ಶುಕ್ರವಾರ, ಮೇ 14, 2021
32 °C

ಕಾಡಿನ ನಡುವೆ ಹಸಿರು ಅರಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ:  ಕಾಡಿನ ನಡುವೆಯೇ ಹಸಿರು ಸಂರಕ್ಷಣೆಯ ಕುರಿತು ಅರಿತುಕೊಳ್ಳುವ ಮೂಲಕ ತಾಲ್ಲೂಕಿನ ಬಿಸಗೋಡ ಸರ್ಕಾರಿ ಪ್ರೌಢಶಾಲೆಯ ಸಮೃದ್ಧಿ ಇಕೋ ಕ್ಲಬ್  ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿತು.ವಿದ್ಯಾರ್ಥಿಗಳೆಲ್ಲ ಸಸ್ಯತಜ್ಞ  ಶ್ರಿಕಾಂತ ಗುನಗಾ ಅವರೊಂದಿಗೆ ಸಮೀಪದ ಕಾಡನ್ನು ಸೇರಿ, ಅಲ್ಲಿನ ಒಂದೊಂದು ಮರ ಗಿಡಗಳನ್ನು ಅವುಗಳ ವೈಜ್ಞಾನಿಕ ಹೆಸರು, ಸ್ಥಳೀಯ ಹೆಸರು, ಉಪಯೋಗ ಇತ್ಯಾದಿಗಳನ್ನು ಪರಿಚಯಿಸಿಕೊಂಡು ದಾಖಲಿಸಿಕೊಂಡರು.ಸಸ್ಯಗಳ ವರ್ಗೀಕರಣ ಮಾಡುವ ವೈಜ್ಞಾನಿಕ ವಿಧಾನದ ಕುರಿತು ಮಕ್ಕಳು ಆಪ್ತವಾಗಿ ಕೇಳಿದ ಪ್ರಶ್ನೆಗೆ ಶ್ರಿಕಾಂತ ಗುನಗಾ ಅವರು ಸಸ್ಯ ವರ್ಗೀಕರಣದ ಮಹತ್ವ, ನಾಮಕರಣ ಮಾಡುವ ಬಗೆ, ಸಸ್ಯ ಲಕ್ಷಣ ಅರಿಯುವ ವಿಧಾನ ಇವುಗಳ ಬಗ್ಗೆ ಬೇರೆ ಬೇರೆ ಸಸ್ಯಗಳ ಟೊಂಗೆಗಳನ್ನು ಸ್ಥಳದಲ್ಲಿಯೇ ತೋರಿಸಿ ಮನಮುಟ್ಟುವಂತೆ ವಿವರಿಸಿದರು. ಎರಡು ಗಂಟೆಗಳ ಕಾಲದ ಈ ವನಸಂಚಾರದ ಬಳಿಕ ಅರಣ್ಯದ ಬಗ್ಗೆ  ಪ್ರೀತಿ ಹುಟ್ಟಿಸುವ ವಿಚಾರಗಳ ಮೇಲೆ ಪವರ್‌ಪಾಯಿಂಟ್ ಆಧಾರಿತ ಉಪನ್ಯಾಸ ನಡೆಯಿತು.ಈ ಸಂದರ್ಭ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ  ಗಣಪತಿ ಗಾಂವ್ಕರ ಮಾನಿಗದ್ದೆ, ಮುಖ್ಯ ಶಿಕ್ಷಕ ಎಂ.ಆರ್. ಯಾಜಿ,  ಶಿಕ್ಷಕರಾದ ಸದಾನಂದ ದಬಗಾರ,  ಸತೀಶ ಹೆಗಡೆ,  ಆನಂದ ನಾಯಕ, ನಾಗರಾಜ ಹೆಗಡೆ ಮುಂತಾದವರು ಈ ಸಂದರ್ಭ ಪಾಲ್ಗೊಂಡಿದ್ದರು.

ಕಿರವತ್ತಿಯಲ್ಲಿ:  ಯಲ್ಲಾಪುರ ತಾಲ್ಲೂಕಿನ ಕಿರವತ್ತಿಯ ಶ್ರಿಕೃಷ್ಣ ಮಿಲ್ಕ್ಸ್‌ನಲ್ಲಿ ಬುಧವಾರ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.ವಲಯ ಅರಣ್ಯಾಧಿಕಾರಿ ಅಶೋಕ ಬಿರಾದಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪ ಅರಣ್ಯಾಧಿಕಾರಿ ನದಾಫ್ ಇವರು ಗಿಡಗಳ ಸಂರಕ್ಷಣೆ ಬಗ್ಗೆ ವಿವರಿಸಿದರು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಎಚ್.ಜೆ.ಶಂಕರಲಿಂಗೇಗೌಡ ಪರಿಸರ ಮಹತ್ವದ ಕುರಿತು ಮಾತನಾಡಿದರು. ಸಂಸ್ಥೆಯ ಎಲ್ಲಾ ಸಿಬ್ಬಂದಿ ಗಿಡ ನೆಡುವದರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಾನವ ಸಂಪನ್ಮೂಲ ಅಧಿಕಾರಿಗಳಾದ ಅಶೋಕ ನಾಯ್ಕ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.