ಶುಕ್ರವಾರ, ನವೆಂಬರ್ 15, 2019
21 °C

ಕಾಟನ್ ಸೊಸೈಟಿ ಅಕ್ರಮ: ಆರೋಪ

Published:
Updated:

ಹುಬ್ಬಳ್ಳಿ: ಬಸ್ ನಿಲ್ದಾಣದ ಜಾಗವನ್ನು ವಾಣಿಜ್ಯ ಮಳಿಗೆಯಾಗಿ ರೂಪಿಸಲು ಹೊರಟ ಇಲ್ಲಿನ ಹತ್ತಿ ಮಾರಾಟಗಾರರ ಸಹಕಾರಿ ಸಂಘದ (ಕಾಟನ್ ಸೊಸೈಟಿ) ಕ್ರಮ ಈಗ ವಿವಾದದ ಕೇಂದ್ರ ಬಿಂದುವಾಗಿ ಪರಿಣಮಿಸಿದೆ.ಶತಮಾನದ ಹೊಸ್ತಿಲಲ್ಲಿರುವ ಕಾಟನ್ ಸೊಸೈಟಿಯಲ್ಲಿ ಕೊಟ್ಯಂತರ ರೂಪಾಯಿ ಅವ್ಯವಹಾರ ಆಗಿದ್ದು, ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ಸಂಘದ ಅಮೂಲ್ಯ ಆಸ್ತಿ ಮಾರಾಟ ಮಾಡಿರುವ ಸಮಿತಿಯನ್ನು ಸೂಪರ್‌ಸೀಡ್ ಮಾಡುವಂತೆ ಆರೋಪಿಸಿ ಕುಂದಗೋಳ ಶಾಸಕ ಚಿಕ್ಕನಗೌಡ್ರ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮುಖಂಡರು ಒತ್ತಾಯಿಸಿದರು.ಇಂದಿರಾ ಗಾಜಿನ ಮನೆ ಮುಂಭಾಗದಲ್ಲಿದ್ದ ಸಂಘದ ಐದು ಎಕರೆ ಜಮೀನು ಮಾರಾಟ ಮಾಡಲಾಗಿದೆ. ಜೆ.ಸಿ ನಗರದ ಮಹಿಳಾ ಕಾಲೇಜು ಬಳಿ ಇದ್ದ 64 ಗುಂಟೆ ಜಾಗವನ್ನು ಮಾರಾಟ ಮಾಡಿದ್ದಾರೆ.ಇದೀಗ ಆರ್.ಆರ್ ಬಸ್ ಸಂಸ್ಥೆಗೆ ಬಾಡಿಗೆ ನೀಡಲಾಗಿದ್ದ ಜಾಗದಲ್ಲಿ ಖಾಸಗಿ ವ್ಯಕ್ತಿಗಳ ಸಹಭಾಗಿತ್ವ ದಲ್ಲಿ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.1918ರಿಂದ ಹತ್ತಿ ಬೆಳೆಗಾರರ ಹಿತರಕ್ಷಣೆ ಮಾಡಿಕೊಂಡು ಬಂದಿದ್ದ ಸಂಸ್ಥೆಯನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದಾರೆ. ಕೂಡಲೇ ಸಂಘವನ್ನು ಸೂಪರ್‌ಸೀಡ್ ಮಾಡಿ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.ಸ್ಥಳೀಯ ಶಾಸಕರನ್ನು, ಜನಪ್ರತಿನಿಧಿ ಗಳನ್ನು, ರೈತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಾವೇ ಸಭೆಯಲ್ಲಿ ಠರಾವು ಪಾಸು ಮಾಡಿ ಕೊಂಡು ಸಂಘದ ಬೆಲೆಬಾಳುವ ಆಸ್ತಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದವರು ಆರೋಪಿಸಿದರು.ಸಮಿತಿಯ ಸದಸ್ಯರು ಸಾಮೂಹಿಕ ವಾಗಿ ರಾಜೀನಾಮೆ ನೀಡಬೇಕು. ಟೆಂಡರ್ ಕರೆದಿರುವುದನ್ನು ಹಿಂದಕ್ಕೆ ಪಡೆಯಬೇಕು ಇದಕ್ಕೆ ಸ್ಪಂದಿಸದಿದ್ದಲ್ಲಿ ಇದೇ 9ರಂದು 10 ಗಂಟೆಗೆ ಹುಬ್ಬಳ್ಳಿ ತಾಲ್ಲೂಕು ಕಚೇರಿ ಎದುರು ಚಿಕ್ಕನಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಸಭೆ ತೀರ್ಮಾನ ಕೈಗೊಂಡಿತು. ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಶಂಕರ ಗೌಡ ಪಾಟೀಲ, ಎಸ್.ವಿ.ಮರಿಗೌಡ್ರ, ಮಾಜಿ ಸಚಿವ ಪಿ.ಸಿ.ಸಿದ್ದನಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)