ಕಾಡಂಚಿನ ಗ್ರಾಮದ ಕತ್ತಲೆ ಬದುಕು

7

ಕಾಡಂಚಿನ ಗ್ರಾಮದ ಕತ್ತಲೆ ಬದುಕು

Published:
Updated:

ಚಾಮರಾಜನಗರ: ‘ನಿಮ್ಮ ಹೆಂಡ್ತಿ-  ಮಕ್ಕಳು ಕತ್ತಲಲ್ಲಿದ್ರೆ ಗೊತ್ತಾಗುತಿತ್ತು. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ವಾದ್ರು ಹನೂರು ವಲಯದ ಕಾಡಂಚಿನ 15 ಗ್ರಾಮಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ’ -ಹೀಗೆಂದು ಸೆಸ್ಕ್‌ನ ಕಾರ್ಯ ನಿರ್ವಾಹಕ ಎಂಜಿನಿಯರ್‌ಗೆ ತರಾಟೆ ತೆಗೆದುಕೊಂಡಿದ್ದು ಶಾಸಕ ನರೇಂದ್ರ. ಇದಕ್ಕೆ ಶಾಸಕ ಪುಟ್ಟರಂಗಶೆಟ್ಟಿ ಕೂಡ ಧ್ವನಿಗೂಡಿಸಿದರು. ಚಾ.ನಗರ ತಾಲ್ಲೂಕಿನ 7 ಪೋಡುಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ’ ಎಂದು ಸಭೆಯ ಗಮನ ಸೆಳೆದರು. ಚಾಮರಾಜನಗರ ಮತ್ತು ಕೊಳ್ಳೇಗಾಲ ವಿಭಾಗದ ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯ ಸಭೆಯಲ್ಲಿ ಬಯಲಾಯಿತು.ಈ ವೇಳೆ ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಮಾತನಾಡಿ, ‘ಜಿಲ್ಲೆಯ ಯಾವ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕವಿಲ್ಲವೆಂಬ ಬಗ್ಗೆ ಪಟ್ಟಿ ಸಿದ್ಧಪಡಿಸಬೇಕು. ಈ ಬಗ್ಗೆ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಹಿಂದೆಯೇ ಸೂಚಿಸಿದ್ದೇನೆ. ಇಂದಿಗೂ ಕ್ರಮಕೈಗೊಂಡಿಲ್ಲ. ಜಿಲ್ಲೆಯಲ್ಲಿ ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ನಿರ್ವಹಿಸುವುದನ್ನು ಮರೆತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಶಾಸಕ ನರೇಂದ್ರ ಮಾತನಾಡಿ, ವಿದ್ಯುತ್ ಪರಿವರ್ತಕ ಕೆಟ್ಟರೆ ಎರಡು-ಮೂರು ವಾರ ಕಳೆದರೂ ದುರಸ್ತಿಯಾಗುವುದಿಲ್ಲ. ಇದರಿಂದ ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ. ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೆಸ್ಕ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳಿಗೆ ಎರಡು ವರ್ಷ ಕಳೆದರೂ ಸಂಪರ್ಕ ಕಲ್ಪಿಸುತ್ತಿಲ್ಲ. ಆವೇಳೆಗೆ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿರುತ್ತದೆ ಎಂದು ದೂರಿದರು.ಸರ್ಕಾರದ ಸೂಚನೆ ಮೇರೆಗೆ 2009ನೇ ಸಾಲಿನಡಿ ಬಾಕಿ ಇರುವ ಚಾ.ನಗರ ವ್ಯಾಪ್ತಿಯ 141 ಮತ್ತು ಕೊಳ್ಳೇಗಾಲ ವಿಭಾಗದ ವ್ಯಾಪ್ತಿಯ 124 ಕೊಳವೆ ಬಾವಿಗಳಿಗೆ ಮಾರ್ಚ್‌ನೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಸಂಬಂಧಪಟ್ಟ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳು ಸಭೆಗೆ ತಿಳಿಸಿದರು. ಸಚಿವ ರೇಣುಕಾಚಾರ್ಯ ಮಾತನಾಡಿ, ‘ರಾಜೀವ್‌ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯಡಿ ಒಂದು ವಾರದೊಳಗೆ ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟವರನ್ನು ಹೊಣೆ ಮಾಡಲಾಗುವುದು’ ಎಂದು ಎಚ್ಚರಿಸಿದರು.ಸಾವಿರ ಎಕರೆ ಅಭಿವೃದ್ಧಿ: ಜಿಲ್ಲೆಯ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಪ್ರಸಕ್ತ ವರ್ಷ ಹಿಪ್ಪುನೇರಳೆ ಬೆಳೆ ವಿಸ್ತರಣೆಗೆ ಕ್ರಮಕೈಗೊಳ್ಳಲಾಗಿದೆ. 300 ಹೆಕ್ಟೇರ್ ಪ್ರದೇಶದಲ್ಲಿ ಹೊಸ ತಳಿ ನಾಟಿ ಮಾಡುವ ಗುರಿಯಿದ್ದು, ಇಲ್ಲಿಯವರೆಗೆ 205 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಪೂರ್ಣಗೊಂಡಿದೆ ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಪೃಥ್ವಿರಾಜ್ ಸಭೆಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry