ಕಾಡಿದ ಬರ: ಹಾಲು ಉತ್ಪಾದನೆ ಕುಸಿತ

ಗುರುವಾರ , ಜೂಲೈ 18, 2019
22 °C

ಕಾಡಿದ ಬರ: ಹಾಲು ಉತ್ಪಾದನೆ ಕುಸಿತ

Published:
Updated:

ತುಮಕೂರು: ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಕುಸಿದಿದೆ. 2012ರ ಜೂನ್ ತಿಂಗಳ ಹಾಲು ಉತ್ಪಾದನೆ ಪ್ರಮಾಣಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದ ಜೂನ್ ತಿಂಗಳಲ್ಲಿ 4.35 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿದೆ. ಕಳೆದ ವರ್ಷ ಸರಾಸರಿ ಉತ್ಪಾದನೆ 4.53 ಲಕ್ಷ ಲೀಟರ್‌ಗಳಷ್ಟಿತ್ತು.ಹಾಲು ಉತ್ಪಾದಕರನ್ನು ಉತ್ತೇಜಿಸಲು ಸರ್ಕಾರ ರೈತರಿಗೆ ಲೀಟರ್‌ಗೆ 4 ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದೆ. ಜಿಲ್ಲೆಯಲ್ಲಿ ಬರ ಕಾಡುತ್ತಿದ್ದು, ಮೇವಿನ ಕೊರತೆಯಿಂದ ಹಾಲು ಉತ್ಪಾದನೆ ಇಳಿಮುಖವಾಗಿದೆ. ಹಾಲಿಗೆ ಪ್ರೋತ್ಸಾಹ ಧನ ಘೋಷಿಸಿದ ನಂತರ ಉತ್ಪಾದನೆಯ ಪ್ರಮಾಣ ಕೊಂಚ ಚೇತರಿಕೆ ಕಂಡಿದೆ.ಕಳೆದ ಮೇ ತಿಂಗಳಲ್ಲಿ 3.55 ಲಕ್ಷ ಲೀಟರ್‌ಗಳಷ್ಟಿದ್ದ ಹಾಲಿನ ಉತ್ಪಾದನೆ ಪ್ರಸ್ತುತ 4.35 ಲಕ್ಷ ಲೀಟರ್‌ಗಳಿಗೆ ಏರಿಕೆಯಾಗಿದೆ ಎಂದು ತುಮಕೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಸ್ವಾಮಿ ತಿಳಿಸಿದರು.ಚಿಕ್ಕನಾಯಕನಹಳ್ಳಿ, ಶಿರಾ, ಪಾವಗಡ ತಾಲ್ಲೂಕುಗಳಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಜಾನುವಾರುಗಳಿಗೆ ನೀರು, ಮೇವಿನ ಸಮಸ್ಯೆ ಎದುರಾಗಿದೆ. ಇದು ಹಾಲು ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.ತುಮಕೂರು ಒಕ್ಕೂಟವು ರೈತರಿಂದ 4.35 ಲಕ್ಷ ಲೀಟರ್ ಹಾಲು ಖರೀದಿಸುತ್ತಿದೆ. ಇದರಲ್ಲಿ 2 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಿದರೆ, 25 ಸಾವಿರ ಲೀಟರ್ ಹಾಲನ್ನು ಮೊಸರು, ಇನ್ನಿತರ ಹಾಲಿನ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿದೆ. ಜಿಲ್ಲೆಯಲ್ಲಿ 78 ಸಾವಿರ ಲೀಟರ್ ಹಾಲು ಬಳಕೆಯಾಗುತ್ತಿದ್ದು, ಉಳಿದ ಹಾಲನ್ನು ಬೆಂಗಳೂರು ಮದರ್ ಡೇರಿಗೆ ಕಳುಹಿಸುತ್ತಿದೆ.35 ಲಕ್ಷ ಲಾಭ: ಕಳೆದ ವರ್ಷ ಹೆಚ್ಚುವರಿ ದಾಸ್ತಾನು ಮಾಡಲಾಗಿದ್ದ ಹಾಲಿನ ಉತ್ಪನ್ನಗಳು ಸಂಪೂರ್ಣ ಮಾರಾಟವಾಗಿದ್ದು, ಒಕ್ಕೂಟಕ್ಕೆ 35 ಲಕ್ಷ ರೂಪಾಯಿ ಲಾಭ ಬಂದಿದೆ.ಪ್ರಸ್ತುತ ಒಕ್ಕೂಟದ ಬಳಿ 300 ಟನ್ ಕೆನೆತೆಗೆದ ಹಾಲಿನ ಪುಡಿ (ಎಸ್‌ಎಂಪಿ) ಹಾಗೂ 90 ಟನ್ ಬೆಣ್ಣೆ ಇದೆ. ದಾಸ್ತಾನಿರುವ ಉತ್ಪನ್ನಗಳ ಖರೀದಿಗೆ ಹಲವು ಸಂಸ್ಥೆಗಳು ಮುಂದೆ ಬಂದಿವೆ. ಹೊಸದಾಗಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಉತ್ಪನ್ನಗಳ ಉತ್ಪಾದನೆಯನ್ನು ಆರಂಭಿಸಲಾಗಿದೆ ಎಂದು ಒಕ್ಕೂಟದ ಅಧಿಕಾರಿಗಳು ತಿಳಿಸಿದರು.ಕೈಸೇರದ ಪ್ರೋತ್ಸಾಹ ಧನ: ಹಾಲು ಉತ್ಪಾದಕರಿಗೆ ಬಿಜೆಪಿ ಸರ್ಕಾರ ಘೋಷಿಸಿದ್ದ 2 ರೂಪಾಯಿ ಪ್ರೋತ್ಸಾಹ ಧನ ಇನ್ನೂ ರೈತರ ಕೈಗೆ ಬಂದಿಲ್ಲ. ಜನವರಿಯಿಂದ ಮಾರ್ಚ್ ವರೆಗಿನ ಮೂರು ತಿಂಗಳ ಪ್ರೋತ್ಸಾಹ ಧನವನ್ನು ರೈತರಿಗೆ ಕೊಡದೆ ಬಾಕಿ ಉಳಿಸಿಕೊಳ್ಳಲಾಗಿದೆ.ಹಳೆಯ ಪ್ರೋತ್ಸಾಹ ಧನ ಬಾಕಿ ಇರುವಾಗಲೇ ಕಾಂಗ್ರೆಸ್ ಸರ್ಕಾರ ಘೋಷಿಸಿರುವ 4 ರೂಪಾಯಿ ಪ್ರೋತ್ಸಾಹ ಧನದ ಬಿಡುಗಡೆಯೂ ವಿಳಂಬವಾಗಿದೆ. ಮೇ 14ರಿಂದಲೇ ಹೊಸ ಪ್ರೋತ್ಸಾಹ ಧನ ಜಾರಿಯಾಗಿದ್ದು, ಆಡಳಿತಾತ್ಮಕ ಅನುಮೋದನೆ ಪಡೆದ ಬಳಿಕ ಬಿಡುಗಡೆಯಾಗಲಿದೆ ಎಂದು ಡಾ.ಸ್ವಾಮಿ `ಪ್ರಜಾವಾಣಿ'ಗೆ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ನಂತರ ನಡೆಸಿದ ಏಕವ್ಯಕ್ತಿ ಸಂಪುಟ ಸಭೆಯಲ್ಲಿ ಹಾಲಿನ ಪ್ರೋತ್ಸಾಹ ಧನ ಹೆಚ್ಚಿಸುವ ತೀರ್ಮಾನ ಪ್ರಕಟಿಸಿದ್ದರು.ಪ್ರತಿ ದಿನ 20ರಿಂದ 30 ಲೀಟರ್ ಹಾಲು ಡೇರಿಗೆ ಹಾಕುತ್ತಿದ್ದೆವು. ಆದರೆ ಮೇವಿನ ಸಮಸ್ಯೆಯಿಂದಾಗಿ ಈಗ 5ರಿಂದ 10 ಲೀಟರ್ ಹಾಲು ಹಾಕುತ್ತಿದ್ದೇವೆ. ಸರ್ಕಾರ ಘೋಷಿಸಿದ ಪ್ರೋತ್ಸಾಹಧನ ಕೂಡ ಇನ್ನೂ ಕೈ ಸೇರಿಲ್ಲ. ಮೇವು ಬೆಳೆಯೋಣ ಎಂದರೆ ಮಳೆಯಿಲ್ಲ ಎಂದು ಪಾವಗಡ ತಾಲ್ಲೂಕಿನ ದೌಡಬೆಟ್ಟ ನಿವಾಸಿ ಮಾರಣ್ಣ ತಮ್ಮ ಸಮಸ್ಯೆ ತೋಡಿಕೊಂಡರು.ಖಾಸಗಿ ಹಾಲು ಸ್ಥಗಿತ: ಇನ್ನು ಮುಂದೆ ಖಾಸಗಿ ಸಂಸ್ಥೆಗಳು ರೈತರಿಂದ ಹಾಲು ಖರೀದಿಸಿ, ಮಾರಾಟ ಮಾಡುವಂತಿಲ್ಲ. ತುಮಕೂರು, ಕೊರಟಗೆರೆ ಹಾಗೂ ಇನ್ನಿತರ ಕಡೆಗಳಲ್ಲಿ ಖಾಸಗಿಯವರ ಹಾಲು ಪೂರೈಕೆಯನ್ನು ಸರ್ಕಾರ ನಿಷೇಧಿಸಿದೆ.

ಖಾಸಗಿ ಒಕ್ಕೂಟದ ಆರೋಗ್ಯ ಹಾಲಿನ ಸರಬರಾಜು ಜೂನ್ 30ಕ್ಕೆ ಸ್ಥಗಿತಗೊಂಡಿದೆ. ಹಾಲು ಮಾರಾಟ ಸ್ಥಗಿತಗೊಳಿಸುವಂತೆ ಸರ್ಕಾರ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಹಾಲಿನ ಮಾರಾಟ ಸ್ಥಗಿತಗೊಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry