ಕಾಡಾನೆ ಹಾವಳಿ ಖಂಡಿಸಿ ಹೆದ್ದಾರಿ ತಡೆ

7

ಕಾಡಾನೆ ಹಾವಳಿ ಖಂಡಿಸಿ ಹೆದ್ದಾರಿ ತಡೆ

Published:
Updated:

ಸಕಲೇಶಪುರ: ಜಲವಿದ್ಯುತ್ ಯೋಜನೆ ರದ್ದುಗೊಳಿಸಲು ಆಗ್ರಹಿಸಿ ಹಾಗೂ ರೈತರ ಪ್ರಾಣ, ಬೆಳೆ ಆಸ್ತಿಪಾಸ್ತಿ ಹಾನಿ ಮಾಡುತ್ತಿರುವ ಕಾಡಾನೆ ಓಡಿಸಲು ಒತ್ತಾಯಿಸಿ ತಾಲ್ಲೂಕಿನ ಹೆಗ್ಗದ್ದೆ ಗ್ರಾಮದಲ್ಲಿ ಶುಕ್ರವಾರ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.ಹೆಗ್ಗದ್ದೆ ಬೆಳೆಗಾರರ ಸಂಘ, ಹೋಬಳಿ ಬೆಳೆಗಾರರ ಸಂಘಗಳ ನೇತೃತ್ವದಲ್ಲಿ ಹೆಗ್ಗದ್ದೆ, ಹನುಬಾಳು, ಆನೇಮಹಲ್, ಕ್ಯಾಮನ ಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಾರನಹಳ್ಳಿ, ಕಾಟುದ್ದಿ, ಉಸೇರು ಮನೆ, ಆಲುವಳ್ಳಿ, ಕಡಗರವಳ್ಳಿ, ಹಾನುಬಾಳು ಸುತ್ತಮುತ್ತಲಿನ ರೈತರು ಸರ್ಕಾರದ ಅರಣ್ಯ ನೀತಿ ಖಂಡಿಸಿ ತೀವ್ರ ಪ್ರತಿಭಟನೆ ನಡೆಸಿದರು.ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ನೂರಾರು ರೈತರು ಗ್ರಾ.ಪಂ. ಆವರಣದಲ್ಲಿ ಕಾಡಾನೆ ಸಮಸ್ಯೆ ಕುರಿತು ಪ್ರತಿಭಟನಾ ಸಭೆ ನಡೆಸಿದರು. ಸಭೆಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸು ವಂತೆ ಈ ಹಿಂದೆಯೇ ಆಯಾಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರೂ, ಮಧ್ಯಾಹ್ನ ಸ್ಥಳಕ್ಕೆ ಆರ್‌ಎಫ್‌ಓ ರತ್ನ ಪ್ರಭ ಒಬ್ಬರನ್ನು ಬಿಟ್ಟು ಯಾವುದೇ ಅಧಿಕಾರಿಗಳು ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಪೊಲೀಸ್ ವಿರುದ್ಧ ತಿರುಗಿಬಿದ್ದ ಪ್ರತಿಭಟನಾಕಾರರು: ಹೆದ್ದಾರಿಯಲ್ಲಿ ಪ್ರತಿಭಟನೆ ಆರಂಭಿಸಿ 10 ನಿಮಿಷಗಳು ಕಳೆದಿರಲಿಲ್ಲ ಗ್ರಾಮಾಂತರ ಠಾಣೆ ಪಿಎಸ್‌ಐ ರಾಜು ಹಾಗೂ ಸಿಬ್ಬಂದಿ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ ಎಂದು ಹೆದ್ದಾರಿ ಯಿಂದ ಪ್ರತಿಭಟನಾಕಾರರನ್ನು ಬಲವಂತವಾಗಿ ಏಳಿಸಿದರು. ಪೊಲೀಸರ ಬಲ ಪ್ರದರ್ಶನವನ್ನು ಜನಸ್ಪಂದನ ವೇದಿಕೆ ಅಧ್ಯಕ್ಷ ಅರುಣ್‌ರಕ್ಷಿದಿ ತೀವ್ರವಾಗಿ ಖಂಡಿಸಿದರು.ಕಾಡಾನೆ ಸಮಸ್ಯೆಯಿಂದ ಪ್ರಾಣ ಹಾಗೂ ಬೆಳೆಯನ್ನು ಕಳೆದುಕೊಂಡು ಕ್ಷಣ ಕ್ಷಣವೂ ಭಯ ಹಾಗೂ ನಷ್ಟದ ನೆರಳಲ್ಲಿ ಬದುಕುತ್ತಿರುವ ರೈತರ 10 ವರ್ಷಗಳ ನಿರಂತರ ಸಮಸ್ಯೆಗಿಂತ, ಹೆದ್ದಾರಿಯಲ್ಲಿ ಪ್ರಯಾಣ ಮಾಡುವವರಿಗೆ 10 ನಿಮಿಷ ಸಮಸ್ಯೆ ಮುಖ್ಯ ವಾಗಿದೆ. ರೈತರ ಮೇಲೆ ಅಧಿಕಾರ ವರ್ಗ ಇದೇ ರೀತಿ ಸದಾ ದಬ್ಬಾಳಿಕೆ ಮಾಡುತ್ತಿದೆ ಎಂದು ಪಿಎಸ್‌ಐ ರಾಜು ಕ್ರಮ ಖಂಡಿಸಿ, ಪ್ರತಿಭಟನೆ ಮುಂದುವರೆಸಿದರು.ನಂತರ ಸ್ಥಳಕ್ಕೆ ಎಸಿಎಫ್ ಚಂದ್ರೇಗೌಡ ಹಾಗೂ ತಹಶೀಲ್ದಾರ್ ಚಂದ್ರಮ್ಮ ಭೇಟಿ ನೀಡಿದರು. ಚಂದ್ರೇಗೌಡ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದ್ದರಿಂದ, ಮನವಿ ಆಲಿಸದೆ ಹಿಂತಿರುಗಲು ಯತ್ನಿಸಿದ ಚಂದ್ರೇಗೌಡರನ್ನು ಪ್ರತಿಭಟ ನಾಕಾರರು ತಡೆದು ತೀವ್ರ ವಾಗ್ದಾಳಿ ನಡೆಸಿ ಮನವಿ ಸಲ್ಲಿಸಿದರು.  

 

ಕಾಡಿನಿಂದ ಆಚೆ ಹಾಕಿ: ಪಶ್ಚಿಮಘಟ್ಟದ ಕಾಯ್ದಿರಿಸಿದ ಅರಣ್ಯದಲ್ಲಿ ಇರುವ ಎಲ್ಲಾ ಜಲವಿದ್ಯುತ್ ಯೋಜನೆಗಳನ್ನು ಕೂಡಲೆ ಕಾಡಿನಿಂದ ಹೊರ ಹಾಕಬೇಕು ಎಂದು ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು. ವಂಶ ಪಾರಂಪರ‌್ಯವಾಗಿ ಕಾಫಿ, ಏಲಕ್ಕಿ, ಅಡಿಕೆ, ಬಾಳೆ, ಭತ್ತ ಮುಂತಾದ ಬೆಳೆಗಳನ್ನು ಕಾಡಾನೆಗಳು ಇನ್ನಿಲ್ಲದಂತೆ ನಾಶ ಮಾಡಿವೆ, ಅಳಿದುಳಿದುದ್ದನ್ನೂ ನಾಶ ಮಾಡುತ್ತಿವೆ. ಮೂರು ಹೊತ್ತು ತಿನ್ನುವುದಕ್ಕೂ ಆಹಾರ ಸಮಸ್ಯೆ ಉಂಟಾಗಿದೆ ಎಂದು ಹೆಗ್ಗದ್ದೆ ಬೆಳೆಗಾರರ ಸಂಘದ ಅಧ್ಯಕ್ಷ ಉದಯ್‌ಕುಮಾರ್ ಸಮಸ್ಯೆ ಬಿಚ್ಚಿಟ್ಟರು.ಪ್ರತಿಭಟನೆಯಲ್ಲಿ ಜಿಲ್ಲಾ ಬೆಳೆಗಾರರ ಸಂಘದ ಉಪಾಧ್ಯಕ್ಷ ಕೆ.ಬಿ.ಕೃಷ್ಣಪ್ಪ, ಖಜಾಂಚಿ ಎಸ್.ಕೆ.ಸೂರ್ಯ, ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಹೆಬ್ಬಸಾಲೆ ಪ್ರಕಾಶ್, ಎಂ.ವಿ.ನಂದನ್, ಹೆಗ್ಗದ್ದೆ ಬೆಳೆಗಾರರ ಸಂಘದ ಅಧ್ಯಕ್ಷ ಉದಯ್‌ಕುಮಾರ್, ಹಾನುಬಾಳು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಎ.ಭಾಸ್ಕರ್, ವಿಜಯ್ ವಿವೇಕಾನಂದ, ಹೆಗ್ಗದ್ದೆ ನಾಗೇಶ್ ಮುಂತಾದವರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry