಾನುಭವಿ ಆಯ್ಕೆಯಲ್ಲಿ ಲೋಪ, ಅಲ್ಲಿ ರೂಪುಗೊಂಡ ಪಟ್ಟಿ ಶಾಸಕರ ಅಧ್ಯಕ್ಷತೆಯ ಆಶ್ರಯ ಸಮಿತಿಯಲ್ಲಿ ಅನುಮೋದನೆ ಪಡೆಯುವಲ್ಲಿ ಹಿನ್ನಡೆ, ಗ್ರಾಮ ಪಂಚಾಯಿತಿ ಕಳುಹಿಸಿದ ಪಟ್ಟಿಯಲ್ಲಿನ ಹೆಸರು ತೆಗೆದು ಬೇರೊಬ್ಬರ ಹೆಸರು ಸೇರ್ಪಡೆ ಮತ್ತು ತಕರಾರುಗಳಿಂದಾಗಿ ಅರ್ಹ ಫಲಾನುಭವಿಗೆ ಮೂರು ವರ್ಷಗಳಾದರೂ ಮನೆ ಸಿಕ್ಕಿಲ್ಲ.`ಗುಲ್ಬರ್ಗ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ವಸತಿ ನಿರ್ಮಿಸಲು 11,000 ನಿವೇಶನ ಬೇಕಾಗಿದೆ. ಜಿಲ್ಲಾಧಿಕಾರಿ ಮತ್ತು ಆಯಾ ತಾಲ್ಲೂಕು ದಂಡಾಧಿಕಾರಿಗಳು ಈ ನಿವೇಶನಗಳನ್ನು ಗುರುತಿಸಬೇಕು.. ಆಗ ಮಾತ್ರ ಫಲಾನುಭವಿಗಳಿಗೆ ಮನೆ ಹಂಚಲು ಸಾಧ್ಯವಾಗುತ್ತದೆ.ಆದರೆ ಬಹುತೇಕ ಜಿಲ್ಲೆಗಳ ಪ್ರತಿಕ್ರಿಯೆ ನೀರಸವಾಗಿದೆ~ ಎನ್ನುತ್ತಾರೆ ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವಿರೂಪಾಕ್ಷಪ್ಪ ಬಿ. ಕಿರಣಗಿ.

ನಿವೇಶನ, ಮನೆ ಹಂಚಿಕೆ ವಿಷಯದಲ್ಲಿ ಜಿಲ್ಲೆಯ ಆಳಂದ, ಅಫಜಲಪುರ, ಚಿಂಚೋಳಿ ತಾಲ್ಲೂಕುಗಳಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.

 

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಯಾದಗಿರಿ ಜಿಲ್ಲೆಯಲ್ಲಿ ಮೂರು ವರ್ಷಗಳಿಂದ  ಯೋಜನೆ ನೆನೆಗುದಿಗೆ ಬಿದ್ದಿದೆ. ಯಾದಗಿರಿ ತಾಲ್ಲೂಕಿನ ಬಾಡಿಯಾಳ, ಶಹಾಪುರ ತಾಲ್ಲೂಕಿನ ವಡಗೇರಾ, ಬೆಂಡೆಬೆಂಬಳಿ ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಾಜೀವ ಗಾಂಧಿ ವಸತಿ ನಿಗಮದ ವಿಶೇಷಾಧಿಕಾರಿಗಳೇ ಜಿಲ್ಲೆಗೆ ಬಂದು ತನಿಖೆ ನಡೆಸಿದ್ದಾರೆ.ರಾಯಚೂರು ಜಿಲ್ಲೆಯಲ್ಲಿ ಒಟ್ಟು 4,736 ಮನೆ ಮಂಜೂರಾಗಿದ್ದು, 2,519 ಪೂರ್ಣಗೊಂಡಿವೆ. ದೇವದುರ್ಗ ತಾಲ್ಲೂಕಿನಲ್ಲಿ ಆಶ್ರಯ ಮನೆ ಹಂಚಿಕೆಯಲ್ಲಿ ಶಾಸಕರ ಹಸ್ತಕ್ಷೇಪ ಆಗಿದೆ ಎಂಬ ಆರೋಪ ಇದೆ.

 

ಆಶ್ರಯ ಮನೆ ಹಂಚಿಕೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸದೇ ಅನರ್ಹರಿಗೆ ಮನೆ ಹಂಚಲಾಗಿದೆ ಎಂದು ಸಾರ್ವಜನಿಕರಿಂದ ಜಿ.ಪಂಗೆ ದೂರು ಬಂದ ಹಿನ್ನೆಲೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮನೋಜಕುಮಾರ ಜೈನ್ ಜಿ.ಪಂ ಉಪಕಾರ್ಯದರ್ಶಿ ಮಹಮ್ಮದ್ ಯೂಸೂಫ್ ನೇತೃತ್ವದಲ್ಲಿ ತನಿಖೆಗೆ ಸೂಚಿಸಿದ್ದಾರೆ.ಬೀದರ್ ಜಿಲ್ಲೆಯ ಕಥೆ ಇದಕ್ಕಿಂತ ಭಿನ್ನವೇನಿಲ್ಲ. ಇಲ್ಲಿಯ ಅಧಿಕಾರಿಗಳು ಹಳೆ ಅಂಕಿ-ಅಂಶಗಳನ್ನಿಟ್ಟುಕೊಂಡು ಕುಳಿತಿದ್ದಾರೆ. ಶಾಸಕರ ಅಧ್ಯಕ್ಷತೆಯಲ್ಲಿ ಎಲ್ಲಿಯೂ ಸಭೆ ನಡೆಸಿಲ್ಲ. ಆಶ್ರಯ ಯೋಜನೆಯ ಪರಿಶೀಲನಾ ಸಭೆ ಈವರೆಗೆ ನಡೆದಿಲ್ಲ ಎಂದು ಅರ್ಹ ಫಲಾನುಭವಿಗಳು ಅಳಲು ತೋಡಿಕೊಳ್ಳುತ್ತಾರೆ.ಕೊಪ್ಪಳ ಜಿಲ್ಲೆಯಲ್ಲಿ ಗುರಿ-ಸಾಧನೆಯ ಪಟ್ಟಿ ಇದೆ ಹೊರತು ನಿರೀಕ್ಷಿತ ಮಟ್ಟದ ಅನುಷ್ಠಾನವಾಗಿಲ್ಲ. 2008ರಿಂದ ಬೇರೆ ಬೇರೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂಬ ಮಾಹಿತಿ ಅಧಿಕಾರಿಗಳಿಂದ ತಿಳಿದು ಬರುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.