ಕಾಡಿಲ್ಲದ ನಾಡಿಗೆ ಬಂದು ಪ್ರಾಣ ಕಳೆದುಕೊಂಡಿತು!

7

ಕಾಡಿಲ್ಲದ ನಾಡಿಗೆ ಬಂದು ಪ್ರಾಣ ಕಳೆದುಕೊಂಡಿತು!

Published:
Updated:
ಕಾಡಿಲ್ಲದ ನಾಡಿಗೆ ಬಂದು ಪ್ರಾಣ ಕಳೆದುಕೊಂಡಿತು!

ವಿಜಾಪುರ: ಕಾಡೇ ಇಲ್ಲದ ಬಯಲು ಸೀಮೆಯ ಬರದ ನಾಡಿಗೆ ಬಂದ ಕಾಡು ಕೋಣವೊಂದು ಶವವಾಗಿ `ಕಾಡು ಸೇರಿದ~ ಘಟನೆ ಶುಕ್ರವಾರ ನಡೆಯಿತು.ಕಾಡು ಕೋಣ ಬಂದಿದ್ದಾದರೂ ಹೇಗೆ? ಎಂಬ ಜಿಜ್ಞಾಸೆಯ ಮಧ್ಯೆಯೇ ಆರಂಭಗೊಂಡ `ಆಪರೇಷನ್ ಕಾಡು ಕೋಣ~ ಅಪಹಾಸ್ಯಕ್ಕೀಡಾಯಿತು. ಕಾಡುಕೋಣದ ಸಾವಿನೊಂದಿಗೆ ದುರಂತ ಅಂತ್ಯ ಕಂಡಿತು.ಶುಕ್ರವಾರ ಬೆಳಿಗ್ಗೆ ಗೋಲಗುಮ್ಮಟ ಆವರಣಕ್ಕೆ ನುಗ್ಗಿದ್ದ ಕಾಡು ಕೋಣ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ ಸರ್ಕಾರಿ ಇಲಾಖೆಯವರ ಬಳಿ ಪೊಲೀಸರ ಲಾಠಿ ಹೊರತು ಪಡಿಸಿ ಬೇರಾವ ಉಪಕರಣಗಳೂ ಇರಲಿಲ್ಲ!ಸೊಕ್ಕಿದ್ದ ಕಾಡು ಕೋಣ ಸೆರೆ ಹಿಡಿಯಲು ಹಂದಿ ಹಿಡಿಯಲು ಬಳಸುವ ಬಲೆಯನ್ನು ಹಿಡಿದುಕೊಂಡು ಅದರ ಹಿಂದೆ ಓಡುತ್ತಿದ್ದ ದೃಶ್ಯ ಕಂಡು   ಅಲ್ಲಿ ನೆರೆದಿದ್ದ ಜನ ಮುಸಿ ಮುಸಿ ನಕ್ಕರು. `ಆಪತ್ತು ಎದುರಿಸಲು ನಮ್ಮ ಜಿಲ್ಲಾ ಆಡಳಿತ ಎಷ್ಟೆಲ್ಲ ಸನ್ನದ್ಧವಾಗಿದೆ ನೋಡಿ~ ಎಂದು ಆಡಿಕೊಂಡರು.`ಕೋಣ ಬಂದಿದ್ದಕ್ಕೇ ಇಷ್ಟೆಲ್ಲ ರಾದ್ಧಾಂತವಾಗಿದೆ. ಆಕಸ್ಮಿಕವಾಗಿ ಸರ್ಕಸ್‌ಗೆ ಬರುವ ಹುಲಿ, ಸಿಂಹದಂಥ ಪ್ರಾಣಿಗಳು ತಪ್ಪಿಸಿಕೊಂಡು ನಗರಕ್ಕೆ ನುಗ್ಗಿದರೆ ಏನು ಗತಿ?~ ಎಂದು ಆತಂಕ ವ್ಯಕ್ತಪಡಿಸಿದರು.`ಕಾಡು ಕೋಣ ನಗರದಲ್ಲಿ ಪ್ರತ್ಯಕ್ಷವಾಗಿದ್ದು ಶುಕ್ರವಾರ ಬೆಳಿಗ್ಗೆ 6 ಗಂಟೆಗೆ. ಆದರೆ, ಕಾರ್ಯಾಚರಣೆ ಆರಂಭಗೊಂಡಿದ್ದ 9 ಗಂಟೆಯ ನಂತರ. ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಕಾರ್ಯಾಚರಣೆ ನಡೆಸುವುದನ್ನು ಬಿಟ್ಟು ಕ್ಯಾಮೆರಾ ಹಿಡಿದು ಫೋಟೊ ಕ್ಲಿಕ್ಕಿಸುತ್ತಿದ್ದರು~ ಎಂದು ಅಲ್ಲಿದ್ದ ಸಾರ್ವಜನಿಕರು ದೂರಿದರು.

ಗೋಲಗುಮ್ಮಟಕ್ಕೆ ಲಗ್ಗೆ: ಕಾಡು ಕೋಣ ನೋಡಲಿಕ್ಕಾಗಿ ಗೋಲಗುಮ್ಮಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಧಾವಿಸಿದರು. ಅವರೊಟ್ಟಿಗೆ ಪ್ರವಾಸಿಗರೂ ಒಳಗೆ ಆಗಮಿಸುತ್ತಿದ್ದರು. ಹೀಗಾಗಿ ಕಾರ್ಯಾಚರಣೆಯ ಸ್ಥಳದಲ್ಲಿ ಜನಜಾತ್ರೆಯೇ ನೆರೆದಿತ್ತು. ಕೋಣದ ಹಿಂದೆ ಹಿಂಡು ಹಿಂಡಾಗಿ ಓಡುವುದು, ಅದು ತಮ್ಮತ್ತ ಮುಖ ಮಾಡಿದರೆ ದಿಕ್ಕಾಪಾಲಾಗಿ ಚದುರುವುದು ನಡದೇ ಇತ್ತು.ಈ ಕಾರ್ಯಾಚರಣೆಯ ಪರಿ ಕಂಡು ಬೇಸರ ವ್ಯಕ್ತಪಡಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಕಾಶಿನಾಥ ಪವಾರ, ಜನರನ್ನು ನಿಯಂತ್ರಿಸುವಂತೆ ಪೊಲೀಸರಿಗೆ ಸೂಚಿಸಿದರು.ಕೋಣಕ್ಕೂ ನಿತ್ರಾಣ: ಬೆಳಿಗ್ಗೆಯಿಂದ ಜನ ಬೆನ್ನುಬಿದ್ದಿದ್ದರಿಂದ ಹೆದರಿದ ಕಾಡು ಕೋಣ, ಓಡಾಡಿ ನಿತ್ರಾಣಗೊಂಡಿತು. ಕಾರ್ಯಾಚರಣೆ ಸಂದರ್ಭದಲ್ಲಿ ನಾಲ್ಕಾರು ಬಾರಿ ಕುಳಿತು (ಮಲಗಿ) ಕೊಂಡಿತು. ನಂತರ ರೊಚ್ಚಿಗೆದ್ದು ಓಡುತ್ತಿತ್ತು. ಹಂದಿ ಹಿಡಿಯುವ ಬಲೆ ಹಾಕಿದಾಗ ಆ ಬಲೆಯನ್ನೇ ಹರಿದುಕೊಂಡು ಹೊರ ಬರುತ್ತಿತ್ತು.ಹಿಡಿದದ್ದು ನಾವು: `ನಿತ್ಯವೂ ಹಂದಿ ಹಿಡಿಯುವುದು ನಮಗೆ ರೂಢಿ. ಸುಮಾರು 60 ಜನ ಯುವಕರು ಸೇರಿಕೊಂಡು ಎರಡೂವರೆ ಗಂಟೆ ಸೆಣಸಿ ಈ ಕೋಣ ಸೆರೆ ಹಿಡಿದೆವು. ಅರಣ್ಯ ಇಲಾಖೆಯವರು ಏನೂ ಮಾಡಲಿಲ್ಲ. ಕೋಣದಿಂದ ನಾವು ಮೂರು ಮೀಟರ್ ಅಂತರದಲ್ಲಿದ್ದರೆ, ಅವರು ನೂರು ಮೀಟರ್ ಆಚೆ ಇದ್ದರು~ ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹನುಮಂತ ಬಸಪ್ಪ ಮುಂಗಲಿ ಹೇಳಿದ.`ಕಾರ್ಯಾಚರಣೆಯ ಸಂದರ್ಭದಲ್ಲಿ ಬೆಲೆ ಬಾಳುವ ಮೂರು ಬಲೆ ಹರಿದಿವೆ. ನಾನೂ ಸೇರಿದಂತೆ ಮೂವರು ಗಾಯಗೊಂಡಿದ್ದೇವೆ. ನಮ್ಮ ಹಂದಿಗಳು ಸಾಮಾನ್ಯವಾಗಿ 4ರಿಂದ 5 ಕ್ವಿಂಟಲ್ ಭಾರ ಇದ್ದರೆ, ಈ ಕೋಣ 12ರಿಂದ 13 ಕ್ವಿಂಟಲ್ ಭಾರವಿದೆ~ ಎಂದು ಆತ ಹೇಳಿದ.ಇಲ್ಲದ ವಾಹನ: ಕಾಡು ಕೋಣ ಸೆರೆ ಸಿಕ್ಕರೂ ಅದನ್ನು ಸಾಗಿಸಲು ತಕ್ಷಣಕ್ಕೆ ವಾಹನದ ವ್ಯವಸ್ಥೆ ಇರಲಿಲ್ಲ. `ನಮ್ಮ ಲಾರಿಯನ್ನೇ ತರಿಸುತ್ತಿದ್ದೇವೆ. ಇನ್ನೇನು ಅರ್ಧ ಗಂಟೆಯಲ್ಲಿ ಬಂದು ಬಿಡುತ್ತೆ~ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಪಾಟೀಲ ಹೇಳುತ್ತಿದ್ದರು.ಸೆರೆ ಸಿಕ್ಕ ನಂತರ ಅರಿವಳಿಕೆ ಚುಚ್ಚುಮದ್ದು ನೀಡಲಾಯಿತು. ಪ್ರಜ್ಞೆ ಕಳೆದುಕೊಂಡ ಕಾಡು ಕೋಣದ ಕಾಲುಗಳನ್ನು ಹಗ್ಗದಿಂದ ಕಟ್ಟಲಾಯಿತು. ಅಷ್ಟೊತ್ತಿಗಾಗಲೆ ಹಿರಿಯ ಅಧಿಕಾರಿಗಳು ಅದರ ಸುತ್ತ ನೆರೆದರು.ಹತ್ತು ನಿಮಿಷದ ನಂತರ ಆ ಕೋಣ ಕೊಸರಾಡಲಾರಂಭಿಸಿತು. ಇದರಿಂದ ಬೆದರಿದ ಒಬ್ಬ ಪೊಲೀಸ್ ಅಧಿಕಾರಿಯೂ ಸೇರಿದಂತೆ ಕೆಲ ಅಧಿಕಾರಿಗಳು ಅಲ್ಲಿಂದ ಓಡಿದರು!ಸೆರೆಸಿಕ್ಕ ಕಾಡು ಕೋಣ ಮರಳಿ ಕಾಡು ಸೇರಲಿಲ್ಲ. ದಾಂಡೇಲಿ ಅಭಯಾರಣ್ಯಕ್ಕೆ ಸಾಗಿಸಲು ವಾಹನದಲ್ಲಿ ಹಾಕಿಕೊಂಡು ಗೋಲಗುಮ್ಮಟ ಆವರಣ ದಾಟುವಷ್ಟರಲ್ಲಿ ಅದು ಪ್ರಾಣ ಬಿಟ್ಟಿತು. ಓಡೋಡಿ ಕಾಡು ಸೇರಬೇಕಿದ್ದ ಆ ಪ್ರಾಣಿ, ಮಮದಾಪುರದ ಕಾಡಿನಲ್ಲಿ ಪಂಚಭೂತಗಳಲ್ಲಿ ಲೀನವಾಗಬೇಕಾಯಿತು!`ಕಾರ್ಯಾಚರಣೆಯ ವಿಧಾನವೇ ಅದರ ಸಾವಿಗೆ ಕಾರಣವಾಯಿತು~ ಎಂದು ಅಲ್ಲಿದ್ದವರು ದೂರಲಾರಂಭಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕಾಶಿನಾಥ ಪವಾರ, ತಹಶೀಲ್ದಾರ ರಾಜಶ್ರೀ ಜೈನಾಪುರ, ಎಎಸ್‌ಪಿ ಅಜಯ್ ಹಿಲೋರಿ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry