`ಕಾಡುಬೆಕ್ಕು ಕಾನನ ಹೊಕ್ಕಂತೆ ಚಿತ್ರ ನಿರ್ದೇಶಿಸಿದೆ'

7
`ಸ್ವಾತಿಮುತ್ಯಂ' ನಿರ್ದೇಶಕ ಕೆ. ವಿಶ್ವನಾಥ್ ಅಂತರಾಳ

`ಕಾಡುಬೆಕ್ಕು ಕಾನನ ಹೊಕ್ಕಂತೆ ಚಿತ್ರ ನಿರ್ದೇಶಿಸಿದೆ'

Published:
Updated:
`ಕಾಡುಬೆಕ್ಕು ಕಾನನ ಹೊಕ್ಕಂತೆ ಚಿತ್ರ ನಿರ್ದೇಶಿಸಿದೆ'

ಬೆಂಗಳೂರು: `ನಾನು ನಿರ್ದೇಶಿಸಿದ ಚಿತ್ರಗಳು ಯಾವುದೋ ಪುಸ್ತಕ, ಕತೆಗಳಿಂದ ಪ್ರೇರಣೆ ಪಡೆಯಲಿಲ್ಲ. ಅವೆಲ್ಲ ನನ್ನ ಕ್ಷುಲ್ಲಕ ಆಲೋಚನೆಗಳ ಫಲ' ಎನ್ನುತ್ತ ಮಾತಿಗಿಳಿದರು ಕಾಸಿನಾಥುನಿ ವಿಶ್ವನಾಥ್.ನಗರದಲ್ಲಿ ನಡೆಯುತ್ತಿರುವ ಐದನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಮುಖ ಆಕರ್ಷಣೆ ಅವರು. `ಶ್ರುತಿ ಲಯಲು', `ಸ್ವಾತಿಮುತ್ಯಂ', `ಶಂಕರಾಭರಣಂ', `ಸಾಗರ ಸಂಗಮಂ', `ಜೀವನ ಜ್ಯೋತಿ', `ಓ ಸೀತ ಕಥ'ದಂತಹ ಸದಭಿರುಚಿಯ ತೆಲುಗು ಚಲನಚಿತ್ರಗಳನ್ನು ನೀಡುವ ಮೂಲಕ ಭಾರತೀಯ ಚಿತ್ರರಂಗದ ಮತ್ತೊಂದು ಮಗ್ಗುಲನ್ನು ತೋರಿಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. `ಸ್ವಾತಿಮುತ್ಯಂ' 1986ರಲ್ಲಿ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದದ್ದು ವಿಶೇಷ.ಸಂಗೀತವೇ ಪ್ರಧಾನವಾಗಿರುವ ಅವರ ಚಿತ್ರಗಳತ್ತ ಪತ್ರಕರ್ತರ ಮಾತು ಹೊರಳಿತು. ಅವರ ಬಹುತೇಕ ಚಿತ್ರಗಳಿಗೆ ಗೇಯಗುಣವಿದೆ. ಅದರಲ್ಲಿಯೂ ತೆಲುಗು ಸೀಮೆಯ ಘಮ ಹೆಚ್ಚಿದೆ. `ಶಂಕರಾಭರಣಂ' ಚಿತ್ರದ ಬಳಿಕ ಅವರು ಸಂಗೀತಕ್ಕೆ ಹೆಚ್ಚು ಮಹತ್ವ ನೀಡಿದರಂತೆ. ಸಾಧನೆಯ ಮುಕುಟವೇರಿದ್ದು ಹೇಗೆ ಎಂಬ ಪ್ರಶ್ನೆಗೆ ಮಾತ್ರ ಅವರು ನೀಡಿದ ಉತ್ತರ ಭಿನ್ನವಾಗಿತ್ತು. `ಕಾಡು ಬೆಕ್ಕು ಕಾನನ ಹೊಕ್ಕಂತೆ ಮನಸ್ಸಿಗೆ ತೋಚಿದ್ದನ್ನು ಮಾಡುತ್ತಾ ಹೋದೆ. ಕತೆಗಳನ್ನು ಹೆಣೆದದ್ದು ಅದೇ ಬಗೆಯಲ್ಲಿ' ಎಂದರು.ಅವರು ಕತೆ ರೂಪಿಸುವುದು ಕೂಡ ಕುತೂಹಲಕರ ರೀತಿಯಲ್ಲಿ. ಮೊದಲು ಸುದ್ದಿವಾಚಕರು ಹೇಳುವಂತೆ ಕತೆಯ ಸಾರಾಂಶವನ್ನು ಕುಟುಂಬ ಸದಸ್ಯರಿಗೆ ಹೇಳುತ್ತಾರೆ. ಬಳಿಕ ಒಂದಷ್ಟು ವಾರಗಳ ಕಾಲ ಸುಮ್ಮನಿದ್ದು ಬಿಡುತ್ತಾರೆ. ಅಷ್ಟು ಸಮಯದ ನಂತರವೂ ಕೇಳುಗರಿಗೆ ಕತೆ ಕಾಡಿದ್ದರೆ ನಂತರ ಅದನ್ನು ಬೆಳೆಸುತ್ತಾ ಹೋಗುತ್ತಾರೆ.ರೀಮೇಕ್‌ಗೆ ವಿರೋಧ: ರೀಮೇಕ್‌ಗಳನ್ನು ಒಪ್ಪದ ನಿರ್ದೇಶಕ ಅವರು. ಒಳ್ಳೆಯ ಸಿನಿಮಾ ಜನರ ಮೇಲೆ ಅಚ್ಚೊತ್ತಿರುತ್ತದೆ. ಅಲ್ಲಿನ ಪಾತ್ರಗಳನ್ನು ಬೇರೊಬ್ಬರು ಮಾಡಿದರೆ ಸೊಗಸು ಇರುವುದಿಲ್ಲ. ಉದಾಹರಣೆಗೆ `ಮಾಯಾಬಜಾರ್'ನ ಘಟೋತ್ಕಚನ ಪಾತ್ರಕ್ಕೆ ಆ ಪಾತ್ರ ಮಾಡಿದವರಿಗಿಂತ ಬೇರೆಯವರು ಒಗ್ಗುವುದಿಲ್ಲ' ಎನ್ನುವುದು ಅವರ ಬಲವಾದ ನಂಬಿಕೆ.ವಿಶ್ವನಾಥ್ ನಟ ಕೂಡ. `ಶುಭ ಸಂಕಲ್ಪಂ', `ಪಾಂಡುರಂಗುಡು', `ನರಸಿಂಹ ನಾಯ್ಡು', `ಲಕ್ಷ್ಮೀ ನರಸಿಂಹ', `ಆಡವಾರಿ ಮಾಟಲಕು ಅರ್ಥಾಲೇ ವೇರುಲೇ' ಇತ್ಯಾದಿ ಚಿತ್ರಗಳಲ್ಲಿ ಅವರ ನಟನೆಯ ಛಾಪಿದೆ. ಆದರೆ ಅಭಿನಯ ವೃತ್ತಿಯಲ್ಲ ಕೇವಲ ಹವ್ಯಾಸವಂತೆ.ಅವರ ಪ್ರಕಾರ ತೆಲುಗಿನಲ್ಲಿ ಅಷ್ಟೊಂದು ಪೌರಾಣಿಕ ಚಿತ್ರಗಳು ಮೂಡಿಬರಲು ಕಾರಣ ಕತೆಗಾರರು. `ಆರುದ್ರ, ಸಮುದ್ರಂನಂಥ ಕತೆಗಾರರು ಹೆಣೆಯುತ್ತಿದ್ದ ಕತೆಗಳಲ್ಲಿ ಬಿಗಿಯಿತ್ತು. ಉತ್ತಮ ಸಂದೇಶ ಬೀರುತ್ತಿದ್ದ ಅಂತಹ ಚಿತ್ರಗಳಲ್ಲಿ ಅಶ್ಲೀಲತೆಯ ಲವಲೇಶವೂ ಇರುತ್ತಿರಲಿಲ್ಲ. ಪಟ್ಟು ಬಿಡದೇ ಘನತೆಯಿಂದ ಚಿತ್ರಗಳನ್ನು ತಯಾರಿಸಲಾಗುತ್ತಿತ್ತು. ಈಗೆಲ್ಲಾ ಯುವಕರಿಗೆ ಉಣಬಡಿಸುವ ಉದ್ದೇಶಕ್ಕೆ ಮಾತ್ರ ಚಿತ್ರಗಳು ತಯಾರಾಗುತ್ತಿವೆ. ಒಬ್ಬರಿಗೆ ಇಬ್ಬರು ನಾಯಕಿಯರು ಇರುತ್ತಾರೆ. ಅವರು ಕೂಡ ಆಮದು ನಟಿಯರಾಗಿರುತ್ತಾರೆ' ಎನ್ನುತ್ತ ವ್ಯಂಗ್ಯವಾಡಿದರು.ಕನ್ನಡ ಚಿತ್ರಗಳ ಆಸಕ್ತಿ: ಕನ್ನಡ ಚಿತ್ರಗಳ ಬಗ್ಗೆಯೂ ಅವರಿಗೆ ಅಪಾರ ಆಸಕ್ತಿ. ಇದಕ್ಕೆ ಕಾರಣ ಅವರ ಮೊದಲು ಶಬ್ದಗ್ರಾಹಕರಾಗಿ ಕೆಲಸ ಮಾಡುತ್ತಿದ್ದುದು. ರಾಜ್‌ಕುಮಾರ್ ಪಂಡರಿಬಾಯಿ ಮುಂತಾದ ಕಲಾವಿದರ ಬಗ್ಗೆ ಅವರಿಗೆ ಪರಿಚಯವಾಗಿದ್ದು ಆಗಲೇ ಅಂತೆ. ತಮ್ಮ ಜೀವನ ಜ್ಯೋತಿ, ಸ್ವಾತಿಮುತ್ಯಂ ಚಿತ್ರಗಳು ಕನ್ನಡಕ್ಕೆ ರೀಮೇಕ್ ಆಗಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.ಪ್ರಶಸ್ತಿಗಳ ಬಗ್ಗೆ ಅವರಿಗೆ ನಿರ್ಲಿಪ್ತ ಮನೋಭಾವ. `ಸ್ವಾತಿಮುತ್ಯಂ ಆಸ್ಕರ್ ಪಡೆಯದಿದ್ದಾಗ ಯಾವ ಬೇಸರವೂ ಆಗಲಿಲ್ಲ. ಆಸ್ಕರ್ ಮಾತ್ರವಲ್ಲ ಯಾವುದೇ ಪ್ರಶಸ್ತಿಗಳಿಗೆ ತನ್ನದೇ ಆದ ಮಾನದಂಡಗಳಿರುತ್ತವೆ. ಹಾಡು ನೃತ್ಯಗಳಿರುವ ಚಿತ್ರಗಳಿಗೆ ವಿದೇಶಿ ಪ್ರಶಸ್ತಿಗಳು ಲಭಿಸುವುದಿಲ್ಲ. ನಮ್ಮನ್ನು ನಂಬಿದ ನಿರ್ಮಾಪಕರಿಗೆ ಚಿತ್ರ ಮಾಡಬೇಕೆ ವಿನಃ ಪ್ರಶಸ್ತಿಗಾಗಿ ಅಲ್ಲ' ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry