ಕಾಡಿನೊಳಗೆ ಕ್ಲ್ಲಲ್ಲು ಬಸದಿ

7

ಕಾಡಿನೊಳಗೆ ಕ್ಲ್ಲಲ್ಲು ಬಸದಿ

Published:
Updated:

ಸೂರ್ಯನ ಕಿರಣಗಳು ನೆಲಕ್ಕೆ ಬೀಳದಂತೆ ಚಾಚಿಕೊಂಡ ದಟ್ಟಡವಿ ಮಧ್ಯೆ ನುಸುಳುತ್ತ ಅಂಕುಡೊಂಕಾಗಿ ಹಾಯ್ದು ಹೋಗುವ ಹೆದ್ದಾರಿ.ಇಕ್ಕೆಲಗಳಲ್ಲಿ ಆಕಾಶವನ್ನೇ ಚುಂಬಿಸುವಂತೆ ಬೆಳೆದ ಮರಗಳು, ಒಂದು ಕಡೆ ಬೆಳ್ಳಿ ಜರಿಯಂಚಿನ ಹಸಿರು ಸೀರೆಯನ್ನುಟ್ಟ ಪ್ರಕೃತಿ ದೇವತೆಯಂತೆ ಶೋಭಿಸುವ ಶರಾವತಿಯ ಅದ್ಭುತ ಸೊಬಗು, ಇನ್ನೊಂದು ಕಡೆ ಬೃಹತ್ ಬೆಟ್ಟಗಳ ಸಾಲು.ಮಳೆಗಾಲದಲ್ಲಿ ಬೆಳ್ಳಿಯ ತೊರೆಗಳು ಚಿಕ್ಕ ಜಲಧಾರೆಗಳಾಗಿ ಪ್ರಪಾತಕ್ಕೆ ಧುಮುಕುವ ವೈಭವದ ಸುಂದರ ದೃಶ್ಯ. ಹಾಗೇ ಸಾಗುವಾಗ ಅಲ್ಲಲ್ಲಿ  ಕಾಡು ಪ್ರಾಣಿ- ಪಕ್ಷಿಗಳ ದರ್ಶನ. ಕ್ಯಾಮೆರಾದಲ್ಲಿ ಈ ಸೌಂದರ್ಯ ಸೆರೆಹಿಡಿಯುತ್ತಿದ್ದರೆ ದಾರಿ ಕಳೆದದ್ದೇ ಅರಿವಾಗದು. ಇದು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪೆಗೆ ಹೋಗುವ ಹಾದಿಯ ಪುಟ್ಟ ವರ್ಣನೆ ಮಾತ್ರ.ಗೇರುಸೊಪ್ಪೆಯ ಇನ್ನೊಂದು ಹೆಸರೇ ಕ್ಷೇಮಪುರ. ಸುಮಾರು 250 ವರ್ಷಗಳ ಕಾಲ ಸಾಳ್ವ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. 15 ಕಿಮಿ ವ್ಯಾಪಿಸಿತ್ತು, ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇಲ್ಲಿತ್ತು ಎಂಬ ಅಂಶಗಳು ದಾಖಲಾಗಿವೆ. ಈ ವಂಶದ ಹೆಸರಾಂತ ರಾಣಿ ಭೈರಾದೇವಿಯ ಮೊಮ್ಮಗಳೇ ರಾಣಿ ಚೆನ್ನಭೈರಾದೇವಿ. 54 ವರ್ಷ ಆಕೆಯ ರಾಜ್ಯಭಾರ ಅತ್ಯಂತ ವೈಭವದಿಂದ ಕೂಡಿತ್ತು ಎಂದು ಇತಿಹಾಸಕಾರರು ದಾಖಲಿಸಿದ್ದಾರೆ.ಸಾಂಬಾರ ಪದಾರ್ಥಗಳ ವ್ಯಾಪಾರದಿಂದಾಗಿ ಹೊರ ದೇಶಗಳಲ್ಲೂಹೆಸರುವಾಸಿಯಾಗಿದ್ದ ಗೇರುಸೊಪ್ಪೆ ಇಂದು ಸಾಧಾರಣ ಊರು. ಆದರೂ ಮೊಗೆದಷ್ಟೂ ಮುಗಿಯದ ಐತಿಹಾಸಿಕ ಮಹತ್ವವನ್ನು, ಪಳೆಯುಳಿಕೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ.

 

ದಟ್ಟಾರಣ್ಯದ ಮಧ್ಯದಲ್ಲಿ ಅಂದಿನ ರಾಜಧಾನಿಯ ಕಟ್ಟಡಗಳು, ಅಳಿದುಳಿದ ಮನೆ, ಮಂದಿರಗಳು, ಹೆಬ್ಬಾಗಿಲಿನ ಕಲ್ಲಿನ ಕಂಬಗಳ ತುಣುಕುಗಳು, ರಸ್ತೆಯ ಪಕ್ಕದಲ್ಲಿಯೇ ಬಾಯ್ದೆರೆದ ಸಾವಿರಕ್ಕೂ ಹೆಚ್ಚು ಬಾವಿಯ ಕುರುಹುಗಳು, ಗುಡಿಗೋಪುರಗಳ ಅಡಿಪಾಯ, ನೇರವಾದ ರಾಜ ಮಾರ್ಗ, ಕೇರಿಗಳು, ಒಳಚರಂಡಿ ವ್ಯವಸ್ಥೆ, ತುಂಡು ಗೋಡೆಗಳು, ಶಿಲಾಶಾಸನಗಳನ್ನು ನೋಡಬಹುದಾಗಿದೆ.ಇತಿಹಾಸಕಾರರ ಪ್ರಕಾರ ಆ ಕಾಲದಲ್ಲಿ ಇಲ್ಲಿ 108 ಜೈನ ಬಸದಿಗಳು ಇದ್ದವು. ಈ ಪೈಕಿ ಹೆಚ್ಚಿನವು ಕಾಲನ ಹೊಡೆತಕ್ಕೆ ಸಿಕ್ಕಿ ಹಾಳಾಗಿವೆ. ಆದರೂ ಒಂದಿಷ್ಟು ಜಖಂಗೊಂಡೂ ಉಳಿದಿರುವುದು ಚತುರ್ಮುಖ ಬಸದಿ ಮಾತ್ರ. ತಾತ ಮುತ್ತಾನ ಕಾಲದಿಂದ ಈ ಬಸದಿಯ ಉಸ್ತುವಾರಿ ನೋಡಿಕೊಂಡು ಪೂಜಾ ಕಾರ್ಯಕ್ರಮ ನಡೆಸುತ್ತ ಬಂದಿದ್ದೇವೆ ಎಂದು ಹೇಳುತ್ತಾರೆ 95 ವರ್ಷದ ಚಂದ್ರಯ್ಯ ಪದ್ಮಯ್ಯ ಶೆಟ್ಟಿ.ಈ ಬಸದಿ ಹೊರತು ಪಡಿಸಿದರೆ ಅಂಗಳದ ಸುತ್ತಲಿನ ಬಸದಿಗಳು ಬಿದ್ದು ಹೋಗಿದ್ದು ಅಲ್ಲಲ್ಲಿ ಕಲ್ಲು ಕಂಬಗಳ ತುಂಡುಗಳು ಗೋಚರಿಸುತ್ತವೆ. ಕೆಲ ಬಸದಿಯ ಗೋಡೆಯನ್ನು ಸೀಳಿಕೊಂಡು ಮರಗಳು ಬೆಳೆದಿವೆ.ಚತುರ್ಮುಖ ಬಸದಿಯಲ್ಲಿನ ಜಿನ ವಿಗ್ರಹಗಳನ್ನು ಗ್ರಾನೈಟ್ ಶಿಲೆಯಿಂದ ನಿರ್ಮಿಸಲಾಗಿದೆ. ಈಗ ಬಸದಿಯ ಗೋಪುರಗಳು ಕಾಣಿಸುವುದಿಲ್ಲ. ಇತ್ತೀಚೆಗೆ ಅಳಿದುಳಿದ ಈ ಕಂಬಗಳ ಚಪ್ಪಡಿಗಳನ್ನು ಸರಿಪಡಿಸಿ ಮೂಲರೂಪದ್ಲ್ಲಲೇ ಜೀರ್ಣೋದ್ಧಾರ ಮಾಡುವ ಕೆಲಸ ಪ್ರಾಚ್ಯವಸ್ತು ಸಂರಕ್ಷಣ ಇಲಾಖೆಯಿಂದ ನಡೆಯುತ್ತಿದೆ.ಈ ಬಸದಿಯ ನಾಲ್ಕು ದಿಕ್ಕಿನಲ್ಲಿಯೂ ಹೆಬ್ಬಾಗಿಲುಗಳಿವೆ. ಗೋಡೆಗಳಲ್ಲಿ ಒಂದೇ ರೀತಿಯ ಶಿಖರಗಳುಳ್ಳ ಮಂಟಪಗಳು, ನವಿಲು, ಆನೆಗಳ ಸಾಲು, 20 ಭುಜಗಳ ನಕ್ಷತ್ರ ಆಕೃತಿಯ ವಿಶಿಷ್ಟ ಶೈಲಿಯ ಮಂದಿರ ನಯನಮನೋಹರ. ಹೆಬ್ಬಾಗಿಲನ್ನು ದಾಟಿದ ನಂತರ ನಾಲ್ಕೂ ಕಡೆ ಬಾಗಿಲಿರುವ ಗರ್ಭಗುಡಿಯ ಮಂಟಪ, ಅದರೊಳಗಿನ ವಿಗ್ರಹಗಳು ಕಣ್ಸೆಳೆಯುತ್ತವೆ.3 ಅಡಿ ಎತ್ತರದ ಚತುರ್ಮುಖದ ನಾಲ್ಕು ಭವ್ಯ ಮೂರ್ತಿಗಳನ್ನು ಕಪ್ಪು ಹಸಿರು ಮಿಶ್ರಿತ ಶಿಲೆಯಲ್ಲಿ ನಿರ್ಮಿಸಲಾಗಿದೆ. ಇವು 24 ತೀರ್ಥಂಕರರ ಪೈಕಿ ಮೊದಲ ನಾಲ್ವರ ಮೂರ್ತಿಗಳು. ದಕ್ಷಿಣದ ಕಡೆ ವೃಷಭದೇವ, ಪಶ್ಚಿಮ ದಿಕ್ಕಿಗೆ ಅಜಿತ, ಉತ್ತರಮುಖವಾಗಿ ಶಂಭವ ಮತ್ತು  ಪೂರ್ವದಿಕ್ಕಿಗೆ ಅಭಿನಂದನ ತೀರ್ಥಂಕರರಿದ್ದಾರೆ.ಮಂದಸ್ಮಿತ ತುಟಿ, ಸುಂದರ ನಯನಗಳು, ಉಬ್ಬಿದ ಕೆನ್ನೆಗಳು, ತ್ಯಾಗ ಭಾವನೆಯನ್ನು ಬಿಂಬಿಸುವ ಈ ಮುಖಗಳನ್ನು ಸೃಷ್ಟಿಸಿದ ಶಿಲ್ಪಿಯ ಕಲಾನೈಪುಣ್ಯ ಎಷ್ಟು ಹೊಗಳಿದರೂ ಸಾಲದು. ಅಕ್ಕಪಕ್ಕ ಎತ್ತು, ಆನೆ, ಕುದುರೆ ಮತ್ತು ಮಂಗಗಳ ಲಾಂಛನವಿದೆ. ಈ ಮೂರ್ತಿಗಳು ಒಂದೇ ತೆರನಾಗಿದ್ದರೂ ಒಂದಕ್ಕಿಂತ ಒಂದು ಮಿಗಿಲಾದ ಸೌಂದರ್ಯದಿಂದ ಕೂಡಿವೆ.ಹಂಪಿಯಂಥ ಶಿಲಾ ಸೌಂದರ್ಯರಾಶಿಯುಳ್ಳ, ಹಿಂದೊಮ್ಮೆ ರಾಜಧಾನಿಯಾಗಿ ಮೆರೆದಿದ್ದ ಈ ಸ್ಥಳದ ಗತವೈಭವವನ್ನು ಮತ್ತೆ ಕಟ್ಟುವ ಕೆಲಸ ನಡೆಯಬೇಕು, ಇನ್ನಷ್ಟು ಸೌಕರ್ಯ ಕಲ್ಪಿಸಿ ಪ್ರವಾಸಿಗಳನ್ನು, ಯಾತ್ರಿಗಳನ್ನು, ಇತಿಹಾಸ ಪ್ರೇಮಿಗಳನ್ನು ಆಕರ್ಷಿಸುವ ಕೆಲಸವಾಗಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry