ಶನಿವಾರ, ನವೆಂಬರ್ 23, 2019
18 °C

ಕಾಗೇರಿ, ಉದಾಸಿ ನಾಮಪತ್ರ ಸಲ್ಲಿಕೆ

Published:
Updated:

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್.ಎ.ರಾಮದಾಸ್ ಸೇರಿದಂತೆ ರಾಜ್ಯದಲ್ಲಿ 129 ಅಭ್ಯರ್ಥಿಗಳು ಶನಿವಾರ ನಾಮಪತ್ರ ಸಲ್ಲಿಸಿದರು. ಬುಧವಾರದಿಂದ ಈಚೆಗೆ ನಾಮಪತ್ರ ಸಲ್ಲಿಸಿದವರ ಒಟ್ಟು ಸಂಖ್ಯೆ 257ಕ್ಕೆ ಏರಿದೆ.ಕಾಗೇರಿ ಅವರು ಉತ್ತರ ಕನ್ನಡ ಜಿಲ್ಲೆ ಶಿರಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರೆ, ರಾಮದಾಸ್ ಅವರು ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಕೆಜೆಪಿ ಮುಖಂಡ ಸಿ.ಎಂ.ಉದಾಸಿ ಅವರು ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.ಇದುವರೆಗೂ ಬಿಜೆಪಿಯ 16, ಜೆಡಿಎಸ್‌ನ 10 ಹಾಗೂ ಕಾಂಗ್ರೆಸ್‌ನ 15 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಉಳಿದವರು ಪಕ್ಷೇತರ ಹಾಗೂ ಇತರ ಪಕ್ಷಗಳ ಅಭ್ಯರ್ಥಿಗಳಾಗಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ, `ಈವರೆಗೂ ಚುನಾವಣೆಗೆ ಸಂಬಂಧಿಸಿದಂತೆ ಸುಮಾರು 3,266 ದೂರುಗಳು ದಾಖಲಾಗಿವೆ.ಅದರಲ್ಲಿ 1,054 ದೂರುಗಳು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ಗುರುತಿನ ಚೀಟಿಗೆ ಸಂಬಂಧಿಸಿವೆ. ಈಗಾಗಲೇ 1,845 ದೂರುಗಳು ವಿಲೇವಾರಿಯಾಗಿವೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 92 ದೂರುಗಳನ್ನು ಸ್ವೀಕರಿಸಿದ್ದು, 67 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)