ಕಾಡಿನ ಮಕ್ಕಳಿಗೆ ಶಿಕ್ಷಣ ಮತ್ತೆ ಮರೀಚಿಕೆ?

7

ಕಾಡಿನ ಮಕ್ಕಳಿಗೆ ಶಿಕ್ಷಣ ಮತ್ತೆ ಮರೀಚಿಕೆ?

Published:
Updated:
ಕಾಡಿನ ಮಕ್ಕಳಿಗೆ ಶಿಕ್ಷಣ ಮತ್ತೆ ಮರೀಚಿಕೆ?

ಮಡಿಕೇರಿ: ಶಿಕ್ಷಣ ಪಡೆಯಬೇಕು ಎನ್ನುವ ಬಡವರ ಮಕ್ಕಳು ಹಾಗೂ ವಿಶೇಷವಾಗಿ ಗ್ರಾಮೀಣ ಮಕ್ಕಳ ಆಕಾಂಕ್ಷೆ ಮೇಲೆ ಘನವೆತ್ತ ರಾಜ್ಯ ಸರ್ಕಾರ ಗದಾಪ್ರಹಾರ ಮಾಡಿದೆ. ಮಕ್ಕಳ ಹಾಜರಾತಿ 10ಕ್ಕಿಂತ ಹೆಚ್ಚಿಲ್ಲ ಎನ್ನುವ ನೆಪವೊಡ್ಡಿ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದ್ದೇ ಇದಕ್ಕೆ ಕಾರಣ.1ರಿಂದ 5ನೇ ತರಗತಿವರೆಗಿನ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಇರುವ ಮಕ್ಕಳ ಶಾಲೆಗಳನ್ನು ಹತ್ತಿರದ ಮತ್ತೊಂದು ಶಾಲೆಯಲ್ಲಿ ವಿಲೀನಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರ ಪರಿಣಾಮ ರಾಜ್ಯದ ಸುಮಾರು ಮೂರು ಸಾವಿರಕ್ಕೂ ಮೇಲ್ಪಟ್ಟು ಶಾಲೆಗಳಿಗೆ ಬೀಗ ಹಾಕುವ ಭೀತಿ ಎದುರಾಗಿದೆ.ಕೊಡಗು ಜಿಲ್ಲೆಯಲ್ಲಿ ಸುಮಾರು 13 ಶಾಲೆಗಳು ಈ ಭೀತಿಯನ್ನು ಎದುರಿಸುತ್ತಿವೆ. ಇದರಲ್ಲಿ ಈಗಾಗಲೇ 2 ಶಾಲೆಗಳನ್ನು ವಿದ್ಯಾರ್ಥಿಗಳ ಕೊರತೆಯ ಹಿನ್ನೆಲೆಯಲ್ಲಿ 2011-12ನೇ ಸಾಲಿನಲ್ಲಿ  ಮುಚ್ಚಲಾಗಿದೆ ಎನ್ನುವುದು ಗಮರ್ನಾಹ. ಬಹುತೇಕ ಅರಣ್ಯ ಪ್ರದೇಶವನ್ನು ಒಳಗೊಂಡಿರುವ ಕೊಡಗು ಜಿಲ್ಲೆಯ ಕಾಡಿನ ಮಕ್ಕಳ ಶಿಕ್ಷಣದ ಕನಸು ಗಗನಕುಸುಮವಾಗಲಿದೆಯೇ ಎನ್ನುವ ಆತಂಕ ಜಿಲ್ಲೆಯ ಪ್ರಜ್ಞಾವಂತರನ್ನು ಕಾಡುತ್ತಿದೆ.ಶೈಕ್ಷಣಿಕ ರಂಗದ ಮೇಲೆ ಪರಿಣಾಮ: ಸರ್ಕಾರದ ಈ ನಿರ್ಧಾರದಿಂದಾಗಿ ಜಿಲ್ಲೆಯ ಶೈಕ್ಷಣಿಕ ರಂಗದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಂತು ನಿಜ. ಕೊಡಗು ಜಿಲ್ಲೆಯ ಒಟ್ಟು ಜನಸಂಖ್ಯೆ 5.50 ಲಕ್ಷದಲ್ಲಿ ಸುಮಾರು 4.50 ಲಕ್ಷ ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಾರೆ. ಇದರಲ್ಲಿ ಬಹುತೇಕರು ಕಾಫಿ ಎಸ್ಟೇಟ್‌ಗಳಲ್ಲಿ ಕೂಲಿ ಮಾಡುವವರು, ಬಡವರು ಇದ್ದಾರೆ.ಇವರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳನ್ನೇ ನೆಚ್ಚಿಕೊಂಡಿದ್ದಾರೆ. ಚಿಕ್ಕ ಚಿಕ್ಕ ಗ್ರಾಮಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳನ್ನು ಬಿಟ್ಟರೆ, ಖಾಸಗಿ ಶಾಲೆಗಳು ಅಲ್ಲಿರುವುದಿಲ್ಲ. ಈ ಸಂದರ್ಭದಲ್ಲಿ ಅಲ್ಲಿನ ಸರ್ಕಾರಿ ಶಾಲೆಗಳು ಮುಚ್ಚಿದರೆ, ಈ ಮಕ್ಕಳು ಶಿಕ್ಷಣದಿಂದ ವಂಚಿತರಾದಂತೆಯೇ. ಈ ಮಕ್ಕಳನ್ನು ಬೇರೆಡೆ ಕಳುಹಿಸಿ, ಶಿಕ್ಷಣ ಕೊಡಿಸುವಷ್ಟು ಪಾಲಕರು ಆರ್ಥಿಕವಾಗಿ ಸಶಕ್ತರಾಗಿರುವುದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ `ಅನಕ್ಷರತೆ~ ಎನ್ನುವ ಭೂತ ಮತ್ತೆ ಬೆಳೆದು ಬೃಹದಾಕಾರವಾಗಬಹುದು.ಭಾಷೆಯ ಮೇಲೆ ಪರಿಣಾಮ: ಕೇರಳ ಗಡಿಗೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ಕರಿಕೆ, ಮಾಕುಟ್ಟ ಹಾಗೂ ಇತರ ಗ್ರಾಮಗಳಲ್ಲಿ ಮಲಯಾಳಂ ಭಾಷೆ ಪ್ರಭಾವಿಯಾಗಿದೆ. ಇಂತಹ ಸಂದರ್ಭದಲ್ಲಿ ಅಲ್ಲಿರುವ ಕನ್ನಡ ಶಾಲೆಗಳನ್ನು ಮುಚ್ಚಿಬಿಟ್ಟರೆ, ಈಗಾಗಲೇ ಅರೆಜೀವವಾಗಿರುವ ಕನ್ನಡ ಭಾಷೆ ಸತ್ತುಹೋದಂತೆ. ಮುಂಬರುವ ದಿನಗಳಲ್ಲಿ ಇಡೀ ಪ್ರದೇಶ `ಮಲಯಾಳಂಮಯ~ ಆದರೂ ಆಶ್ಚರ್ಯಪಡಬೇಕಾಗಿಲ್ಲ.ಮೂಲಸೌಕರ್ಯಗಳ ಕೊರತೆ: ಗಟ್ಟಿಮುಟ್ಟಾದ ಶಾಲಾ ಕೊಠಡಿಗಳು ಇಲ್ಲದಿರುವ ಅದೆಷ್ಟೋ ಶಾಲೆಗಳು ಜಿಲ್ಲೆಯಲ್ಲಿವೆ. ಮಳೆ ನೀರು ಸೋರುವ ಮಾಳಿಗೆ, ಮುರಿದುಹೋಗಿರುವ ಪೀಠೋಪಕರಣಗಳು, ಶೌಚಾಲಯಗಳ ಕೊರತೆ, ಸ್ವಚ್ಚ ಕುಡಿಯುವ ನೀರಿನ ಕೊರತೆ, ಸೇರಿದಂತೆ ಹಲವು ಮೂಲಸೌಕರ್ಯಗಳು ಮರಿಚೀಕೆಯಾಗಿವೆ. ಇಂತಹ ಶಾಲೆಗಳಲ್ಲಿ ತಮ್ಮ ಮಕ್ಕಳು ಓದಲಿ ಎಂದು ಯಾವ ಪಾಲಕರು ತಾನೇ ಬಯಸುತ್ತಾರೆ?ಇಲಾಖೆ ನೀಡುವ ಕಾರಣಗಳು...

ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ನೀಡುವ ಕಾರಣಗಳು ಇವು;

* ಕೊಡಗು ಜಿಲ್ಲೆಯಲ್ಲಿ ಕೂಲಿಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವತ್ತು ಈ ತೋಟದಲ್ಲಿ ಕೆಲಸ ಮಾಡಿದರೆ, ಮುಂದಿನ ವರ್ಷ ಮತ್ತೊಂದು ಪ್ರದೇಶದ ತೋಟಕ್ಕೆ ಹೋಗುತ್ತಾರೆ (ಹೆಚ್ಚು ಸಂಬಳ ಕೊಡುವವರಲ್ಲಿಗೆ). ಅವರೊಂದಿಗೆ ಅವರ ಕುಟುಂಬವು ವಲಸೆ ಹೋಗುತ್ತದೆ. ಅದರಂತೆ ಅವರ ಮಕ್ಕಳೂ ವರ್ಗಾವಣೆಯಾಗುತ್ತಾರೆ.* ಕೆಲವು ವರ್ಷಗಳ ಹಿಂದೆ ಸರ್ಕಾರವು ರೂಪಿಸಿದ ತಪ್ಪು ಶಿಕ್ಷಣ ನೀತಿ. ಪ್ರತಿ ಒಂದು ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಒಂದು ಶಾಲೆ ಇರಲೇಬೇಕು ಎಂದು ಹಠಾತ್ತಾಗಿ ಹಲವು ಶಾಲೆಗಳನ್ನು ತೆರೆಯಲಾಯಿತು. ನಂತರದ ವರ್ಷಗಳಲ್ಲಿ ವಿದ್ಯಾರ್ಥಿಗಳಿಲ್ಲದೇ ಸೊರಗತೊಡಗಿದವು.* ಇತ್ತೀಚೆಗೆ ಪಾಲಕರಲ್ಲಿ ಹೆಚ್ಚಾಗಿ ಕಾಣಿಸುತ್ತಿರುವ ಇಂಗ್ಲಿಷ್ ವ್ಯಾಮೋಹ. ಸ್ಪರ್ಧಾತ್ಮಕ ಜಗತ್ತಿನ ನೆಪದಲ್ಲಿ ಇಂಗ್ಲಿಷ್‌ಗೆ ತಲೆಬಾಗುತ್ತಿರುವುದು.* ಶಿಕ್ಷಕರ ಕೊರತೆಯೂ ಒಂದು ಪ್ರಮುಖ ಕಾರಣವಾಗಿದೆ.

ಪಾಲಕರ ಅಭಿಪ್ರಾಯಗಳು

`ಕನ್ನಡ ಅಭಿಮಾನದಿಂದ ಹೊಟ್ಟೆತುಂಬಲ್ಲ~


`ಶಿಕ್ಷಣಕ್ಕೆ ಉತ್ತೇಜನ ನೀಡುವುದಕ್ಕಾಗಿ ಇಂದು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ನಿಜ. ಬಿಸಿಯೂಟ, ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ, ಸೈಕಲ್ ವಿತ ರಣೆ, ಪ್ರತಿಭಾ ಪುರಸ್ಕಾರ ಹೀಗೆ ಹಲವು ಯೋಜನೆ ಹಾಕಿಕೊಂಡಿದೆ. ಆದರೆ, ಇಲ್ಲಿ ನೀಡಲಾಗುವ ಶಿಕ್ಷಣದ ಗುಣಮಟ್ಟದ ಬಗ್ಗೆ ನಮಗೆ ತೃಪ್ತಿ ಇಲ್ಲ~ ಎಂದು ಮಡಿಕೇರಿ ನಿವಾಸಿ ಇಂದಿರಾ ಹೇಳಿದರು.ಇವರು ತಮ್ಮ ಮಗಳನ್ನು ಸ್ಥಳೀಯ ಖಾಸಗಿ ಆಂಗ್ಲ ಭಾಷೆ ಶಾಲೆಗೆ ಸೇರಿಸಿದ್ದಾರೆ. `ಕನ್ನಡ ಬಗ್ಗೆ ನಮಗೆ ಹೆಮ್ಮೆ ಇದೆ. ಆದರೆ, ಅಭಿಮಾನದಿಂದ ಹೊಟ್ಟೆತುಂಬಲ್ಲ. ಇಂದಿನ ಸ್ಪರ್ಧಾ ದಿನಗಳಲ್ಲಿ ಇಂಗ್ಲಿಷ್‌ನ್ನು ನಿರ್ಲಕ್ಷಿಸುವಂತಿಲ್ಲ.ಉದ್ಯೋಗಾವಕಾಶಗಳಾಗಲಿ, ದೇಶ ಸುತ್ತುವ ಅವಕಾಶವಾಗಲಿ, ಹೊಸ ಕ್ಷೇತ್ರ ಗಳಿಗೆ ಪ್ರವೇಶ ಮಾಡುವುದಕ್ಕಾಗಲಿ ಇಂಗ್ಲಿಷ್ ಬೇಕೆಬೇಕು. ಇಷ್ಟೊಂದು ಅವಕಾಶ ಕನ್ನಡದಲ್ಲಿ ಇಲ್ಲ~ ಎಂದರು.`ನಾವು ಮಧ್ಯಮ ಕುಟುಂಬದವರು. ನಮ್ಮ ಬಳಿ ಹಿರಿಯರ ಆಸ್ತಿ ಇಲ್ಲ. ಬಹುಶಃ ನಮ್ಮ ಮಕ್ಕಳಿಗೂ ನಾವು ಆಸ್ತಿ ಮಾಡಿಕೊಡಲು ಸಾಧ್ಯವಾಗುವುದಿಲ್ಲವೇನೋ, ಆದರೆ, ಉತ್ತಮ ಶಿಕ್ಷಣ ನೀಡಲು ಸಾಧ್ಯ ವಿದೆ. ಇದ ನ್ನೊಂ ದಾದರೂ ನಾವು ಮಾಡಲೇಬೇಕು. ಇಲ್ಲದಿದ್ದರೆ ಮಕ್ಕಳು ನಮ್ಮನ್ನು ಕ್ಷಮಿಸಲ್ಲ~ ಎಂದು ಭಾವುಕರಾಗಿ ನುಡಿದರು.`ಈ ಸ್ಥಿತಿಗೆ ಸರ್ಕಾರವೇ ಕಾರಣ~

ಗ್ರಾಮೀಣ ಪ್ರದೇಶಗಳಲ್ಲಿಯೂ ಖಾಸಗಿ ಶಾಲೆಗಳನ್ನು ತೆರೆಯಲು ಸರ್ಕಾರ ಅನುವು ಮಾಡಿಕೊಡುತ್ತಿರುವುದ ರಿಂದಲೇ ಸರ್ಕಾರಿ ಶಾಲೆಗಳಿಗೆ ಈ ದುಸ್ಥಿತಿ ಬಂದಿದೆ ಎಂದು ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.ಒಂದಾನೊಂದು ಕಾಲದಲ್ಲಿ ಮಕ್ಕಳು ಶಾಲೆಗೆ ಬರುತ್ತಿರಲಿಲ್ಲ. ಅಂತಹ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರೇ ಪಾಲಕರನ್ನು ಓಲೈಸಿ, ಮಕ್ಕಳನ್ನು ಕರೆತಂದು ಶಿಕ್ಷಣ ನೀಡು ತ್ತಿದ್ದರು. ಈಗ ಅಂತಹ ಸ್ಥಳಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ ಮಕ್ಕಳು ಮತ್ತೆ ಶಿಕ್ಷಣದಿಂದ ವಿಮುಖರಾಗುವ ಸಾಧ್ಯತೆ ಇದೆ. ಇದನ್ನು ಸರ್ಕಾರ ಗಮನಿಸಿ, ನಿರ್ಧಾರ ಕೈಗೊಳ್ಳಬೇಕು ಎಂದರು.ಒಂದು ಶಾಲೆಯಲ್ಲಿ ಮತ್ತೊಂದು ಶಾಲೆಯನ್ನು ವಿಲೀನಗೊಳಿಸುತ್ತ ಹೋದರೆ, ಮುಂದಿನ ದಿನಗಳಲ್ಲಿ ವಿಲೀನಗೊಂಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಯಿತು ಎಂದು ಮತ್ತೊಂದು ವಿಲೀನ ಶಾಲೆಯಲ್ಲಿ ವಿಲೀನಗೊಳಿಸುತ್ತ ಮುನ್ನೆಡೆದರೆ ಮುಂದೊಂದು ದಿನ ಬಹುತೇಕ ಎಲ್ಲ ಶಾಲೆಗಳಿಗೆ ಬೀಗ ಹಾಕುವ ಪರಿಸ್ಥಿತಿ ಉದ್ಭವಿಸಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry