ಬುಧವಾರ, ಜೂಲೈ 8, 2020
21 °C

ಕಾಗಿಣಾ ಮೇಲೆ ಆತಂಕದ ಪಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ:  ಎಡಕ್ಕೆ ನೋಡಿದರೂ ನೀರು, ಬಲಕ್ಕೆ ಇಣುಕಿದರೂ ನೀರು. ವಾಹನ ಸಾಗುವಾಗ ಎತ್ತ ಬಿದ್ದರೂ ಅನಾಹುತ ಕಟ್ಟಿಟ್ಟ ಬುತ್ತಿ. ವಾಹನ ಚಾಲಕರು ಸ್ವಲ್ಪವೂ ಎಚ್ಚರ ತಪ್ಪಿದ್ದರೆ ಪ್ರಯಾಣಿಕರ ಹೃದಯಗಳ ಬಡಿತ ಸ್ತಬ್ಧ ಗ್ಯಾರಂಟಿ. ಯಮಲೋಕದ ಪಯಣ ಖಾತ್ರಿ. ಇಲ್ಲಿನ ಪ್ರಯಾಣವೇ ಆತಂಕದ ನಡುವೆ ಮಾಡಬೇಕು..!ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಹರಿಯುವ ಕಾಗಿಣಾ ನದಿಗೆ ನಿರ್ಮಾಣ ಮಾಡಿರುವ ಸೇತುವೆ ಅಪಾಯಕ್ಕೆ ಆಹ್ವಾನಿಸುವಂತಿದೆ. ಸೇತುವೆ ಮೇಲೆ ಪ್ರಯಾಣ ಮಾಡುವಾಗ ಜವರಾಯ ಇಲ್ಲಿ ಹೊಂಚು ಹಾಕಿ ಕುಳಿತಿದ್ದಾನೆ ಎಂದು ಭಾಸವಾಗುತ್ತದೆ. ಸೇತುವೆಯ ಎರಡೂ ಪಕ್ಕದಲ್ಲಿ ಇರುವ ಸಿಮೆಂಟಿನ ಕಂಬಗಳು ಅತೀ ಚಿಕ್ಕದಾಗಿವೆ. ಅಪಾಯ ತಪ್ಪಿಸಲು ಸಾಧ್ಯವೇ ಇಲ್ಲ ಎನ್ನುತ್ತಾರೆ ವಾಹನ ಚಾಲಕರು.30 ವರ್ಷಗಳ ಹಿಂದೆ ಸೇತುವೆ ನಿರ್ಮಾಣ ಮಾಡುವಾಗ ಹಾಕಿರುವ ಸಿಮೆಂಟ್ ಕಂಬಗಳು ಕಿತ್ತು ಹೋಗಿವೆ. ಸ್ವಲ್ಪ ಡಿಕ್ಕಿ ಹೊಡೆದರೂ ಪ್ರತಿರೋಧವಿಲ್ಲದೆ ಉದುರಿ ಹೋಗುವಂತಿವೆ ಹಳೆಯದಾದ ಸಿಮೆಂಟಿನ ರಕ್ಷಣಾ ಕಂಬಗಳು. ಸೇತುವೆ ಮೇಲೆ ಅಲ್ಲಲ್ಲಿ ಗುಂಡಿಗಳಿದ್ದು ಸಾರಿಗೆ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗುತ್ತಿದೆ. ಗುಂಡಿ ತಪ್ಪಿಸಿ ವಾಹನ ಓಡಿಸುವಾಗ ಚಾಲಕರು ಸ್ವಲ್ಪ ನಿಯಂತ್ರಣ ತಪ್ಪಿದರೆ ವಾಹನಗಳು ನದಿಯ ಪ್ರಪಾತಕ್ಕೆ ಬೀಳುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಾರೆ ಪ್ರಯಾಣಿಕರು.ಚಿತ್ತಾಪುರದಿಂದ ಜಿಲ್ಲಾ ಕೇಂದ್ರ ಗುಲ್ಬರ್ಗವನ್ನು ಸಂಪರ್ಕಿಸುವ ಮುಖ್ಯ ರಸ್ತೆ ಇದು. ಈ ಸೇತುವೆ ಮೇಲೆ ದಿನನಿತ್ಯ ಸಾರಿಗೆ ಸಂಸ್ಥೆಯ ನೂರಾರು ಬಸ್ಸುಗಳು, ಲಾರಿಗಳು, ಟ್ಯಾಂಕರ್‌ಗಳು, ಇತರ ವಾಹನಗಳು ಸಂಚರಿಸುತ್ತವೆ. ಇಲ್ಲಿನ ಐತಿಹಾಸಿಕ ನಾಗಾಯಿ ವೀಕ್ಷಣೆಗೆ ಹಾಗೂ ಯಲ್ಲಮ್ಮ ದೇವಿ ದರ್ಶನಕ್ಕೆ ರಾಜ್ಯದ ವಿವಿಧ ಭಾಗದಿಂದ ಹಾಗೂ ಹೊರ ರಾಜ್ಯದಿಂದ ಭಕ್ತರು ಇದೇ ರಸ್ತೆಯ ಮಾರ್ಗದಿಂದ ಚಿತ್ತಾಪುರಕ್ಕೆ ಆಗಮಿಸುತ್ತಾರೆ. ಅದೃಷ್ಟ ನೆಟ್ಟಗಿರದಿದ್ದರೆ ಸೇತುವೆ ಮೇಲೆ ಪ್ರಯಾಣಿಸುವಾಗ ಜವರಾಯನ ದರ್ಶನ ಖಚಿತ ಎನ್ನುತ್ತಾರೆ ಜನರು.ಮಳೆಗಾಲದಲ್ಲಿ ಕಾಗಿಣೆ ತುಂಬಿ ಹರಿಯುತ್ತಾಳೆ. ಸೇತುವೆ ವಾರದಲ್ಲಿ ಎರಡು ಮೂರು ದಿನ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗುತ್ತದೆ. ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧವಾಗುತ್ತದೆ. ಸೇತುವೆಗೆ ಸಮಾನವಾಗಿ ಹರಿಯುವ ನದಿ ಪ್ರವಾಹ ವೀಕ್ಷಿಸುತ್ತಲೆ ಪ್ರಯಾಣಿಸುವಾಗ ಚಾಲಕರು ಸ್ವಲ್ಪ ಎಚ್ಚರ ತಪ್ಪಿ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡರೆ ಅಥವಾ ನಿರ್ಲಕ್ಷ್ಯ ವಹಿಸಿದರೆ ಪ್ರಯಾಣಿಕರೆಲ್ಲರೂ ಜಲಸಮಾಧಿಯಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾರೆ ದಂಡೋತಿ ಗ್ರಾಮಸ್ಥ ಮಹ್ಮದ್ ಶಫಿಕ್ ಡೋಂಗಾ.ಸೇತುವೆ ಎತ್ತರ ಹೆಚ್ಚಿಸಬೇಕು. ಯಾವುದೇ ಅಪಾಯ ಆಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಸೇತುವೆ ಮೇಲೆ ಆಧುನಿಕ ರೀತಿಯಲ್ಲಿ ರಕ್ಷಣಾ ಗೋಡೆ ನಿರ್ಮಾಣ ಮಾಡಬೇಕು. ಸೇತುವೆ ಮೇಲೆ ರಸ್ತೆ ಹಾಳಾಗದಂತೆ ಸದಾ ಎಚ್ಚರ ವಹಿಸಬೇಕು ಎನ್ನುತ್ತಾರೆ ಚಿತ್ತಾಪುರದ ರವೀಂದ್ರನಾಥ ಎನ್. ಇವಣಿ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.