ಶುಕ್ರವಾರ, ಜುಲೈ 30, 2021
27 °C

ಕಾಟಾಚಾರದ ಚಿಣ್ಣರ ಅಂಗಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಟಾಚಾರದ ಚಿಣ್ಣರ ಅಂಗಳ

ಯಲಬುರ್ಗಾ:  ಪಾಲಕರ ಅಸಹಕಾರ, ಶಿಕ್ಷಕರ ನಿರಾಸಕ್ತಿ ಹಾಗೂ ಕೆಲವರ ಇಚ್ಚಾಶಕ್ತಿಯ ಕೊರತೆಯಿಂದಾಗಿ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಸಂಘಟಿಸಿರುವ ಬಹುತೇಕ ಚಿಣ್ಣರ ಅಂಗಳಗಳು ಕಾಟಾಚಾರಕ್ಕೆ ನಡೆಯುತ್ತಿದ್ದು, ಕೇವಲ ಬೆರಳೆಣಿಕೆ ಕೇಂದ್ರಗಳು ಮಾತ್ರ ನಿರೀಕ್ಷಿತ ರೀತಿಯಲ್ಲಿ ನಡೆಯುತ್ತಿರುವುದು ಕಂಡು ಬಂದಿದೆ.



ಏಪ್ರಿಲ್ 15ರಿಂದ ಜುಲೈ 15ರವರೆಗೆ ಒಟ್ಟು ಮೂರು ತಿಂಗಳಕಾಲ ನಡೆಯುವ ಈ ಕಾರ್ಯಕ್ರಮದ ಮೂಲಕ ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದರ ಜೊತೆಗೆ ಅವರಲ್ಲಿ ಕಲಿಕಾ ಸಾಮರ್ಥ್ಯ ವೃದ್ಧಿಸುವುದಾಗಿದೆ. ಅದಕ್ಕಾಗಿ ವಸತಿಸಹಿತ ಹಾಗೂ ವಸತಿರಹಿತವಾಗಿ ಕೇಂದ್ರಗಳನ್ನಾಗಿ ವರ್ಗೀಕರಿಸಿ ಸಂಘಟಿಸಲಾಗಿದೆ. ಆದರೆ ಗುರುತಿಸಲ್ಪಟ್ಟ ಮಕ್ಕಳು ಕೇಂದ್ರಕ್ಕೆ ಹಾಜರಾಗದಿರುವುದು ಯೋಜನೆ ವಿಫಲತೆಗೆ ಕಾರಣ ಎಂದು ಹೇಳಲಾಗುತ್ತಿದೆ.



ಚಿಣ್ಣರ ಅಂಗಳ ಕೇಂದ್ರಗಳಿಗೆ ಹಾಜರಾಗುವ ಮಕ್ಕಳಿಗೆ ಊಟ, ಉಪಹಾರ, ಕಲಿಕಾ ಸಾಮಗ್ರಿ ಒದಗಿಸುವುದರ ಜೊತೆಗೆ ಆಟ, ಮನರಂಜನೆ ಇತ್ಯಾದಿ ಕಾರ್ಯಚಟುವಟಿಕೆ ಮೂಲಕ ಮಕ್ಕಳು ಶಾಲೆ ಬಿಟ್ಟು ಹೊರಹೋಗದಂತೆ ನೋಡಿಕೊಳ್ಳುವ ಮಹತ್ವದ ಕಾರ್ಯ ನಡೆಯುತ್ತದೆ. ಆದರೆ ಯೋಜನೆಯ ಕೇಂದ್ರಬಿಂದು ಮಕ್ಕಳೆ ಕೇಂದ್ರಗಳಿಗೆ  ಹಾಜರಾಗದಿರುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.



ಮಕ್ಕಳು ಹಾಜರಾಗದಿರಲು ಮಕ್ಕಳ ನಿರಾಸಕ್ತಿಯ ಹಿಂದೆ ಅವರ ಪಾಲಕರ ಬೇಜವಾಬ್ದಾರಿತನ, ಅಜ್ಞಾನ, ಆರ್ಥಿಕ ಹಿನ್ನಡೆ, ಅಧಿಕ ಆಸ್ತಿ ಹಾಗೂ ಜಾನುವಾರುಗಳ ಸಂಪಾದನೆ, ಶಿಕ್ಷಣ ಇಲಾಖೆಯ ಶಿಕ್ಷಕರ ಹಾಗೂ ಸಿಬ್ಬಂದಿಯ ಉದಾಸೀನ ಮತ್ತು ಉತ್ತಮ ಪರಿಸರ ಇಲ್ಲದಿರುವುದು- ಹೀಗೆ ಹಲವು ಅಂಶಗಳು ಅಡಗಿವೆ.



ಪಾಲಕರು ತಮ್ಮ ಮಕ್ಕಳನ್ನು ದನ, ಕುರಿ ಕಾಯಲು ಕಳಿಸುತ್ತಾರೆ ಹೊರೆತು ಚಿಣ್ಣರ ಅಂಗಳಕ್ಕೆ ಕಳುಹಿಸುತ್ತಿಲ್ಲ. ಮೇಲಾಗಿ ಏನೇ ಮಾಡಿದ್ರೂ ಶಾಲೆಗೆ ಕಳಿಸುವುದಿಲ್ಲ ಎಂದು ಪಾಲಕರು ಲಿಖಿತ ರೂಪದಲ್ಲಿ ಬರೆದು ಕೊಡುತ್ತಿದ್ದಾರೆ. ಮತ್ತೆ ಕೆಲವರು ಊರಲ್ಲಿ ಇಲ್ಲ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ.

ಮತ್ತೆ ಕೆಲವರು, ಶಾಲೆಗೆ ಹೋಗಿ ದೊಡ್ಡ ನೌಕರದಾರ ಆಗೋದು ಅಷ್ಟ್ರಗೈತಿ ಹೊಲಮನೆ ಕೆಲಸ ಕಲ್ಕೊಂಡು ಮನೆಯಲ್ಲಿಯೇ ಇರ್ತಾರೆ ಬಿಡ್ರಿ ಎಂದು ಹೇಳಿ ಮಕ್ಕಳನ್ನು ಶಾಲೆಗೆ ಕಳುಸುತ್ತಿಲ್ಲ.



 ಮಕ್ಕಳನ್ನು ಶಾಲೆಗೆ ಕಳಿಸಿದರೆ ದನ ಕಾಯೋರ್ಯಾರು. ಸಾಕಷ್ಟು ಜಮೀನು ಇದ್ಕೊಂಡು ಶಾಲೆಗೆ ಕಳಿಸೋಕೆ ಆಗೋಲ್ಲ. ಹೀಗೆ ಮನಸ್ಸಿಗೆ ಹೊಳೆದಂತೆ ಮತನಾಡಿ ತಮ್ಮ ಮಕ್ಕಳ ಭವಿಷ್ಯವನ್ನು ಪಾಲಕರೇ ಹಾಳು ಮಾಡುತ್ತಿದ್ದಾರೆ. ಕೆಲವೊಂದು ಕಡೆ ಶಿಕ್ಷಕರ ನಿರ್ಲಕ್ಷ್ಯತನವೂ ಕೂಡಾ ವಿಫಲತೆಗೆ ಕಾರಣಗಳಿವೆ.

ಅಂತವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಹೇಳಿದ್ದಾರೆ.



ತಾಳಕೇರಿ ಶಾಲೆಯಲ್ಲಿಯ ವಸತಿರಹಿತ ಚಿಣ್ಣರ ಅಂಗಳದಲ್ಲಿ ಮುಖ್ಯೋಪಾಧ್ಯಾಯರೇ ಗೈರು ಹಾಜರಾಗುತ್ತಿದ್ದಾರೆ. ಯಡಿಯಾಪುರ ಗ್ರಾಮದ ಶಾಲೆಯಲ್ಲಿ ಯೋಜನೆಯ ಅನುಷ್ಠಾನಕ್ಕೆ ಯಾವೊಬ್ಬ ಶಿಕ್ಷಕನೂ ಸಿದ್ಧರಿಲ್ಲದಿರುವುದು ಕಂಡು ಬಂದಿದೆ.



ಆದರೆ ಸಂಗನಾಳ ಶಾಲೆಯಲ್ಲಿ ನಿಗದಿತ ಮಕ್ಕಳ ಸಂಖ್ಯೆ ಇಲ್ಲದ ಕಾರಣ ಕೇಂದ್ರವನ್ನು ರದ್ದುಪಡಿಸಿ ಬೇರೆ ಕೇಂದ್ರಕ್ಕೆ ವಿಲೀನಗೊಳಿಸಲಾಗಿದೆ. ಹಾಗೆಯೇ ವಸತಿ ಸಹಿತವಾಗಿ ನಡೆಯುತ್ತಿರುವ ಕೆಲ ಕೇಂದ್ರಗಳ ಪೈಕಿ ವಣಗೇರಿ, ಕುಕನೂರು, ಮಂಡಲಗೇರಿ, ಮುಧೋಳ ಸೇರಿದಂತೆ ಇನ್ನಿತರ ಕೇಂದ್ರಗಳಲ್ಲಿ ಮಕ್ಕಳ ಕೊರತೆ ಎದ್ದು ಕಾಣುತ್ತಿದೆ. ಇವುಗಳು ಬರೀ ನೆಪಕ್ಕೆ ಮಾತ್ರ ಚಿಣ್ಣರ ಅಂಗಳ ಎಂದು ಕರೆಯಲಾಗುತ್ತಿದೆ.



ಮಕ್ಕಳಿಂದಾಗಲಿ, ಪಾಲಕರಿಂದಾಗಲಿ, ಸಾರ್ವಜನಿಕರಿಂದಾಗಲಿ ಹಾಗೂ ಶಿಕ್ಷಣ ಇಲಾಖೆಯಿಂದಾಗಿ ಹೇಳಿಕೊಳ್ಳುವಂತಹ ಕಾರ್ಯಚಟುವಟಿಕೆ ನಡೆಯದೇ ಇರುವ ಕಾರಣ ತಾಲ್ಲೂಕಿನಲ್ಲಿ ಚಿಣ್ಣರ ಅಂಗಳ ಕಾರ್ಯಕ್ರಮ ಬಹುತೇಕ ವಿಫಲವಾದಂತಿದೆ.



 ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಶಿಕ್ಷಕರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಆದರೂ ಜಿಲ್ಲಾಮಟ್ಟದ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕಾಗಿದೆ.



 ಯೋಜನೆಯ ಹೆಸರಿನಲ್ಲಿ ಸಾಕಷ್ಟು ಅನುದಾನ ಹರಿದು ಬರುತ್ತಿದ್ದು, ಅದು ದುರ್ಬಳಕೆಯಾಗುತ್ತಿದೆ ಹೊರೆತು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂಬುದು ಸ್ಥಳೀಯ ಶಿಕ್ಷಣ ಪ್ರೇಮಿಗಳ ಅನಿಸಿಕೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.