ಶುಕ್ರವಾರ, ಏಪ್ರಿಲ್ 16, 2021
31 °C

ಕಾಡುಮೇಡಲ್ಲಿ ಜಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಡುಮೇಡಲ್ಲಿ ಜಟ್ಟ

`ಇದು ಮಲೆನಾಡಿನ ಭಾಗದ ಬುಡಕಟ್ಟು ಜನಾಂಗಗಳಲ್ಲಿ ಕಾಣಿಸುವ ಸಾಮಾನ್ಯ ಹೆಸರು. ಚಿತ್ರದ ಕಥೆಯ ಬೇರು ಅಲ್ಲಿಯೇ ಇರುವುದರಿಂದ ಪೂರಕವಾಗಿ ಆ ಹೆಸರನ್ನೇ ಇಡಲಾಗಿದೆ~. ಎಲ್ಲರ ಮನದಲ್ಲಿದ್ದ ಅನುಮಾನವನ್ನು ಆರಂಭದಲ್ಲೇ ಪರಿಹರಿಸಿದರು ನಿರ್ದೇಶಕ ಗಿರಿರಾಜ್.`ಜಟ್ಟ~ ಎನ್ನುವುದು ಅವರ ನಿರ್ದೇಶನದ ಸಿನಿಮಾ ಹೆಸರು. `ಜಟ್ಟ~ನಾಗಿ ಕಾಣಿಸಿಕೊಳ್ಳುತ್ತಿರುವವರು ನಟ ಕಿಶೋರ್. ಅವರಿಗೆ ಮತ್ತೆ ನಾಯಕನ ಪಟ್ಟವನ್ನು ಅಲಂಕರಿಸುವ ವೇದಿಕೆಯನ್ನು ಈ ಚಿತ್ರ ಒದಗಿಸಿದೆ. ಗಿರಿರಾಜ್ ಹಿಂದೆ `ನವಿಲಾದವರು~ ಎಂಬ ಸಿನಿಮಾ ಮಾಡಿದ್ದರು. ಅವರ ನಿರ್ದೇಶನದ ಇನ್ನೊಂದು ಚಿತ್ರ `ಅದ್ವೈತ~ ಬಿಡುಗಡೆಯ ಭಾಗ್ಯ ಕಂಡಿಲ್ಲ. `ಜಟ್ಟ~ದ ಬಗ್ಗೆ ಅವರಲ್ಲಿ ವಿಶೇಷ ಆಸಕ್ತಿ.ಸಿನಿಮಾ ಸಿದ್ಧ ಸೂತ್ರಗಳನ್ನು ಮುರಿದು ವಿಭಿನ್ನ ದಾಟಿಯಲ್ಲಿ ಮತ್ತು ಜನಜೀವನಕ್ಕೆ ಅತಿ ಹತ್ತಿರವಾದ ಕಥೆಯನ್ನು ಅವರು ಹೇಳುತ್ತಿದ್ದಾರಂತೆ. ಸಿನಿಮಾ ಚಿತ್ರೀಕರಣಕ್ಕಿಂತಲೂ ಅದಕ್ಕೆ ಬೇಕಾದ ಪೂರ್ವತಯಾರಿಗೇ ಹೆಚ್ಚು ಸಮಯ ಬೇಕಾಯಿತಂತೆ. ಸಾಗರ, ಹೊನ್ನಾವರ, ಗೇರುಸೊಪ್ಪೆ, ರಾಮತೀರ್ಥ ಮುಂತಾದ ಮಲೆಸೀಮೆಯ ಪ್ರದೇಶಗಳ ಕಾಡುಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಲ್ಲಿಗೆ ತೆರಳಲು ದಾರಿಗಳನ್ನೂ ಸ್ವತಃ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಅವರಿಗೆ ಎದುರಾಯಿತಂತೆ. ಕಾಡಿನಲ್ಲಿಯೇ ಕಥೆ ಹೆಚ್ಚು ಸಾಗುವುದರ ಜೊತೆಗೆ ಅಲ್ಲಿನ ಆಡು ಭಾಷೆಯನ್ನೇ ಬಳಸಿಕೊಳ್ಳಲಾಗಿದೆ ಎಂದರು ಗಿರಿರಾಜ್.ನಾಯಕಿ ದ್ವಯರಲ್ಲಿ ಒಬ್ಬರಾದ ಸುಕೃತ ಕನ್ನಡ ಚಿತ್ರರಂಗದ ಇದುವರೆಗಿನ ನಟಿಯರಲ್ಲೇ ಅತಿ `ಬೋಲ್ಡ್~ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಘೋಷಣೆಯನ್ನೂ ಅವರು ಮಾಡಿದರು. ಚಿತ್ರವಿಡೀ ಅವರು ಗೋಣಿಚೀಲವನ್ನೇ ಉಡುಗೆಯನ್ನಾಗಿ ಬಳಸಿಕೊಂಡಿದ್ದಾರಂತೆ.ನಟ ಕಿಶೋರ್‌ಗೆ ಇದು ಸವಾಲಿನ ಪಾತ್ರ ಎನಿಸಿದ್ದು ಭಾಷೆ ಮತ್ತು ಹಗಲು ರಾತ್ರಿ ಬಿಡುವಿಲ್ಲದ ಚಿತ್ರೀಕರಣಗಳಿಂದ. `ನಾನೊಂಥರಾ ಕೆಟ್ಟ ನಟ~ ಎಂದು ಆತ್ಮವಿಮರ್ಶೆ ಮಾಡಿಕೊಂಡ ಅವರು, ಪಾತ್ರ ಬಯಸಿದ್ದಂತೆ ನಟಿಸಿದ್ದೇನೆ ಎಂಬ ವಿನಯ ಪ್ರದರ್ಶಿಸಿದರು. ಅಲ್ಲದೆ ಹಗಲು ರಾತ್ರಿ ನಿದ್ದೆಗೆಟ್ಟು ಕೆಲಸ ಮಾಡುತ್ತಿದ್ದ ಇಬ್ಬರು ನಟಿಯರ ಉತ್ಸಾಹ ಅವರಿಗೆ ವಯಸ್ಸಾಗಿದೆ ಎಂಬ ನಾಚಿಕೆ ಮೂಡಿಸಿತಂತೆ.ಅರಣ್ಯಾಧಿಕಾರಿಯ ಪಾತ್ರ ಮಾಡುತ್ತಿರುವ ತಮಿಳು ನಟ ಪ್ರೇಮ್‌ಕುಮಾರ್ ಕನ್ನಡ ಕಲಿಯುವ ತವಕದಲ್ಲಿದ್ದಾರೆ. ತಮ್ಮ ಮುಂದಿನ ಚಿತ್ರದ ವೇಳೆಗೆ ಕನ್ನಡ ಕಲಿತು ಸ್ವತಃ ಡಬ್ಬಿಂಗ್ ಮಾಡುವುದಾಗಿ ಅವರು ಹೇಳಿಕೊಂಡರು.ಗಿರಿರಾಜ್ ಅವರ `ಅದ್ವೈತ~ ಚಿತ್ರದ ಬಹುತೇಕ ಸದಸ್ಯರು ಇಲ್ಲಿಯೂ ಕೈಜೋಡಿಸಿದ್ದಾರೆ. ನಟಿ ಭಾವನಾ ಕೂಡ ಅದೇ ತಂಡದವರು. ಛಾಯಾಗ್ರಾಹಕ ಕಿರಣ್, ಸಂಗೀತ ನಿರ್ದೇಶಕರಾದ ಆಶ್ಲೆ- ಅಭಿಲಾಷ್ ಸುದ್ದಿಗೋಷ್ಠಿಯಲ್ಲಿದ್ದರು.ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಹಾಡುಗಳನ್ನು ಬಾಕಿ ಉಳಿಸಿಕೊಂಡಿವೆ. ನಾಲ್ಕು ಹಾಡುಗಳಿದ್ದು, ಜಾನಪದ ಶೈಲಿಯಲ್ಲಿ ಮಟ್ಟು ಹಾಕಲಾಗಿದೆಯಂತೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.