ಕಾಡಾನೆಗಳ ದಾಳಿ: ಕೃಷಿಕರು ಕಂಗಾಲು

7

ಕಾಡಾನೆಗಳ ದಾಳಿ: ಕೃಷಿಕರು ಕಂಗಾಲು

Published:
Updated:

ಸೋಮವಾರಪೇಟೆ: ಶಾಂತಳ್ಳಿ ಹೋಬಳಿಯ ಆಸುಪಾಸಿನಲ್ಲಿ ಕಾಡಾನೆಗಳ ಹಾವಳಿ ಅತಿಯಾಗಿದ್ದು ಕೃಷಿಕರು ಕಂಗಾಲಾಗಿದ್ದಾರೆ. ಬೆಳೆದು ನಿಂತ ಫಸಲು ಮಣ್ಣು ಪಾಲಾಗುತ್ತಿವೆ. ಅಲ್ಲದೇ  ಕೊಡಗಿನ ಈ ಗಡಿ ಭಾಗದ ಜನರು ಜೀವಭಯದಿಂದ ತತ್ತರಿಸುವಂತಾಗಿದೆ.ಕೊಡಗು ಹಾಗೂ ಹಾಸನ ಜಿಲ್ಲೆಯ ಗಡಿ ಪ್ರದೇಶದ ಗ್ರಾಮಗಳಾದ  ಕುಂದಳ್ಳಿ, ಬಾಚಳ್ಳಿ, ನಗರಳ್ಳಿ, ಕಲ್ಲಳ್ಳಿ, ಮಾಗೇರಿ, ಹಿಜ್ಜನಳ್ಳಿ ಮುಂತಾದ ಊರುಗಳಲ್ಲಿ  8 ಕಾಡಾನೆಗಳು ತಮ್ಮ ಮರಿಗಳೊಂದಿಗೆ ಕಳೆದ 20 ದಿನಗಳಿಂದ ಬೀಡುಬಿಟ್ಟು ಸತತವಾಗಿ ದಾಂಧಲೆ ನಡೆಸುತ್ತಿವೆ.ಕಾಡಾನೆಗಳ ತುಳಿತದಿಂದಾಗಿ ತೋಟದಲ್ಲಿರುವ ಕಾಫಿ ಗಿಡಗಳು ನೆಲಕಚ್ಚಿವೆ. ಬೆಳೆದಿರುವ ಕಾಫಿ ಹಣ್ಣು ಭೂಮಿ ಪಾಲಾಗುತ್ತಿದೆ. ಈ ಪ್ರದೇಶದಲ್ಲಿ ಅಪಾರ ಪ್ರಮಾಣದ ಬಾಳೆ, ಅಡಿಕೆ ಮುಂತಾದ ಸಸಿಗಳೂ ಆನೆಗಳಿಗೆ ಆಹಾರವಾಗುತ್ತಿದ್ದು ರೈತರು ಅಸಹಾಯಕರಾಗಿದ್ದಾರೆ.ಕಾಡಾನೆಗಳ ಹಾವಳಿಯಿಂದಾಗಿ ಕೃಷಿ ಚಟುವಟಿಕೆ ನಡೆಸಲು ತಮ್ಮ ತೋಟ ಗದ್ದೆಗಳಿಗೆ ತೆರಳಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಇವು ಜನರು ಓಡಾಡುವ ರಸ್ತೆಯಲ್ಲೇ ಹಾದು ಹೋಗುತ್ತಿರುವುದರಿಂದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಜೀವಭಯದಿಂದ ಓಡಾಡಬೇಕಾಗಿದೆ.ಜಿಲ್ಲೆಯ ಗಡಿ ಭಾಗವಾದ ಕೊಟ್ಲಗದ್ದೆ ಎಂಬಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಅರಣ್ಯ ಇಲಾಖೆಯ ಬೆರಳೆಣಿಕೆಯ ಸಿಬ್ಬಂದಿಗಳೊಂದಿಗೆ ಗ್ರಾಮಸ್ಥರು ಓಡಿಸಲು ಹೋದರೆ, ಆನೆಗಳೇ ತಿರುಗಿ ಇವರನ್ನು ಅಟ್ಟಿಸಿಕೊಂಡು ಬಂದಿವೆ.ಅತಿಯಾದ ಮಳೆ, ಕಡಿಮೆ ಫಸಲು ಹಾಗೂ ಕಾರ್ಮಿಕರ ಕೊರತೆ ಮುಂತಾದ ತೊಂದರೆಗಳಿಂದ ಬಳಲಿ ಬೆಂಡಾಗಿರುವ ರೈತರಿಗೆ ಆನೆ ದಾಳಿಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಿದ್ದಾರೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry