ಸೋಮವಾರ, ಮೇ 10, 2021
25 °C

ಕಾಡಾನೆ ಉಪಟಳ; ಹಲಸು, ಬಾಳೆಗೆ ಸಂಚಕಾರ!

ಪ್ರಜಾವಾಣಿ ವಾರ್ತೆ/ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧ ಸ್ಥಳಗಳ ಕಾಫಿ ತೋಟಗಳಲ್ಲಿ ಕಾಡಾನೆ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಹಲವು ಕಾಫಿ ಬೆಳೆಗಾರರು ತಮ್ಮ ತೋಟದಲ್ಲಿ ಬೆಳೆದಿರುವ ಬಾಳೆ, ಹಲಸನ್ನು ನಾಶಪಡಿಸಲು ಮುಂದಾಗಿದ್ದಾರೆ.ಸೋಮವಾರಪೇಟೆ ತಾಲ್ಲೂಕಿನ ಐಗೂರು, ಕಾಂಡನಕೊಲ್ಲಿ, ಕೊಡ್ಲಿಪೇಟೆ, ವಿರಾಜಪೇಟೆ ತಾಲ್ಲೂಕಿನ ಶ್ರೀಮಂಗಲ, ಅಮ್ಮತ್ತಿ, ಪೊನ್ನಂಪೇಟೆ ಸುತ್ತಮುತ್ತ ಹಾಗೂ ಇತರ ಪ್ರದೇಶಗಳಲ್ಲಿ ಕಾಫಿ ತೋಟಗಳ ಮೇಲೆ ಕಾಡಾನೆಗಳು ದಾಳಿ ಮಾಡುತ್ತಿವೆ. ಸಾಮಾನ್ಯವಾಗಿ ಕಾಫಿ ತೋಟಗಳಲ್ಲಿ ಹಲಸು ಹಾಗೂ ಬಾಳೆ ಯಥೇಚ್ಛವಾಗಿ ಬೆಳೆದಿರುತ್ತದೆ. ಈ ಹಣ್ಣಿನ ವಾಸನೆ ಹಿಡಿದು ಆನೆಗಳು ಇತ್ತ ನುಸುಳುತ್ತಿವೆ.ಈ ಭಾಗದ ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ತೇಗದ ಮರಗಳನ್ನು ಬೆಳೆಸಲಾಗಿದೆ. ಇದರಿಂದಾಗಿ ಆನೆಗಳಿಗೆ ಆಹಾರದ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದರ ಜತೆಗೆ ಕಾಫಿ ಗಿಡಗಳಿಗೆ ನೀರುಣಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ನೀರಿನ ಹೊಂಡಗಳು ಕಾಫಿ ತೋಟಗಳಿಗೆ ನುಗ್ಗುವಂತೆ ಆನೆಗಳಿಗೆ ಪ್ರೇರೇಪಿಸುತ್ತಿವೆ.ಗ್ರಾಮಸ್ಥರ ಮನವಿ ವ್ಯರ್ಥ

ಕಾಫಿ ತೋಟಗಳಿಗೆ ನುಗ್ಗಿ ಬರುವ ಕಾಡಾನೆಗಳನ್ನು ವಾಪಸು ಕಾಡಿಗೆ ಅಟ್ಟುವಂತೆ ಹಲವು ಬಾರಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹದಿನೈದು ದಿನಗಳ ಹಿಂದೆಯಷ್ಟೇ ಸೋಮವಾರ ಪೇಟೆಯ ಐಗೂರು ಬಳಿ ಕಾಡಾನೆಯೊಂದು ದ್ವಿಚಕ್ರ ವಾಹನ ಸವಾರನೊಬ್ಬನನ್ನು ತುಳಿದು ಕೊಂದು ಹಾಕಿದ್ದನ್ನು ಸ್ಮರಿಸಬಹುದು.ಒಂದೆಡೆ ಅರಣ್ಯ ಇಲಾಖೆಯಿಂದ ದೊರೆಯದ ನಿರೀಕ್ಷಿತ ಪ್ರತಿಕ್ರಿಯೆ ಮತ್ತೊಂದೆಡೆ ಸೋಲಾರ್ ತಂತಿ ಬೇಲಿ ವೈಫಲ್ಯ ಕಾರಣಗಳಿಂದ ಕಂಗೆಟ್ಟ ಬೆಳೆಗಾರರು ತಮ್ಮದೇ ಆದ ದಾರಿ ಕಂಡುಕೊಂಡಿದ್ದಾರೆ. ಬಾಳೆ, ಹಲಸು ಇದ್ದರೆ ತಾನೇ ಕಾಫಿ ತೋಟಗಳಿಗೆ ಆನೆಗಳು ಲಗ್ಗೆ ಹಾಕುವುದು, ಇವುಗಳನ್ನೇ ಇಲ್ಲವಾಗಿಸಿದರೆ ಹೇಗೆ ಎನ್ನುವ ಯೋಚನೆ ಹಲವರಲ್ಲಿ ಮೊಳಕೆಯೊಡೆದಿದೆ.ಮಡಿಕೇರಿಯಿಂದ ಸೋಮವಾರಪೇಟೆಗೆ ಹೋಗುವ ಐಗೂರು ಮಾರ್ಗ ಮಧ್ಯದ ಹಲವು ಸ್ಥಳಗಳಲ್ಲಿ ಹಲಸು ಹಣ್ಣನ್ನು ಮರದಿಂದ ಕತ್ತರಿಸಿ (ಹಣ್ಣಾಗಿ ಮರದಿಂದ ಉದುರಿ ಬಿದ್ದಿರುವ ಹಣ್ಣುಗಳು ಸೇರಿದಂತೆ) ತೋಟದ ಪಕ್ಕದ ರಸ್ತೆ ಮೇಲೆ ಹಾಕಲಾಗಿದೆ. ರಸ್ತೆಯ ಈ ಬದಿ ಅರಣ್ಯ ಪ್ರದೇಶವಿದ್ದು, ಹಲವು ಕಾಡಾನೆಗಳು ಈ ಮಾರ್ಗದ ಮೂಲಕವೇ ತೋಟಗಳಿಗೆ ದಾಳಿ ಮಾಡುತ್ತವೆ. ರಸ್ತೆ ಮೇಲೆ ಬಿದ್ದಿರುವ ಹಲಸು ಹಣ್ಣನ್ನು ತಿಂದುಕೊಂಡು ವಾಪಸ್ ಹೋಗಲಿ ಎನ್ನುವುದು ಬೆಳೆಗಾರರ ಆಶಯ.ಎಷ್ಟೋ ಸಂದರ್ಭಗಳಲ್ಲಿ ಹಲಸಿನ ಮರಗಳನ್ನು ಸಹ ಕತ್ತರಿಸಲು ಬೆಳೆಗಾರರು ಮುಂದಾಗಿರುವ ಉದಾಹರಣೆಗಳು ಇವೆ. ಮರದ ಹಕ್ಕು ಇಲ್ಲದ ಕಾರಣ ಹಾಗೂ ಅರಣ್ಯ ಇಲಾಖೆ ಅನುಮತಿ ನೀಡದ ಕಾರಣ, ಮರವನ್ನು ಕತ್ತರಿಸದೇ ಕೇವಲ ಹಲಸು ಹಣ್ಣುಗಳನ್ನು ಕತ್ತರಿಸಿ ಹಾಕಲಾಗುತ್ತಿದೆ.

ಇದರಂತೆ, ಹಲವು ಕಾಫಿ ತೋಟಗಳಲ್ಲಿ ಬೆಳೆದಿದ್ದ ಬಾಳೆಗಿಡಗಳನ್ನು ಸಹ ಕತ್ತರಿಸಿ ಹಾಕಲಾಗಿದೆ. ಕಾಡಾನೆ ಭೀತಿಯಿಂದಾಗಿ ಕೊಡಗಿನ ಹಲಸು ಹಾಗೂ ಬಾಳೆ ಸಂಚಕಾರ ಎದುರಿಸುವಂತಾಗಿದೆ.

ಹಲಸು- ಬಾಳೆ ಹಾಕುವುದು ಅನಿವಾರ್ಯ

`ಆಹಾರವನ್ನು ಹುಡುಕಿಕೊಂಡು ಹಲವು ಆನೆಗಳ ಹಿಂಡು ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಈ ಭಾಗದಲ್ಲಿ ಸಂಚರಿಸುತ್ತವೆ. ಆನೆಗಳ ಪ್ರವೇಶವನ್ನು ತಡೆಗಟ್ಟಲು ನಿರ್ಮಿಸಲಾದ ಸೋಲಾರ್ ತಂತಿ ಬೇಲಿ ಹಲವು ಕಡೆ ಕಿತ್ತುಹೋಗಿದ್ದು, ನಿರರ್ಥಕ ಎನಿಸಿದೆ. ಈಗ ಅನಿವಾರ್ಯವಾಗಿ ಬೆಳೆಗಾರರು ಹಲಸು, ಬಾಳೆಯನ್ನು ಕತ್ತರಿಸಿ ಹಾಕಲು ಮುಂದಾಗಿದ್ದಾರೆ'

-ಮುರುಗೇಶ್, ಕಾಜೂರು ನಿವಾಸಿ, ಕಾಫಿ ತೋಟದ ಕಾರ್ಮಿಕಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿ

`ಕಾಡಾನೆಗಳ ದಾಳಿಯಿಂದ ಕಾಫಿಯನ್ನು ರಕ್ಷಿಸಬೇಕಾದರೆ ತೋಟಗಳಲ್ಲಿರುವ ಹಲಸು, ಬಾಳೆಯನ್ನು ಕತ್ತರಿಸಲೇಬೇಕೆಂದು ಬೆಳೆಗಾರರು ಹತಾಶರಾಗಿ ನುಡಿಯುತ್ತಿದ್ದಾರೆ. ಇದನ್ನು ತಡೆಗಟ್ಟಬೇಕಾದರೆ, ಆನೆಗಳಿಗೆ ಬೇಕಾಗುವಂತಹ ಆಹಾರವನ್ನು ಅರಣ್ಯದಲ್ಲಿಯೇ ಬೆಳೆಸಲು ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು'

-ಬಸವರಾಜು, ಸಹಾಯಕ ತೋಟಗಾರಿಕಾ ಅಧಿಕಾರಿ, ಮಡಿಕೇರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.