ಮಂಗಳವಾರ, ಏಪ್ರಿಲ್ 13, 2021
23 °C

ಕಾಡುತ್ತಿರುವ ಹತ್ತು ಪೈಸೆಯ ಹೊಳಪು...

ನಿರೂಪಣೆ: ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಕಾಡುತ್ತಿರುವ ಹತ್ತು ಪೈಸೆಯ ಹೊಳಪು...

ಅಂದು ಬೆಂಗಳೂರಿನ ಮೈಸೂರು ಸರ್ಕಲ್‌ನತ್ತ ನಡೆದುಕೊಂಡು ಹೋಗುತ್ತಿದ್ದಾಗ 10-20 ಪೈಸೆಯ ಹಲವು ನಾಣ್ಯಗಳು ರಸ್ತೆಯಲ್ಲಿ ಸಿಕ್ಕಿದ್ದವು. ಹಾಗೆ ಒಟ್ಟುಗೂಡಿದ್ದು ಎರಡೂವರೆ ರೂಪಾಯಿ. ಅದರಲ್ಲಿ ಕಡ್ಲೆಪುರಿ ತೆಗೆದುಕೊಂಡು ಅವತ್ತಿನ ಹೊಟ್ಟೆ ತುಂಬಿಸಿಕೊಂಡು ವಾಪಸು ಮೆಜೆಸ್ಟಿಕ್‌ನ ಹಾದಿ ಹಿಡಿದಿದ್ದೆ. ಬೆಂಗಳೂರಿಗೆ ಬಂದ ಆರಂಭದ ದಿನಗಳವು. ಮೆಜೆಸ್ಟಿಕ್‌ನಲ್ಲಿಯೇ ನಿದ್ದೆ. ಪೊಲೀಸಿನವರ ಹೊಡೆತ ತಪ್ಪಿಸಿಕೊಳ್ಳಲು ಜನರ ಮಧ್ಯೆ ತೂರಿಕೊಂಡು ಮಲಗುತ್ತಿದ್ದೆ.ಫುಟ್‌ಪಾತ್‌ನಲ್ಲಿ ಎಲ್ಲೋ ಊಟ. ಸ್ನೇಹಕ್ಕೆ ಕಟ್ಟುಬಿದ್ದಿದ್ದರ ಪ್ರತಿಫಲವದು. ಮನೆಯಲ್ಲಿ ದುಡ್ಡು ದುರ್ಬಳಕೆ ಮಾಡಿಕೊಂಡಿದ್ದ ಶ್ರೀಮಂತ ಕುಟುಂಬದ ಗೆಳೆಯನೊಬ್ಬ ಅದನ್ನು ನನ್ನ ಬಳಿ ಹೇಳಿಕೊಂಡು ಬೆಂಗಳೂರಿಗೆ ಓಡಿಹೋಗುತ್ತೇನೆ ಎಂದು ಹೇಳಿದ. ಗೆಳೆಯನೆಂದರೆ ಬಿಟ್ಟುಕೊಡಲು ಸಾಧ್ಯವೇ ಎಂದು ನಾನೂ ಅವನ ಜೊತೆ ಹೊರಟವನು. ಕೈಯಲ್ಲಿದ್ದ ಹಣ ಖರ್ಚಾದ ಬಳಿಕ `ಇಲ್ಲೇ ಇರು ಈಗ ಬರುತ್ತೇನೆ' ಎಂದು ಹೇಳಿ ಹೋದ ಆತ ಮತ್ತೆ ಬರಲೇ ಇಲ್ಲ.ಊರಿಗೆ ಮರಳಿ ಹೋಗೋಣವೆಂದರೆ ಮರ್ಯಾದೆ ಪ್ರಶ್ನೆ. ನನ್ನಿಂದಲೇ ಅವನು ಮನೆಬಿಟ್ಟು ಹೋಗಿದ್ದು ಎಂಬ ವದಂತಿ ಹಬ್ಬಿ ನನ್ನ ಮನೆಯವರು ಅವಮಾನ ಎದುರಿಸುವಂತಾಗಿತ್ತು. ಮೊದಲೇ ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದ್ದ ಮನೆಯ ಎಲ್ಲರನ್ನೂ ನೋಡಿಕೊಳ್ಳುವ ಜವಾಬ್ದಾರಿಯೂ ನನ್ನ ಮೇಲಿತ್ತು. ಆಗಲೇ ದೃಢವಾಗಿ ನಿರ್ಧರಿಸಿದ್ದು, ಇಲ್ಲಿಯೇ ಇದ್ದು ದುಡಿಯುತ್ತೇನೆ. ವಾಪಸು ಹೋಗುವುದಿಲ್ಲ.ಊರಿನ ಕೆಲ ಗೆಳೆಯರು ಇಲ್ಲಿದ್ದರಾದರೂ ಅವರಿಂದ ಸಿಕ್ಕಿದ್ದು ತಿರಸ್ಕಾರ. ವಸ್ತ್ರವಿನ್ಯಾಸಕ ಗಂಡಸಿ ನಾಗರಾಜ್ ನಮ್ಮೂರಿನವರು. ಗಾಂಧಿನಗರದಲ್ಲಿ ಅಲೆದಾಡುತ್ತಿದ್ದವನಿಗೆ ಕೊನೆಗೂ ಒಂದು ದಿನ ಅವರು ಸಿಕ್ಕರು. `ಸೂಪರ್ ನನ್ ಮಗ' ಚಿತ್ರಕ್ಕೆ ತರಿಸಿದ ಬಟ್ಟೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಸಿಕ್ಕಿತು. ಲಾಡ್ಜ್ ಒಂದರ ರೂಮ್‌ನಲ್ಲಿ ನೆರಳನ್ನು ಒದಗಿಸಿದರು. ದಿನಕ್ಕೆ ಹತ್ತು ರೂಪಾಯಿ ಪಗಾರ. ಆ ದುಡ್ಡಲ್ಲಿ ಬೆಳಿಗ್ಗೆ ಇಡ್ಲಿವಡೆ, ಒಂದು ಕಥೆಪುಸ್ತಕ, ಮತ್ತೆ ರಾತ್ರಿ ಇಡ್ಲಿವಡೆ.ಕೆಲವೊಮ್ಮೆ ಬರಿ ನೀರೇ ಹೊಟ್ಟೆ ತುಂಬಿಸುತ್ತಿತ್ತು. ಆಗ ನಿಜಕ್ಕೂ ಇದ್ದದ್ದು ನಟನಾಗುವ ಬಯಕೆ. ನಂತರ ಬೆಳೆದ ಹಾದಿಯೇ ಬೇರೆ.ಹಾಸನದ ಜೋಡಿಕೃಷ್ಣಾಪುರ ನನ್ನ ಹುಟ್ಟೂರು. ನಾಲ್ಕನೇ ತರಗತಿವರೆಗೆ ಅಲ್ಲಿಯೇ ಓದಿದ್ದು. ತಂದೆ ಅಕ್ಕಸಾಲಿಗರು. ಬಳಿಕ ತಿಪಟೂರಿಗೆ ನಮ್ಮ ಕುಟುಂಬ ಸ್ಥಳಾಂತರಗೊಂಡಿತು. ಹೈಸ್ಕೂಲು ದಿನಗಳಲ್ಲಿದ್ದಾಗ ತಂದೆ ಅನಾರೋಗ್ಯಕ್ಕೆ ತುತ್ತಾದರು.ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಜಮೀನ್ದಾರರ ಕುಟುಂಬ ನಮ್ಮದು. ಕೆ.ಜಿ.ಗಟ್ಟಲೆ ಚಿನ್ನ ನೋಡುತ್ತಿದ್ದವರು. ನಂತರದ ದಿನಗಳಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ. ನಾನು ಮತ್ತು ಅಣ್ಣ ತಂದೆಯ ಸ್ನೇಹಿತರ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದೆವು. ಚಿಕ್ಕಂದಿನಲ್ಲಿ ನಾಟಕಗಳಲ್ಲಿ ನಟಿಸಿದ್ದ ನನಗೆ ಸಿನಿಮಾ ಹುಚ್ಚು.ಆಕಷ್ಟದಲ್ಲಿಯೂ ಪ್ರತಿ ರಾತ್ರಿ ಸೆಕೆಂಡ್ ಷೋ ನೋಡುತ್ತಿದ್ದೆ. ಚಿತ್ರಕಲೆಯ ಸೆಳೆತವೂ ಇತ್ತು. ಎಸ್‌ಎಸ್‌ಎಲ್‌ಸಿಗೆ ಓದು ಸಾಕಾಯಿತು. ಸೈಕಲ್ ಶಾಪ್, ಅಲ್ಲಿ ಇಲ್ಲಿ ಕೆಲಸ ಮಾಡಿದರೂ ಬದುಕು ಹದಗೆಟ್ಟಿತ್ತು. ಆಗಲೇ ಗೆಳೆಯನ ಸಹವಾಸ ಬೆಂಗಳೂರಿಗೆ ಕರೆತಂದದ್ದು. ಆಗ ನನಗೆ ಹದಿನೆಂಟರ ಹರೆಯ.ಈಗ ನಾನು ಹೇಗೋ ಬೆಳೆದಿರಬಹುದು. ಹಳತೆಲ್ಲವೂ ಭ್ರಮೆ ಎಂದೆನಿಸಬಹುದು. ಅದಕ್ಕೆ ಕಾರಣ ನಟ ಜಗ್ಗೇಶ್. `ಸೂಪರ್ ನನ್ ಮಗ' ಚಿತ್ರೀಕರಣದ ವೇಳೆ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರೂ ಸಂಘದ ಸದಸ್ಯತ್ವದ ಕಾರ್ಡ್ ಇಲ್ಲದಿದ್ದರಿಂದ ಕೊಟ್ಟ ಅನ್ನದ ತಟ್ಟೆಯನ್ನು ಹಾಗೆಯೇ ಕಸಿದುಕೊಂಡಿದ್ದರು. ಅದನ್ನೆಲ್ಲವನ್ನೂ ಜಗ್ಗೇಶ್ ಗಮನಿಸಿದ್ದರು.ಮೇಕಪ್ ಮಾಡುವುದನ್ನು ತದೇಕಚಿತ್ತದಿಂದ ನೋಡುತ್ತಿದ್ದ ನನ್ನನ್ನು ಕಂಡ ಜಗ್ಗೇಶ್, ಬದುಕಿನ ದಿಕ್ಕು ಬದಲಿಸಿದರು. ಜಗ್ಗೇಶ್‌ರ ಖಾಸಗಿ ಮೇಕಪ್‌ಮ್ಯಾನ್ ಮಾದೇಗೌಡರ ಸಹಾಯಕನಾಗುವ ಅದೃಷ್ಟ ಲಭಿಸಿತು. ನನಗೆ ಇರಲೊಂದು ಜಾಗವನ್ನೂ ಜಗ್ಗೇಶ್ ಕೊಟ್ಟರು. ಅವರು ಎಲ್ಲಿ ಹೋದರೂ ಅವರ ಜೊತೆ ನಾನು. ಚಿತ್ರರಂಗದ ಪರಿಚಯ ಮಾಡಿಸಿದರು.ಶಿಸ್ತು, ಗುರಿ, ಬದುಕಿನ ಪಾಠ ಎಲ್ಲವೂ ಅವರಿಂದ ಬೋಧನೆಯಾಯಿತು. ಮನೆಯಲ್ಲಿ ಅವರ ಮಗನಂತೆ, ಹೊರಗೆ ತಮ್ಮನಂತೆ. ಅಷ್ಟರಲ್ಲಿ ನನ್ನ ಕುಟುಂಬವೂ ಬೆಂಗಳೂರಿಗೆ ಬಂದಿತ್ತು. ಎಲ್ಲರ ಹೊಟ್ಟೆಯನ್ನೂ ತುಂಬಿಸುವ ಹೊಣೆ ನನ್ನ ಮೇಲಿತ್ತು. `ಎಷ್ಟು ದಿನ ನನ್ನ ಜೊತೆ ಇರುತ್ತೀಯಾ? ಹೀಗೆ ಇದ್ದರೆ ಬೆಳೆಯೊಲ್ಲ. ಬೇರೆ ದಾರಿ ನೋಡು. ನಾನು ಸಹಾಯ ಮಾಡುತ್ತೇನೆ' ಎಂದರು ಜಗ್ಗೇಶ್. ನನ್ನ ಕಾಲ ಮೇಲೆ ನಾನು ನಿಲ್ಲುವಂತಾಗಬೇಕೆಂಬ ಉದ್ದೇಶ ಅವರಲ್ಲಿತ್ತು.ಮತ್ತೆ ಕೆಲಸದ ಹುಡುಕಾಟ ಶುರು. ಹಣ ಒಟ್ಟುಮಾಡಿ ಪ್ರೀತಿಯಿಂದ ಕೊಂಡಿದ್ದ ಸೈಕಲ್ ಅನ್ನು ಅಡವಿಡುವ ಪರಿಸ್ಥಿತಿ ಉಂಟಾಯಿತು. ಮುಂದೆ ಅದನ್ನು ಬಿಡಿಸಿಕೊಳ್ಳಲೂ ಆಗಲಿಲ್ಲ. ಕೆಲದಿನಗಳ ಅಲೆದಾಟದ ಬಳಿಕ ಮೇಕಪ್‌ಮ್ಯಾನ್ ಮೈಸೂರು ವೆಂಕಟೇಶ್ ತಮ್ಮ ಜೊತೆ ಸೇರಿಸಿಕೊಂಡರು. ಅಲ್ಲಿ ಸಂಬಳದ ಜೊತೆ ಮೊದಲ ಬಾರಿಗೆ ಟಿಪ್ಸ್ ಕೂಡ ಸಿಕ್ಕಿತ್ತು. ಆಗಲೇ ಚಲನಚಿತ್ರ ವರ್ಣಾಲಂಕಾರ ಸಂಘದ ಸದಸ್ಯನೂ ಆಗಿದ್ದೆ. ನಟಿ ಅಂಜಲಿ, ಕಲ್ಯಾಣ್‌ಕುಮಾರ್ ಖಾಸಗಿ ಮೇಕಪ್‌ಮ್ಯಾನ್ ಆಗಿ ಬರುವಂತೆ ಆಹ್ವಾನವಿತ್ತರು. ಆ ಸಂದರ್ಭದಲ್ಲಿ ಮದ್ರಾಸ್‌ನಲ್ಲಿ ಗಲಾಟೆ ಆಗುತ್ತಿದ್ದರಿಂದ ಹೋಗಲಿಲ್ಲ.ಬಳಿಕ ಸಿದ್ದೇಶಣ್ಣ ಅವರ ಸಹಾಯಕನಾಗಿ ಸೇರಿಕೊಂಡೆ. ಉಪೇಂದ್ರರ `ಎ' ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ. ನಂತರ `ಉಪೇಂದ್ರ' ಚಿತ್ರದಲ್ಲೂ ನನಗೆ ಮುಕ್ತ ಅವಕಾಶ ಸಿಕ್ಕಿತ್ತು. ಹೀಗೆ ಕಷ್ಟಕಾಲದಲ್ಲಿ ಕೈಹಿಡಿದವರು ಅನೇಕರು. ಸಿನಿಮಾ ನಂಟು ಸಾಗುತ್ತಿದ್ದಂತೆ, ಧಾರಾವಾಹಿಯೂ ಸೆಳೆಯಿತು. ಬಿ. ಸುರೇಶರ `ಸಾಧನೆ' ಧಾರಾವಾಹಿ ಬಳಗ ಸೇರಿದ್ದು ಬದುಕಿಗೆ ಮತ್ತೊಂದು ತಿರುವು ನೀಡಿದ ಸಂದರ್ಭ. ನಿರ್ದೇಶಕರಾದ ಸೂರಿ ಮತ್ತು ಯೋಗರಾಜ್ ಭಟ್ಟರು ಸಿಕ್ಕಿದ್ದು ಅಲ್ಲಿಯೇ.ಸೂರಿ ಆಗ ಕಲಾ ನಿರ್ದೇಶಕ, ಭಟ್ಟರದು ಬರವಣಿಗೆಯ ಹೊಣೆ. ನಾನು ಮತ್ತು ಸೂರಿ ಬೆಳಿಗ್ಗೆ ಐದು ಗಂಟೆಗೇ ಸೆಟ್‌ನಲ್ಲಿ ಜೊತೆಗೂಡುತ್ತಿದ್ದರಿಂದ ನಾವಿಬ್ಬರೂ ಗಳಸ್ಯ ಕಂಠಸ್ಯ. ಮಾತ್ರವಲ್ಲ, ಸೂರಿಯನ್ನು ನೋಡಿದಾಗಲೆಲ್ಲಾ ತೀರಿಹೋದ ನನ್ನ ತಮ್ಮ ನೆನಪಿಗೆ ಬರುತ್ತಾನೆ. ಆಗ ವೇತನ ಹೆಚ್ಚಿತ್ತು. ಆರ್ಥಿಕ ಪರಿಸ್ಥಿತಿಯೂ ತಕ್ಕಮಟ್ಟಿಗೆ ಸುಧಾರಿಸತೊಡಗಿತ್ತು. ಮುಂದೆ `ಗರ್ವ' ಧಾರಾವಾಹಿಯಲ್ಲಿ ಅನಂತ್‌ನಾಗ್ ಅವರಿಗೆ ಬಣ್ಣ ಹಚ್ಚುವ ಅವಕಾಶ.ನನ್ನ ಬದುಕಿನಲ್ಲಿ ಮರೆಯಲಾಗದ ಘಟನೆಯೆಂದರೆ ಪ್ರಸಾದನ ಕಲೆಯ ಭೀಷ್ಮನಿಗೇ ಬಣ್ಣಹಚ್ಚಿದ ಪ್ರಸಂಗ. ಮೇಕಪ್‌ನಾಣಿ ದಂಪತಿ ಒಂದು ಟೀವಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಆಗ ಅವರಿಗೆ ಮೇಕಪ್ ಮಾಡುವ ಸುಯೋಗ ನನಗೆ ಲಭಿಸಿತ್ತು.ಸೂರಿ ಮತ್ತು ಭಟ್ಟರು ಸೇರಿ ನಿರ್ದೇಶಿಸಿದ ಮೊದಲ ಚಿತ್ರ `ಮಣಿ'ಯಲ್ಲಿ ಮೇಕಪ್‌ನ ಹೊಣೆ ಹೊತ್ತಿದ್ದೆ. `ರಂಗ ಎಸ್‌ಎಸ್‌ಎಲ್‌ಸಿ' ಚಿತ್ರದ ನಂತರ ಮುಂಗಾರು ಮಳೆ', `ದುನಿಯಾ', `ಜಾಕಿ', `ಮನಸಾರೆ', `ಮೌನಿ', `ಗುಬ್ಬಚ್ಚಿಗಳು', `ಶಿಕಾರಿ', `ಪುಟ್ಟಕ್ಕನ ಹೈವೇ', `ಪಂಚರಂಗಿ', `ಇಂತಿ ನಿನ್ನ ಪ್ರೀತಿಯ' ಹೀಗೆ ಮನಸ್ಸಿನಲ್ಲಿ ಉಳಿಯುವ ಹಲವು ಚಿತ್ರಗಳ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಪ್ರಕಾಶ್ ಬೆಳವಾಡಿ ನಿರ್ದೇಶನದ ಇಂಗ್ಲಿಷ್ ಸಿನಿಮಾದಲ್ಲೂ ಕೆಲಸ ಮಾಡಿದ್ದೇನೆ. ಪ್ರಕಾಶ್ ರೈ ಎಂಬ ಮಹಾನ್ ಕಲಾವಿದನ ಮೊದಲ ನಿರ್ದೇಶನದ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು ಅದ್ಭುತ ಅನುಭವ.`ಬೆನಕ' ತಂಡದೊಂದಿಗೆ `ಜೋಕುಮಾರ ಸ್ವಾಮಿ', `ಹಯವದನ', `ಗೋಕುಲ ನಿರ್ಗಮನ' ಮುಂತಾದ ನಾಟಕಗಳಲ್ಲಿ ಕಲಾವಿದರಿಗೆ ಬಣ್ಣಹಚ್ಚಿದ್ದೇನೆ. ನಾನೂ ಬಣ್ಣ ಹಚ್ಚಿಕೊಂಡು ಹಲವು ಸಿನಿಮಾಗಳಲ್ಲಿ ಕ್ಯಾಮೆರಾ ಎದುರಿಸಿದ್ದೇನೆ. ನನ್ನಂತೆಯೇ ಕಷ್ಟಪಟ್ಟು ಬಂದ ಅನೇಕ ಹುಡುಗರನ್ನು ಬೆಳೆಸಿ ಬದುಕಿಗೊಂದು ನೆಲೆ ಒದಗಿಸಿದ ತೃಪ್ತಿ ನನಗಿದೆ.ಸಿನಿಮಾ ಎಂದರೆ ಮೋಸ ಎಂಬ ಕಲ್ಪನೆ ಜನರಲ್ಲಿದೆ. ಅದು ತಪ್ಪು. ಕೆಲವರಿಗೆ ಅಂಥ ಅನುಭವವಾಗಿರಬಹುದು. ಇದುವರೆಗಿನ ಅನುಭವದಲ್ಲಿ ಒಬ್ಬ ನಿರ್ಮಾಪಕನೂ ಒಂದು ಪೈಸೆಯಷ್ಟೂ ಹಣ ನನಗೆ ಮೋಸ ಮಾಡಿಲ್ಲ.ನನಗೆ ಮೊದಲ ಬಾರಿಗೆ ನೂರು ರೂ ಸಂಬಳ ಬಂದ ದಿನ ಅದೇ ಮೈಸೂರು ಸರ್ಕಲ್‌ನತ್ತ ಹೆಜ್ಜೆ ಹಾಕುತ್ತಿದ್ದೆ. ಇದೇ ಅಲ್ಲವೇ ನನಗೆ ಹತ್ತು-ಇಪ್ಪತ್ತು ಪೈಸೆಗಳನ್ನು ನೀಡಿ ಅಂದು ಹೊಟ್ಟೆ ತುಂಬಿಸಿದ ದಾರಿ? ಆ ಕಡೆ ಈ ಕಡೆ ಕಣ್ಣು ಹಾಯಿಸಿದಾಗ ಕಂಡದ್ದು ಸ್ಮಶಾನ. ಶವದ ಮೇಲೆ ಎಸೆದಿದ್ದ ಹಣ ಅಂದು ನನ್ನ ಉದರ ಪೋಷಿಸಿತ್ತು. ಈಗ ಇದೆಲ್ಲಾ ಸವಾಲುಗಳನ್ನು ಮೀರಿ ಬೆಳೆದಿದ್ದೇನೆ. ಆದರೂ ಆ ಹತ್ತು ಪೈಸೆಯ ಹೊಳಪು ಕಣ್ಣಮುಂದಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.