ಕಾಗೆ ಹಾರ‌್ಸೋಣ ಬನ್ನಿ...

7

ಕಾಗೆ ಹಾರ‌್ಸೋಣ ಬನ್ನಿ...

Published:
Updated:

`ಕಾ... ಕಾ...~ ಎಂದಿತು ನನ್ನ ಮನೆಯ ಹತ್ತಿರದ ಮರದ ಮೇಲಿದ್ದ ಕಾಗೆ. ಏನನ್ನೋ ಬರೆಯುತ್ತ ಕುಳಿತಿದ್ದ ನಾನು ಕತ್ತೆತ್ತಿ `ಏನು? ಯಾಕೆ ಡಿಸ್ಟರ್ಬ್ ಮಾಡ್ತಿದೀಯ?~ ಎಂದೆ. ತಕ್ಷಣ ಮರದ ಮೇಲಿನಿಂದ ಹಾರಿ ಬಂದು ಕಾಂಪೌಂಡ್ ಮೇಲೆ ಕುಳಿತ ಕಾಗೆ `ಇದು ಸರೀನಾ?~ ಎಂದು ಪ್ರಶ್ನಿಸಿತು.`ಏನು? ಯಾವುದು ಸರಿ?~

`ಅಲ್ಲ, ನಮ್ಮನ್ನೆಲ್ಲ ಹೀಗೆ ಅವಮಾನ ಮಾಡೋದು ಸರೀನಾ?~ ಕಾಗೆ ತನ್ನ ಕೊಕ್ಕನ್ನು ಚೂಪು ಮಾಡಿಕೊಂಡು ಕೋಪ ಪ್ರದರ್ಶಿಸಿತು.`ಅವಮಾನಾನ? ಯಾರು ಮಾಡಿದ್ರು?~

`ನೀವು ಪತ್ರಕರ್ತರು ಅಂತ ಕೇಳ್ತಿದೀನಿ, ನಮ್ಮನ್ನ ರಾಜಕಾರಣಿಗಳಿಗೆ ಹೋಲಿಸೋದು ಅವಮಾನ ಅಲ್ವಾ? ನಮಗೇನು ಮಾನ, ಮರ‌್ಯಾದೆ ಇಲ್ವಾ? ರಾಜಕಾರಣಿಯೊಬ್ಬರು ಕಾಶಿಯಾತ್ರೆ ಮಾಡಿದ್ರೆ `ದಕ್ಷಿಣದ ಕಾಗೆ ಉತ್ತರಕ್ಕೆ ಹೋದರೆ ಕೋಗಿಲೆ ಆಗಿಬಿಡುತ್ತಾ~ ಅಂತಾರಲ್ಲ, ಕಾಗೆಗಳೆಂದರೆ ಅಷ್ಟು ಕನಿಷ್ಠಾನಾ? ನಿಕೃಷ್ಟಾನಾ?...~`ಓ ಅದಾ, ಅರ್ಥವಾಯ್ತು ಬಿಡು. ಅದು ಯಾರೋ ಕವಿಗಳು ಹೇಳಿದ್ದು. ಉದಾಹರಣೆ ಕೊಟ್ಟಿರ‌್ತಾರೆ, ಏನು ತಪ್ಪು?~`ತಪ್ಪೇ. ಕಾಗೆ ಏಕೆ ಕೋಗಿಲೆ ಆಗಬೇಕು? ಕಾಗೆ ಕಾಗೇನೇ. ನಮಗೂ ನಮ್ಮದೇ ಆದ ಐಡೆಂಟಿಟಿ ಇದೆ. ನಾವು ಕಾ... ಕಾ... ಅಂತೀವೇ ಹೊರತು ಈ ರಾಜಕಾರಣಿಗಳ ಹಾಗೆ ಕಾಕಾ ಹೊಡೆಯೋಲ್ಲ. ಅಧಿಕಾರಕ್ಕಾಗಿ ಯಾರ ಕಾಲೂ ಎಳೆಯೋಲ್ಲ ಗೊತ್ತಾ?...~`ಅಲ್ಲ ಅದೂ... ನಿಮ್ಮ ಬಣ್ಣ ಕಪ್ಪು ಅಂತ ಹಾಗೆ ಹೇಳಿರಬೇಕು...~

`ಕಪ್ಪಾದ್ರೆ? ಹೀಯಾಳಿಸಬೇಕಾ? ಕಪ್ಪು ಕಸ್ತೂರಿ ಅಲ್ವಾ? ಹೋಗ್ಲಿ, ಬೆಳ್ಳಗಿರೋದೆಲ್ಲ ಹಾಲಾ?~`ಹಾಗಲ್ಲ, ನಿಮ್ಮ ಧ್ವನಿ ಕರ್ಕಶ ಅಂತ ಇರಬಹುದು...~

`ನಮ್ಮ ಧ್ವನಿ ಕರ್ಕಶವಾದ್ರು ಹೃದಯ ಒಳ್ಳೇದಲ್ವಾ? ರಾಜಕಾರಣಿಗಳ ಹಾಗೆ ನಯವಾಗಿ ಮಾತಾಡಿ ವಂಚನೆ ಮಾಡ್ತೀವಾ? ಕೋಗಿಲೆ ಕಳ್ಳತನದಲ್ಲಿ ಬಂದು ನಮ್ಮ ಗೂಡಲ್ಲಿ ಮೊಟ್ಟೆ ಇಟ್ರೂ ಭೇದ ಮಾಡದೆ ಮರಿ ಮಾಡ್ತೀವಿ. ತುತ್ತು ಕೊಟ್ಟು ಕಾಪಾಡ್ತೀವಿ. ಈ ರಾಜಕಾರಣಿಗಳ ಹಾಗೆ ಇನ್ನೊಬ್ಬರ ಮನೆ ಮುರೀತೀವಾ?...~`ಸರಿಯಪ್ಪ ಕಾಗೆರಾಜ, ನಿನ್ನ ಪ್ರಶ್ನೆಗಳಿಗೆ ನನ್ನ ಹತ್ರ ಉತ್ತರ ಇಲ್ಲ. ಈಗ ಏನ್ ಮಾಡ್ಬೇಕು ಅಂತೀಯಾ?~`ಕಾಗೆಗಳನ್ನ ರಾಜಕಾರಣಿಗಳಿಗೆ ಹೋಲಿಸಿ ಅವಮಾನ ಮಾಡಿದ್ದರ ಬಗ್ಗೆ ಪ್ಯಾನಲ್ ಡಿಸ್ಕಶನ್ ಆಗ್ಬೇಕು. ರಾಜಕಾರಣಿಗಳು ಕೆಮ್ಮಿದ್ದು, ಕ್ಯಾಕರಿಸಿದ್ದನ್ನೆಲ್ಲ ಟಿ.ವಿ.ಯವರು ಗಂಟೆಗಟ್ಲೆ ಚರ್ಚೆ ಮಾಡ್ತಾರೆ? ಯಾರೋ ನಟ ಹೆಂಡತಿಗೆ ಹೊಡೆದದ್ದನ್ನ, ಶಾಸಕರು ಬ್ಲೂ ಫಿಲಂ ನೋಡಿದ್ದನ್ನ ಇಡೀ ದಿನ ತೋರಿಸಿ ತಲೆ ತಿಂತಾರೆ? ಹಾಗೇ ನಮ್ಮ ಅವಮಾನದ ಬಗ್ಗೇನೂ ಟಿ.ವಿ.ಯಲ್ಲಿ, ಪತ್ರಿಕೆಗಳಲ್ಲಿ ಚರ್ಚೆ ಆಗ್ಬೇಕು...~`ತಡಿ ಮಾರಾಯ, ನಿಂಗೆ ಯಡ್ಯೂರಪ್ಪ ಕಾಶಿಗೆ ಹೋಗಿದ್ದು ಯಾಕೆ ಗೊತ್ತಾ?~

`ಮದುವೆಗಳಲ್ಲಿ ಗಂಡು ಕಾಶಿಯಾತ್ರೆಗೆ ಹೋಗ್ತೀನಿ ಅಂತ ಹೊರಟಾಗ ಬೇಡ ಅಂತ ತಡೆದು, ಕಾಲು ತೊಳೆದು ಹೆಣ್ಣು ಕೊಡ್ತಾರಲ್ಲ, ಹಂಗೆ ನಾನೂ ಕಾಶಿಯಾತ್ರೆಗೆ ಹೊರಟ್ರೆ ಬೇಡ ಅಂತ ತಡೆದು ಕುರ್ಚಿ ಕೊಡ್ತಾರೆ ಅಂತ ಯಡ್ಯೂರಪ್ಪ ತಿಳ್ಕಂಡಿದ್ರೇನೋ...~`ಕರೆಕ್ಟ್. ಆದರೆ ಅದು ಕಾಶಿಯಾತ್ರೆ ಅಲ್ಲ, ಕುರ್ಚಿ ಯಾತ್ರೆ. ಬಿಜೆಪೀಲಿ ಈಗ ಕುರ್ಚಿ ಕಾದಾಟ ಜಾಸ್ತಿ ಆಗಿ ಪಾಪ ಟಿ.ವಿ.ಯೋರೆಲ್ಲ ಬ್ಯುಸಿ ಆಗ್ಬಿಟ್ಟಿದಾರೆ. ಔತಣಕೂಟ, ಚಿಂತನ-ಮಂಥನ ನಡೀತೀರೋವಾಗ ನಿನ್ ಪ್ರಾಬ್ಲಂ ಯಾರು ಕೇಳ್ತಾರೆ?~`ನಾವು ಒಂದು ಅಗುಳು ಅನ್ನ ಕಂಡ್ರೆ ನಮ್ಮ ಬಳಗಾನೆಲ್ಲ ಕರೀತೀವಿ. ಇವರ ಹಾಗೆ ಔತಣಕೂಟಕ್ಕೆ ಕರೆದು ಅಧಿಕಾರಕ್ಕೆ ಕಚ್ಚಾಡೋದಿಲ್ಲ. ಅದಿರ‌್ಲಿ, ಔತಣಕೂಟದಲ್ಲಿ ಈ ಯಡ್ಯೂರಪ್ಪ, ಈಶ್ವರಪ್ಪ, ಶೆಟ್ಟರ್ ಎಲ್ಲ ಕೈ ಎತ್ಕಂಡು ಯಾಕೆ ನಿಂತಿದ್ರು?~`ಕೈ ಎತ್ತೋದು~ ಅಂದ್ರೆ ಬೇರೆ ಅರ್ಥ ಬರುತ್ತೆ ಕಾಗೆರಾಜ, ಅದು ಬಲ ಪ್ರದರ್ಶನ. ಆದ್ರೂ ಒಳಗೊಳಗೆ ಯಾರಿಗೆ ಯಾರು ಕೈ ಎತ್ತುತಾರೋ, ಯಾರಿಗೆ ಯಾರು ಕಾಗೆ ಹಾರಿಸ್ತಾರೋ ಗೊತ್ತಾಗಲ್ಲ. ಟಿ.ವಿ.ಯೋರ ಮುಂದೆ ಕೈ ಹಿಡ್ಕೋತಾರೆ. ಆಮೇಲೆ ಎಲ್ಲಿ ಬಿಡಬೇಕೋ ಅಲ್ಲಿ ಬಿಟ್‌ಬಿಡ್ತಾರೆ...~`ನೋಡಿ ನೋಡಿ ಮತ್ತೆ ಅವಮಾನ. `ಕಾಗೆ ಹಾರಿಸೋದು~ ಅಂದ್ರೆ ಮೋಸ ಮಾಡೋದು ಅಂತ ತಾನೆ? ಅದಕ್ಕೂ ನಮ್ಮ ಹೆಸರು ಯಾಕೆ ಬಳಸ್ತೀರಿ? ನಾವು ಯಾರಿಗೆ ಮೋಸ ಮಾಡಿದೀವಿ?~`ಸ್ಸಾರಿ ಸ್ಸಾರಿ... ಅದೂ ಪಟ್ ಅಂತ ಬಾಯಿಗೆ ಬಂದುಬಿಡ್ತು. ಈ ರಾಜಕೀಯ ಅಂದ್ರೇನೇ ಹಾಗೆ. ಬರೀ ಮೋಸ. ಯಡ್ಯೂರಪ್ಪ ಅವತ್ತು ಶೆಟ್ಟರ್‌ನ ಸಿ.ಎಂ. ಮಾಡಬಾರ್ದು ಅಂತ ಹೋರಾಡಿದ್ರು. ಮೊನ್ನೆ ಮೊನ್ನೆ ನನ್ನನ್ನು ಜೈಲಿಗೆ ಕಳಿಸಿದ್ದೇ ಈಶ್ವರಪ್ಪ ಅಂತ ಕೂಗಾಡಿದ್ರು. ಇವತ್ತು ನೋಡಿದ್ರೆ  `ಕಾಗೆ ಹಾರ‌್ಸೋಣ ಬನ್ನಿ~ ಅನ್ನೋ ತರ ಮೂವರೂ ಒಟ್ಟಿಗೇ ಕೈ ಎತ್ಕಂಡು ನಿಂತಿದಾರೆ. ಅದ್ಕೇ ಹಾಗಂದೆ...~

`ತಪ್ಪಲ್ವಾ?~`ಯಾವುದು ಹಾಗೆ ಕೈ ಎತ್ಕಂಡು ನಿಂತಿದ್ದಾ?~

`ಅಲ್ಲ, ಕಾಗೆ ಹಾರ‌್ಸೋಣ ಅಂದಿದ್ದು. ಹೋಗ್ಲಿ ಬಿಜೆಪಿ ಸಮುದ್ರ ಮಥನದಲ್ಲಿ... ಅಲ್ಲಲ್ಲ ಚಿಂತನ ಮಂಥನದಲ್ಲಿ ಏನೇನ್ ಹೊರಗೆ ಬಂತಂತೆ?~`ಯಡೆಯೂರಪ್ಪ ಪಾಲಿಗೆ ಹಾಲಾಹಲ ಬಂತಂತೆ. ಸದಾನಂದಗೌಡ್ರ ಪಾಲಿಗೆ ಅಮೃತ ಬಂತಂತೆ. ಮುಂದೇನಾಗ್ತತೋ ಗೊತ್ತಿಲ್ಲ... ನಾಳೆ ಯಡ್ಯೂರಪ್ಪ ಅವರ ಹುಟ್ಟಿದ ಹಬ್ಬ. ಅವತ್ತು ಅವರು ಕೇಕ್ ಮೇಲಿನ ಕ್ಯಾಂಡಲ್ ದೀಪ ಆರಿಸ್ತಾರೋ ಬಿಜೆಪಿ ದೀಪಾನೇ ಆರಿಸ್ತಾರೋ ಗೊತ್ತಿಲ್ಲ~`ಸರಿ ಈಗಲಾದ್ರು ಟಿ.ವಿ.ಯೋರಿಗೆ ಹೇಳಿ ನಮ್ಮ ಬಗ್ಗೆ ಪ್ಯಾನಲ್ ಡಿಸ್ಕಶನ್ ಮಾಡಿಸ್ತೀರಾ?~`ನೀನೊಳ್ಳೆ ಗಂಟುಬಿದ್ಯಲ್ಲ? ಟಿ.ವಿ.ಯೋರು ಹಾಗೆ ಕಾಗೆ-ಕೋಗಿಲೆಗಳನ್ನ ಚರ್ಚೆಗೆ ಕರೆಯೋಲ್ಲಪ್ಪ...~`ಹೌದಾ? ಮತ್ತೆ ಅವಮಾನ ಏಕೆ ಮಾಡ್ಬೇಕು? ನಮ್ಮನ್ನ ಕೆಣಕಿದ್ರೆ ಸುಮ್ನಿರೋಲ್ಲ...~

`ಏನ್ಮಾಡ್ತೀರಿ? ನಿಮ್ ಕೈಲಿ ಏನಾಗುತ್ತೆ?~`ಈಗ ಏನೂ ಮಾಡಲ್ಲ. ಮುಂದೆ ನೀವು ಸತ್ತಾಗ ಪಿಂಡ ತಿನ್ನೋಕೆ ನಾವು ಬರದಿದ್ರೆ? ನೀವು ಪ್ರೇತಗಳಾಗ್ತೀರಿ, ಬೇತಾಳಗಳಾಗ್ತೀರಿ...~`ನಾವು ಪತ್ರಕರ್ತರು ಈಗಲೂ ಸುದ್ದಿಯ ಅಥವ ರಾಜಕಾರಣಿಗಳ ಬೆನ್ನು ಹತ್ತಿದ ಬೇತಾಳಗಳೇ... ವ್ಯತ್ಯಾಸ ಏನಿಲ್ಲ...~ ನಾನು ಸದಾನಂದಗೌಡರ ಹಾಗೆ ನಕ್ಕೆ. ಕಾಗೆರಾಜನಿಗೆ ಕೋಪ ಬಂತು. ಯಡ್ಯೂರಪ್ಪ ಅವರ ಹಾಗೆ ಮುಖ ಊದಿಸಿಕೊಂಡು ಪುರ‌್ರನೆ ಹಾರಿ ಹೋಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry