ಶುಕ್ರವಾರ, ಮೇ 27, 2022
30 °C

ಕಾಡನೆ ದಾಳಿ ಭೀತಿಯ ಸುಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶನಿವಾರಸಂತೆ: ಕೊಡ್ಲಿಪೇಟೆ ಹೋಬಳಿಯಲ್ಲಿ ಮತ್ತೆ ಕಾಡಾನೆ ದಾಂಧಲೆ ಮರುಕಳಿಸಿದೆ. ಗ್ರಾಮಸ್ಥರು ಮತ್ತೆ ಕಾಡಾನೆಗಳ ದಾಳಿಯ ಭೀತಿಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ವರ್ಷದ ಹಿಂದೆಯಷ್ಟೇ ದನಕರು-ಕುರಿ ಮೇಯಿಸಲೆಂದು ತೆರಳಿದ್ದ ಬೆಳೆಗಾರರು ಹಾಗೂ ಅವರನ್ನು ಹುಡುಕಲು ತೆರಳಿದ್ದ ಕಾರ್ಮಿಕರೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಘಟನೆ ಹಸಿಯಾಗಿರುವಾಗಲೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದು ಆತಂಕಕ್ಕೆ ಕಾರಣವಾಗಿದೆ.ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತಿ ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಕೊಡಿಸುವ ಪ್ರಯತ್ನದಲ್ಲಿ ಸಫಲರಾಗಿದ್ದರು. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದರು.ಇದೀಗ ಕೊಡ್ಲಿಪೇಟೆ ಹೋಬಳಿಯ ನೀರುಗುಂದ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಶಾಲೆಗೆ ಸೈಕಲ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿ ಸುಪ್ರೀತಾ(16) ಕಾಡಾನೆ ದಾಳಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಿರಿಕೊಡ್ಲಿ ಮಠದ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಪ್ರೀತಾ ಹಾಗೂ ಆಕೆಯ ಸಹಪಾಠಿ ಸ್ನೇಹಿತೆ ಸುಸ್ಮಿತಾ ಬುಧವಾರ ಬೆಳಿಗ್ಗೆ 7-30 ಗಂಟೆಗೆ ಶಾಲೆಗೆಂದು ಸೈಕಲ್‌ನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.ಮನೆಯಲ್ಲಿ ಮಾಡಿದ್ದ ತಿಂಡಿಯನ್ನು ಸ್ನೇಹಿತೆಗಾಗಿ ಟಿಫನ್‌ಬಾಕ್ಸ್‌ನಲ್ಲಿ ತಂದಿರುವುದಾಗಿ ಮಾತನಾಡುತ್ತಾ ರಸ್ತೆಯಲ್ಲಿ 1 ಕಿ.ಮೀ.ದೂರ ಕ್ರಮಿಸುತ್ತಿದ್ದಂತೆ ಮುಂಭಾಗದಿಂದ ಇದ್ದಕಿದ್ದಂತೆ ಕಾಡಾನೆ ಎದುರಾಗಿದೆ. ಸುಪ್ರೀತಾ ಭಯದಿಂದ ಹಿಂದಕ್ಕೆ ಓಡಲಾರಂಭಿಸಿದಳು. ಸ್ನೇಹಿತೆ ಸುಸ್ಮಿತಾ ರಸ್ತೆ ಪಕ್ಕದಲ್ಲಿದ್ದ ಮಣ್ಣಿನ ಚರಂಡಿಯಲ್ಲಿ ಮಲಗಿ ಪಾರಾದಳು. ಕಾಡಾನೆಯು ಓಡುತ್ತಿದ್ದ ಸುಪ್ರೀತಾಳ ಬೆನ್ನಟ್ಟಿತು. ಸೊಂಡಿಲಿನಲ್ಲಿ ಬಳಸಿ ಅವಳನ್ನು ಕಾಡಿನ ಜಾಗಕ್ಕೆ ಎಸೆದಿದೆ. ಮೈಕೈ ಹಾಗೂ ಬೆನ್ನಿನ ಭಾಗಕ್ಕೆ ಗಾಯಗೊಂಡ ಸುಪ್ರೀತಾಳನ್ನು ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಪ್ರಾಣಪಕ್ಷಿ ಹಾರಿಹೋಗಿತ್ತು.ಸುಪ್ರೀತಾ ನೀರುಗುಂದ ಗ್ರಾಮದ ಕಾಫಿಬೆಳೆಗಾರ ಎನ್.ಎನ್. ಇಂದೂಕುಮಾರ್-ತೀರ್ಥ ದಂಪತಿಯ ಓರ್ವಳೆ ಪುತ್ರಿ. ಓರ್ವ ಸಹೋದರನಿದ್ದಾನೆ. ಮಗಳನ್ನು ದಾರುಣವಾಗಿ ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಗ್ರಾಮಸ್ಥರು ತೀವ್ರ ಆಕ್ರೋಶ ಹಾಗೂ ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರ ಪರಿಹಾರ ಕೊಡುವುದೇ ವಿನಃ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವುದಿಲ್ಲ ಎನ್ನುತ್ತಾರೆ.ಘಟನೆಯ ಸ್ಥಳಕ್ಕೆ ಆಗಮಿಸಿದ ಎ.ಸಿ.ಎಫ್.ಪ್ರಸನ್ನಕುಮಾರ್ ಮಾತನಾಡಿ, ಆ ವಿಭಾಗದಲ್ಲಿ ಕಳ್ಳಬಟ್ಟಿ ದಂಧೆ ಇರುವುದರಿಂದ, ಕಾಡಾನೆಗಳು ಪುಳಿಗಂಜಿ ಕುಡಿಯಲು ಬಂದು ದಾಂಧಲೆ ಎಬ್ಬಿಸುತ್ತಿವೆ. ಸಮಸ್ಯೆ ಬಗೆಹರಿಸಲು ಸರ್ಕಾರದೊಂದಿಗೆ ಪ್ರಯತ್ನಿಸುವುದಾಗಿ ತೀಳಿಸಿ,ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಸರ್ಕಾರದಿಂದ 2 ಲಕ್ಷ ಪರಿಹಾರ ಕೊಡಲಾಗುವುದೆಂದು ತಿಳಿಸಿದರು. ತಹಶೀಲ್ದಾರ್ ದೇವರಾಜ್, ಅರಣ್ಯ ವಲಯಾಧಿಕಾರಿ ಜಯಪ್ರಕಾಶ್,ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಿಕಾ,ತಾಲ್ಲೂಕು ಪಂಚಾಯಿತಿ ಸದಸ್ಯರುಗಳಾದ ಗೀತಾ,ಫಾಲಾಕ್ಷ,ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಲಾವಣ್ಯ,ಹೊನ್ನಪ್ಪ,ಸದಸ್ಯರಾದ ಬಾಬುರಾಜೇಂದ್ರಪ್ರಸಾದ್,ರಾಜಪ್ಪ ಹಾಗೂ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಯತೀಶ್ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.