ಕಾಡಾನೆಗಳ ಹಾವಳಿ: ಭಯದಲ್ಲಿ ಜನರು

7

ಕಾಡಾನೆಗಳ ಹಾವಳಿ: ಭಯದಲ್ಲಿ ಜನರು

Published:
Updated:
ಕಾಡಾನೆಗಳ ಹಾವಳಿ: ಭಯದಲ್ಲಿ ಜನರು

ಖಾನಾಪುರ: ಮಧ್ಯಾಹ್ನದ ಹೊತ್ತಿನಲ್ಲಿ ರೈತರು ತಮ್ಮ ಹೊಲದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಸಮಯದಲ್ಲಿ ಕಾಡಾನೆಗಳ ಗುಂಪೊಂದು ರೈತರ ಹೊಲಕ್ಕೆ ನುಗ್ಗಿ ದಾಳಿ ನಡೆಸಿದ ಘಟನೆ ತಾಲ್ಲೂಕಿನ ಓಲಮನಿ ಗ್ರಾಮದ ಬಳಿ  ಗುರುವಾರ ಜರುಗಿದೆ.ಆನೆಗಳನ್ನು ಕಂಡ ಜನರು ಭಯದಿಂದ ಓಡಿ ಮನೆ ಸೇರಿಕೊಂಡಿದ್ದಾರೆ. ಮೂರರಿಂದ ನಾಲ್ಕು ಗಂಟೆ ಹೊತ್ತಿಗೆ ಈ ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಂಡು ನಂತರ ಮರೆಯಾಗಿವೆ.ಪಶ್ಚಿಮಘಟ್ಟದ ದಟ್ಟ ಅರಣ್ಯದಲ್ಲಿ ವಾಸವಾಗಿರುವ ಈ ಕಾಡಾನೆಗಳು ಮಳೆಗಾಲದಲ್ಲಿ ಕಾಡುಬಿಟ್ಟು ನಾಡಿಗೆ ಬರುವುದು ಅಪರೂಪ. ಆದರೆ ಬೇಸಿಗೆ ಬಂತೆಂದರೆ ಆಹಾರವನ್ನು ಹುಡುಕಿಕೊಂಡು ತಾಲ್ಲೂಕಿನ ಕಾಡಿನ ಪಕ್ಕದ ಹಳ್ಳಿಗಳಾದ ಜಾಂಬೋಟಿ, ಓಲಮನಿ, ಕುಸಮಳಿ, ಅಮಟೆ, ತೋರಾಳಿ, ಗೋಲ್ಯಾಳಿ, ದೇವಾಚಿಹಟ್ಟಿ, ಬೈಲೂರು ವ್ಯಾಪ್ತಿಯ ಜಮೀನುಗಳಿಗೆ ನುಗ್ಗಿ ರೈತರು ಬೆಳೆದ ಬೆಳೆಗಳನ್ನು ಹಾಳುಮಾಡತೊಡಗಿವೆ.ಮೂರರಿಂದ ನಾಲ್ಕು ಆನೆಗಳಿರುವ ಕಾಡಾನೆಗಳ ತಂಡ ಮಾರುದ್ದದ ದಂತವನ್ನು ಹೊಂದಿರುವ ಸಲಗದ ಮುಂದಾಳತ್ವದಲ್ಲಿ ರೈತರ ಜಮೀನಿಗೆ ನುಗ್ಗಿವೆ. ಅವು ರೈತರ ಜಮೀನಿನಲ್ಲಿ ತಿನ್ನುವುದಕ್ಕಿಂತ ಬೆಳೆಯನ್ನು ತುಳಿದು ಹಾಳುಮಾಡಿದ್ದೆ ಹೆಚ್ಚು ಎನ್ನಲಾಗಿದ್ದು, ಈ ಭಾಗದ ರೈತ ಕಷ್ಟಪಟ್ಟು ಬೆಳೆದ ಭತ್ತ, ಕಬ್ಬು, ಮೆಣಸಿನಕಾಯಿ, ಬಾಳೆ ಮುಂತಾದ ಬೆಳೆಗಳು ಆನೆಗಳ ಪಾಲಾಗಿವೆ.ಪ್ರತಿವರ್ಷ ಈ ಭಾಗದಲ್ಲಿ ಆನೆಗಳು ಬರುವುದು ಸಹಜವೇ ಆದರೂ ಅವು ರಾತ್ರಿಹೊತ್ತು ಮಾತ್ರ ಕಾಣಿಸಿಕೊಳ್ಳುತ್ತಿದ್ದವು. ಈ ವರ್ಷ ಹಾಡು ಹಗಲಿನಲ್ಲಿ ಕಾಣಿಸಿಕೊಂಡಿವೆ. ಆನೆಗಳ ಹಾವಳಿಯಿಂದ ತತ್ತರಿಸಿದ ಈ ಭಾಗದ ಜನತೆಗೆ ಶಾಶ್ವತ ಪರಿಹಾರವನ್ನು ಅರಣ್ಯ ಇಲಾಖೆ ಮಾಡಬೇಕಿದೆ ಎಂದು ಅಮಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಶ ದೇವಳಿ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry