ಭಾನುವಾರ, ಜೂಲೈ 12, 2020
29 °C

ಕಾಡುತ್ತಿರುವ ಮಧ್ಯಮ ಕ್ರಮಾಂಕದ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಂಚೂರಿಯನ್: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಮಟ್ಟದಲ್ಲಿ ಆಡುತ್ತಿಲ್ಲ ಎನ್ನುವುದೇ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೆ ಚಿಂತೆಯಾಗಿ ಕಾಡುತ್ತಿದೆ. ಸ್ವತಃ ದೋನಿ ಕೂಡ ರನ್ ಮೊತ್ತವನ್ನು ಹೆಚ್ಚಿಸಲು ತಂಡಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತಿಲ್ಲ. ನಾಲ್ಕನೇ ಏಕದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮಿಂಚಿದರು. ಅವರ ಆಟವನ್ನು ಹೊರತುಪಡಿಸಿದರೆ, ಭಾರತದ ಬ್ಯಾಟಿಂಗ್ ಅಷ್ಟೇನು ಸತ್ವಯುತವಾಗಿರಲಿಲ್ಲ. ಆದ್ದರಿಂದಲೇ ‘ಮಹಿ’ ಸರದಿಯ ನಡುವಣ ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿ ಅರಿತು ಆಡಬೇಕೆಂದು ಉಪದೇಶ ನೀಡಿದ್ದಾರೆ. ಅದು ತಮಗೂ ಅನ್ವಯವಾಗುತ್ತದೆಂದು ಹೇಳುವುದನ್ನೂ ಅವರು ಮರೆತಿಲ್ಲ.‘ಕೊಹ್ಲಿ ಅತ್ಯಂತ ಉತ್ತಮವಾದ ಬ್ಯಾಟಿಂಗ್ ಪ್ರದರ್ಶಿಸಿದರು. ಉಳಿದವರು ಸಂತಸ ನೀಡುವಂತೆ ಬ್ಯಾಟ್ ಬೀಸಲಿಲ್ಲ’ ಎಂದು ದೋನಿ ಅವರು ಶುಕ್ರವಾರ ರಾತ್ರಿ ಸುದ್ದಿಗಾರರಿಗೆ ತಿಳಿಸಿದರು. ಮಳೆಯ ಕಾರಣ ಅಡ್ಡಿಯಾದ ಪಂದ್ಯದಲ್ಲಿ ಡಕ್ವರ್ಥ್-ಲೂಯಿಸ್ ನಿಯಮದಲ್ಲಿ ಭಾರತವು 48 ರನ್‌ಗಳ ಅಂತರದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಶರಣಾಗಿದ್ದನ್ನು ಅವರು ‘ಆಘಾತಕಾರಿ’ ಎಂದು ಹೇಳಿದರು.ದಕ್ಷಿಣ ಆಫ್ರಿಕಾ ತಂಡವನ್ನು ಇನ್ನೂರರ ಗಡಿಯಲ್ಲಿ ಕಟ್ಟಿಹಾಕುವುದು ಸಾಧ್ಯವಿತ್ತು ಎನ್ನುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ‘ನಮ್ಮ ಬೌಲರ್‌ಗಳು ಉತ್ತಮ ಪ್ರಯತ್ನ ಮಾಡಿದರು. ಒಂದಾದ ಮೇಲೆ ಇನ್ನೊಂದು ವಿಕೆಟ್ ಬೇಗ ಪಡೆಯುವುದು ಸಾಧ್ಯವಾಗಬೇಕೆಂದು ನಾಯಕ ಬಯಸುವುದು ಸಹಜ. ಆದರೆ ಎಲ್ಲ ಸಂದರ್ಭದಲ್ಲಿ ನಿರೀಕ್ಷಿಸಿದಂತೆ ನಡೆಯುವುದಿಲ್ಲ’ ಎಂದು ನುಡಿದರು.‘ಪಂದ್ಯ ಪೂರ್ಣವಾಗಿ ನಡೆದಿದ್ದರೆ, ನಮ್ಮ ಗೆಲುವಿನ ಸಾಧ್ಯತೆ ಇತ್ತು. ಆದರೆ ಡಕ್ವರ್ಥ್-ಲೂಯಿಸ್ ನಿಯಮ ಜಾರಿ ಆದರೆ ಆಗ ಅಪಾಯ ಎದುರಾಗುವುದು ಗುರಿಯನ್ನು ಬೆನ್ನಟ್ಟುವ ತಂಡಕ್ಕೆ. ಇದಕ್ಕೆ ಇತಿಹಾಸವೇ ಸಾಕ್ಷಿಯಿದೆ. ಇಲ್ಲಿಯೂ ಹಾಗೆಯೇ ಆಯಿತು’ ಎಂದ ಅವರು ‘ಈ ನಿಯಮವು ಒಮ್ಮೆ ಇನಿಂಗ್ಸ್‌ನ ಕೆಲವು ಓವರುಗಳು ಮುಗಿದ ನಂತರ ಜಾರಿಗೆ ಬಂದರೆ ಅದು ಗುರಿಯ ಕಡೆಗೆ ಸಾಗುವ ಹಾದಿಯನ್ನು ಸವಾಲಿನದ್ದಾಗಿಸುತ್ತದೆ’ ಎಂದರು. ‘ಭಾನುವಾರದ ಪಂದ್ಯ  ಕ್ರಿಕೆಟ್ ಪ್ರಿಯರಿಗೆ ರೋಚಕ ಅನುಭವ ನೀಡಲಿದೆ. ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವ ತಂಡವು ಯಶಸ್ವಿಯಾಗುತ್ತದೆ’ ಎಂದು ದೋನಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.