ಕಾಡಾನೆ ದಾಳಿ: ವ್ಯಕ್ತಿ ಸಾವು

7

ಕಾಡಾನೆ ದಾಳಿ: ವ್ಯಕ್ತಿ ಸಾವು

Published:
Updated:

ಸರಗೂರು: ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬ ಮೃತಪಟ್ಟು, ಇನ್ನೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ಸರಗೂರು ಸಮೀಪದ ಲಂಕೆ ಗ್ರಾಮದ ಹೊರವಲ ಯದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.ಲಂಕೆ ಗ್ರಾಮದ ನಿವಾಸಿ ಮಹಾದೇವಯ್ಯ (36) ಮೃತಪಟ್ಟವರು. ಇವರ ಸಹೋದರ ಮಾದಯ್ಯ ಗಾಯಗೊಂಡಿದ್ದು, ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸಹೋದರರಿಬ್ಬರೂ ಬುಧವಾರ ರಾತ್ರಿ ರಾಗಿ ಹೊಲದಲ್ಲಿ ಕಾವಲು ಕಾಯ್ದು ಗುರುವಾರ ಬೆಳಿಗ್ಗೆ ಮನೆಗೆ ಮರಳುತ್ತಿದ್ದರು. ಈ ವೇಳೆ ಏಕಾಏಕಿ ದಾಳಿ ಮಾಡಿದ ಕಾಡಾನೆ ಮಹಾದೇವಯ್ಯನ ಎದೆಗೆ ಸೊಂಡಿಲಿಂದ ಹೊಡೆಯಿತು. ಈತ ಕುಸಿದುಬಿದ್ದ ನಂತರ ಮಾದಯ್ಯನನ್ನೂ ಅಟ್ಟಸಿಕೊಂಡು ಬಂದು ತಿವಿಯಿತು. ಎದೆಯ ಭಾಗದಲ್ಲಿ ತೀವ್ರ ಪೆಟ್ಟಾಗಿದ್ದ ಮಹಾದೇವಯ್ಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಮೃತಪಟ್ಟರು.

ವಿಷಯ ತಿಳಿದ ಗ್ರಾಮಸ್ಥರು ಸರಗೂರು ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾಮದ ಸುತ್ತ ಕಾಡಾನೆಗಳು ಪದೇ ಪದೇ ದಾಳಿ ಮಾಡುತ್ತಿವೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ರೈತರನ್ನೇ ಬಲಿ ತೆಗೆದುಕೊಂಡ ಪ್ರಕರಣಗಳು ಸಾಕಷ್ಟು ಸಂಭವಿಸಿವೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ದಾಳಿ  ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನೆಕಾರರು ದೂರಿದರು.ಆನೆ ದಾಳಿಗೆ ತುತ್ತಾದ ಮಹಾದೇವಯ್ಯನಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಇವರ ಜೀವನ ನಿರ್ವಹಣೆಗೆ ರೂ. 10 ಲಕ್ಷ ಪರಿಹಾರ ನೀಡಬೇಕು ಎಂದೂ  ಗ್ರಾಮಸ್ಥರು ಒತ್ತಾಯಿಸಿದರು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಮ್ಮಯ್ಯ ಮನವಿ ಪತ್ರ ಪಡೆದು, ಮೃತನ ಕುಟುಂಬಕ್ಕೆ ನಿಗದಿತ ರೂ. 5 ಲಕ್ಷ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry