ಶುಕ್ರವಾರ, ಮೇ 14, 2021
21 °C

ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ಇಲ್ಲಿಗೆ ಸಮೀಪದ ಕೋವರ್ ಕೊಲ್ಲಿಯ ಬಳಿ ಮುಖ್ಯ ರಸ್ತೆಯ ತಿರುವಿನ ಟಾಟಾ ಎಸ್ಟೇಟ್‌ನ ಸಮೀಪ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟಿರುವ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ. ಮುಕ್ಕೋಡ್ಲು ಗ್ರಾಮದ ತಂಬುಕುತ್ತಿರ ಅಣ್ಣಿ ಅಲಿಯಾಸ್ ತಮ್ಮಯ್ಯ (40) ಸಾವಿಗೀಡಾದವರು.ಗುರುವಾರ ಬೆಳಿಗ್ಗೆ 7ರ ವೇಳೆಗೆ ಮುಕ್ಕೋಡ್ಲುವಿನಿಂದ ಮಾದಾಪುರ ಮಾರ್ಗವಾಗಿ ಸೋಮವಾರಪೇಟೆಗೆ ಸ್ಕೂಟರ್‌ನಲ್ಲಿ ಸ್ನೇಹಿತ  ಪೊನ್ನಚೆಟ್ಟೀರ ಮಾದಪ್ಪ ಎಂಬವರೊಂದಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮಾದಪ್ಪ ಮತ್ತು ತಮ್ಮಯ್ಯ ಅವರು ದ್ವಿಚಕ್ರ ವಾಹನದಲ್ಲಿ ಗಣಗೂರು ಗ್ರಾಮದಲ್ಲಿರುವ ಕಾಫಿ ತೋಟಕ್ಕೆ ಕಳೆ ಕೊಚ್ಚುವ ಯಂತ್ರವನ್ನು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭ ಕೋವರ್ ಕೊಲ್ಲಿ ಬಳಿಯ ತಿರುವಿನಲ್ಲಿ ದಿಢೀರ್ ಆಗಿ ಕಾಡಾನೆ ಕಾಣಿಸಿಕೊಂಡಿದೆ.ಈ ಸಂದರ್ಭ ವಾಹನ ಸವಾರ ಮಾದಪ್ಪ ನಿಯಂತ್ರಣ ತಪ್ಪಿ ತೋಟದೊಳಗೆ ಬಿದ್ದು ಆನೆ ದಾಳಿಯಿಂದ ಪಾರಾದರು. ಆದರೆ ರಸ್ತೆಗೆ ಬಿದ್ದ ಹಿಂಬದಿ ಸವಾರ ತಮ್ಮಯ್ಯ ಆನೆ ತುಳಿತಕ್ಕೆ ಬಲಿಯಾಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜೆ.ಬಿ. ಸೋಮಯ್ಯ,  ಡಿಎಫ್‌ಒ ಧನಂಜಯ್, ಎಸಿಎಫ್ ನಾಗರಾಜ್, ಆರ್‌ಎಫ್‌ಒ ಕಾರ್ಯಪ್ಪ, ವೃತ್ತ ನಿರೀಕ್ಷಕ ಸಿದ್ದಯ್ಯ ಭೇಟಿ ನೀಡಿದರು.ರೂ 5 ಲಕ್ಷ ಪರಿಹಾರ:  ಆನೆ ತುಳಿತಕ್ಕೆ ಬಲಿಯಾದ ತಮ್ಮಯ್ಯನವರ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ ರೂ. 5 ಲಕ್ಷ ಪರಿಹಾರವಾಗಿ ನೀಡಲಾಗುವುದು ಎಂದು ಡಿಎಫ್‌ಒ ಧನಂಜಯ್ ತಿಳಿಸಿದರು. ತಕ್ಷಣದ ಪರಿಹಾರವಾಗಿ 2.5 ಲಕ್ಷ ರೂಪಾಯಿಗಳನ್ನು ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಗಿವುದು ಎಂದು ಹೇಳಿದರು.ಶೀಘ್ರ ಸಭೆ-ರಂಜನ್: ಬೇಳೂರು, ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಅಗತ್ಯ ಕ್ರಮಕ್ಕೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು. ಈಗಾಗಲೇ ರೂ. 2.5 ಲಕ್ಷ ಪರಿಹಾರದ ಚೆಕ್ ಅನ್ನು ಮೃತರ ಕುಟುಂಬಕ್ಕೆ ನೀಡಲು ಸೂಚಿಸಲಾಗಿದೆ. ಉಳಿದ ರೂ. 2.5 ಲಕ್ಷವನ್ನು ಮುಂದಿನ ದಿನಗಳಲ್ಲಿ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.