ಗುರುವಾರ , ಅಕ್ಟೋಬರ್ 17, 2019
22 °C

ಕಾಡಾನೆ ದಾಳಿ: ಫಸಲು ನಾಶ

Published:
Updated:

ಆಲೂರು: ತಾಲ್ಲೂಕಿನ ಸುತ್ತಮುತ್ತಲ ಗ್ರಾಮದ ತೋಟಗಳಲ್ಲಿ ಕೆಲವು ದಿನಗಳಿಂದ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡು ಭಾನುವಾರ ರಾತ್ರಿ ಚಿನ್ನಹಳ್ಳಿ ಗ್ರಾಮಕ್ಕೆ ನುಗ್ಗಿ  ತೆಂಗಿನ ಮರ,  ಬಾಳೆ ಮತ್ತು ಕಾಫಿ ತೋಟಗಳಲ್ಲಿ ಬೆಳದಿದ್ದ ಫಸಲನ್ನು ನಾಶ ಮಾಡಿವೆ.ಮನೆಗಳ ಮುಂಭಾಗ ಬೆಳೆಸಿದ್ದ ತೆಂಗಿನ ಮರಗಳನ್ನು ನೆಲಕ್ಕುರುಳಿಸಿವೆ, ಅಷ್ಟೇ ಅಲ್ಲದೆ ಕಾಫಿ ತೋಟ ಹಾಗೂ ಬಾಳೆ ಫಸಲನ್ನು ಸಹ ನಾಶ ಮಾಡಿವೆ.ಅದರಲ್ಲೂ ಜಯಮ್ಮ ಎಂಬುವರ ಮನೆ ಮುಂಭಾಗದ ತೆಂಗಿನ ಮರಗಳನ್ನು ಸಂಪೂರ್ಣ ನಾಶ ಪಡಿಸಿ ರಾತ್ರಿಯೇ ಕಾಡಿಗೆ ಆನೆಗಳು ತೆರಳಿವೆ ಎಂದು ಹೇಳಲಾಗಿದೆ.`ಕಳೆದ ವರ್ಷ ನನ್ನ  ಪತಿ ಜಯರಾಮ ಆನೆ ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದ್ದರು. ಈಗ ಮನೆಯ ಮುಂದೆ ಇದ್ದ ತೆಂಗಿನ ಮರಗಳನ್ನು ಕೆಡವಿ ನಷ್ಟ ಮಾಡಿವೆ. ನಮ್ಮ ಗೋಳು ಕೇಳುವರಿಲ್ಲ~ ಎಂದು ಆಳಲು ತೋಡಿ ಕೊಂಡರು.ಗ್ರಾಮದ ನಿವಾಸಿಗಳಾದ ಸೀನಪ್ಪ, ಪದ್ಮನಾಭ, ತಿಮ್ಮಯ್ಯ, ರಮೇಶ ಪುಜಾರಿ, ಜ್ಞಾನೇಶ್ ಅವರ ಬೆಳೆದಿರುವ ಬೆಳೆಗಳನ್ನು ಸಹ ಮಾಡಿದ್ದು, ಅಪಾರ ನಷ್ಟವಾಗಿದೆ ಎಂದು ವಿವರಿಸಿದರು.ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಒಂದು ವರ್ಷದಿಂದ ಬೀದಿ ದೀಪ ಇಲ್ಲ, ಕುಡಿಯುವ ನೀರಿಲ್ಲ, ಮೂಲ ಸೌಕರ್ಯದಿಂದ ವಂಚಿತವಾಗಿದೆ. ಆನೆಗಳು ಗ್ರಾಮ ಪ್ರವೇಶಿಸಲು ವಿದ್ಯುತ್ ದೀಪ ಇಲ್ಲದಿರುವುದೇ ಕಾರಣ. ಈ ಬಗ್ಗೆ ಸರ್ಕಾರ ಮುಂಜಾಗ್ರತೆ ವಹಿಸಬೇಕು.  ಅರಣ್ಯ ಇಲಾಖೆಯವರು ಆನೆಗಳನ್ನು ಬೇರೆ ಕಡೆಗೆ ಸಾಗಿಸಿ ಇಲ್ಲಿಯ ಜನರು ಬದುಕಲು ಸಹಕರಿಸಬೇಕು ಎಂದು ಆಗ್ರಹಿಸಿದರು.ಕಾಡಾನೆ ದಾಳಿ ಮಾಡುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಇಲ್ಲಿಯ ನಿವಾಸಿಗಳು ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.

Post Comments (+)