ಸೋಮವಾರ, ಮೇ 10, 2021
26 °C

ಕಾಗೋಡು ಖಡಕ್: ಶೆಟ್ಟರ್ ಸುಸ್ತು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಿಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವುದನ್ನು ಬಿಚ್ಚಿಡಲೇ?' ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಬೀಸಿದ ಮಾತಿನ ಚಾಟಿಗೆ ಬಿಜೆಪಿಯ ಜಗದೀಶ ಶೆಟ್ಟರ್ ಸುಸ್ತಾದ ಅಪರೂಪದ ಪ್ರಸಂಗ ಬುಧವಾರ ವಿಧಾನಸಭೆಯಲ್ಲಿ ನಡೆಯಿತು.ಸಾಗುವಳಿ ಮಾಡುತ್ತಿರುವ ಅರಣ್ಯ ಭೂಮಿ ತೆರವುಗೊಳಿಸುವಂತೆ ರೈತರಿಗೆ ನೀಡಿರುವ ನೋಟಿಸ್ ಸಂಬಂಧ `ತಾ ಮುಂದು-ನಾ ಮುಂದು' ಎಂದು ಪೈಪೋಟಿ ಮೇಲೆ ಮಾತನಾಡಿದ ಬಿಜೆಪಿ ಸದಸ್ಯರು ಕೊನೆಗೆ, `ಸರ್ಕಾರ ರೈತರ ಹಿತಾಸಕ್ತಿ ಕಾಪಾಡಲು ವಿಫಲವಾಗಿದೆ' ಎಂದು ಆರೋಪಿಸಿ ಸಭಾತ್ಯಾಗಕ್ಕೆ ಮುಂದಾದರು. ಆಗ ಸ್ಪೀಕರ್ ಅವರು ಬೀಸಿದ ಚಾಟಿಯಿಂದಾಗಿ ಬಿಜೆಪಿಯವರು ತಬ್ಬಿಬ್ಬಾದರು.ನೋಟಿಸ್ ವಾಪಸ್ ಪಡೆಯುವಂತೆ ಮಾಡಿದ ಸಲಹೆಗೆ ಸರ್ಕಾರ ಸ್ಪಂದಿಸಿಲ್ಲ. ರೈತರ ಹಿತಾಸಕ್ತಿ ಕಾಪಾಡಿಲ್ಲ ಎಂದು ಆರೋಪಿಸಿ ಸಭಾತ್ಯಾಗ ಮಾಡಲು ಬಿಜೆಪಿಯವರು ಸಜ್ಜಾಗುತ್ತಿರುವುದನ್ನು ಅರಿತ ಕಾಗೋಡು ತಿಮ್ಮಪ್ಪ, `ಏ ಶೆಟ್ಟರ್....ಸಭಾತ್ಯಾಗ ಮಾಡುತ್ತೀರಾ? ಆಯಿತು ಹೋಗಿ...ನಿಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವುದನ್ನು ಬಿಚ್ಚಿಡಲೇ...' ಎಂದು ಖಡಕ್ಕಾಗಿ ಆಡಿದ ಮಾತಿಗೆ ಬಿಜೆಪಿಯವರು ಗಪ್‌ಚುಪ್ ಎನ್ನದೆ ಸುಮ್ಮನಾದರು.ಗೌಡರ ತರಾತುರಿಯೂ, ರೈಗಳ ಹಸಿರೂ

`ಸರ್ಕಾರ ಗುಟ್ಕಾ ನಿಷೇಧಿಸಲು ತುರಾತುರಿ ತೋರಿದೆ' ಎಂಬ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ ಅವರ ಹೇಳಿಕೆ ವಿಧಾನ ಪರಿಷತ್ ಕಲಾಪದಲ್ಲಿ ಬುಧವಾರ ಕೆಲಕಾಲ ಮೋಜಿನ ಚರ್ಚೆಗೆ ಕಾರಣವಾಯಿತು.ಸದಾನಂದಗೌಡರು ಬಾರಿ, ಬಾರಿ `ತುರಾತುರಿ' ಪದ ಪ್ರಯೋಗ ಮಾಡಿದ್ದರಿಂದ ಮಧ್ಯೆ ಎದ್ದುನಿಂತ ದೊಡ್ಡರಂಗೇಗೌಡ `ಅದು ತುರಾತುರಿ ಅಲ್ಲ, ತರಾತುರಿ' ಎಂದು ತಿದ್ದಿದರು. `ದೊಡ್ಡರಂಗೇಗೌಡ ಅವರು ನಮಗೆ ಹೆಡ್ ಮಾಸ್ಟರ್ ಇದ್ದಂತೆ. ನನ್ನ ತಪ್ಪು ಪದ ಪ್ರಯೋಗವನ್ನು ಎತ್ತಿ ತೋರಿದ್ದಾರೆ. ನಾನು ತಿದ್ದಿಕೊಳ್ಳುತ್ತೇನೆ' ಎಂದು ಸದಾನಂದಗೌಡ ಹೇಳಿದರು.ವಿರೋಧ ಪಕ್ಷ್ಷದ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, `ತರಾತುರಿಯಲ್ಲಿ ಹೇಳುವಾಗ ಆ ಪದ ತುರಾತುರಿ ಆಗಿದೆ ಬಿಡಿ ಸರ್' ಎಂದು ತಮಾಷೆ ಮಾಡಿದರು. ಸಭಾಪತಿಗಳ ಪೀಠದಲ್ಲಿದ್ದ ಬಸವರಾಜ ಹೊರಟ್ಟಿ, `ಮಂಗಳೂರು ಭಾಗದಲ್ಲಿ ತರಾತುರಿಗೆ ತುರಾತುರಿ ಎನ್ನುತ್ತಾರೆ ಅಂದುಕೊಂಡಿದ್ದೆ' ಎಂದು ಹೇಳಿದಾಗ ಸಭೆ ನಗೆಗಡಲಲ್ಲಿ ಮುಳುಗಿತು.ವಿಶ್ವ ಪರಿಸರ ದಿನದ ಅಂಗವಾಗಿ ಅರಣ್ಯ ಸಚಿವ ರಮಾನಾಥ ರೈ ಬುಧವಾರ ವಿಧಾನ ಮಂಡಲದ ಕಲಾಪಕ್ಕೆ ಹಸಿರು ಬಣ್ಣದ ಟಿ-ಶರ್ಟ್ ಹಾಕಿಕೊಂಡು ಬಂದಿದ್ದರು. `ರೈತರ ಪರ ಕಾಳಜಿಯಿಂದಲೇ ಅವರು ಹಸಿರು ಟಿ-ಶರ್ಟ್ ಧರಿಸಿ ಬಂದಿದ್ದಾರೆ' ಎಂದು ಕಾಂಗ್ರೆಸ್ ಸದಸ್ಯರು ಹೇಳಿದರು.ಅದಕ್ಕೆ ಪ್ರತಿಕ್ರಿಯಿಸಿದ ಸದಾನಂದಗೌಡ, `ಹಸಿರು ಟವೆಲ್ ಹಾಕಿಕೊಂಡು ಬರುವವರು, ಹಸಿರು ಅಂಗಿ ತೊಡುವವರು ಹೆಚ್ಚಾಗಿದ್ದಾರೆ. ಆದರೆ, ರೈತರ ಪರ ಕಾಳಜಿಯೇ ಅವರಿಗೆ ಇಲ್ಲವಾಗಿದೆ. ಆದ್ದರಿಂದಲೇ ಹಸಿರಾಗಿದ್ದ ಅಡಿಕೆ ಮರಗಳೆಲ್ಲ ಈಗ ಕೆಂಪಾಗಿವೆ' ಎಂದು ಚುಚ್ಚಿದರು.ಅಡಿಕೆಗೆ ಆಮದು ಸುಂಕ ದರವನ್ನು ಹೆಚ್ಚಿಸಿದ್ದು ಯಾವ ಸರ್ಕಾರ ಎನ್ನುವ ವಿಷಯವಾಗಿ ಸದಾನಂದಗೌಡ ಮತ್ತು ಸಚಿವ ದೇಶಪಾಂಡೆ ನಡುವೆ ಮತ್ತೆ ತೀವ್ರ ಜಟಾಪಟಿ ನಡೆಯಿತು. ಎರಡೂ ಬಣಗಳ ಸದಸ್ಯರು ಎದ್ದು ನಿಂತು ಗದ್ದಲ ಎಬ್ಬಿಸಿದ್ದರಿಂದ ಸದನವನ್ನು ಮತ್ತೆ ಶಿಸ್ತಿಗೆ ತರಲು ಸಭಾಪತಿಗಳಿಗೆ ಕೆಲವು ನಿಮಿಷಗಳೇ ಬೇಕಾದವು.

ಕೆಮ್ಮಿದ ಉಮಾಶ್ರೀ!

ರಾಜ್ಯ ಸರ್ಕಾರದ ಏಕೈಕ ಸಚಿವೆ ಉಮಾಶ್ರೀ, ಶೀತ ಹಾಗೂ ಜ್ವರದ ಬಾಧೆಯಿಂದ ಬಳಲುತ್ತಿದ್ದರು.ಸದನದಲ್ಲಿ ಇದ್ದಷ್ಟು ಕಾಲ ಮಾತನಾಡಲು ಆಗದೆ ಅವರು ಕೆಮ್ಮುತ್ತಿದ್ದರು. `ಮೊದಲ ಸಲ ಸಚಿವರಾಗಿದ್ದೀರಿ ನಿಜ.

ಆದರೆ, ಈ ಅತಿಯಾದ ಉತ್ಸಾಹ ಒಳ್ಳೆಯದಲ್ಲ. ಮನೆಗೆ ಹೋಗಿ ವಿಶ್ರಾಂತಿ ಪಡೆಯಿರಿ' ಎಂದು ಹೊರಟ್ಟಿ ತಮಾಷೆ ಮಾಡಿದರು.ಸಭಾಪತಿಗಳಿಗೆ ರಜೆ ಚೀಟಿ ಕೊಟ್ಟ ಉಮಾಶ್ರೀ ಮನೆ ಕಡೆಗೆ ಹೊರಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.